Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH | ಸಾವಿರಾರು ಕೋಟಿ ರೂ. ಆಸ್ತಿ ಇದ್ದರೂ ಭಿಕ್ಷೆ ಬೇಡಿದ ಬಿಜೆಪಿ ಶಾಸಕ : ಕಾರಣ ಏನು ಗೊತ್ತಾ?

---Advertisement---

ಮುಂಬೈ: ಸಾಮಾನ್ಯವಾಗಿ ರಾಜಕಾರಣಿಗಳು ಅಂದರೆ ಸಾಕು, ಸುತ್ತಲೂ ಅಂಗರಕ್ಷಕರು, ಐಷಾರಾಮಿ ಕಾರುಗಳು ಮತ್ತು ಹಿಂಬಾಲಕರ ದಂಡೇ ಇರುತ್ತದೆ. ಆದರೆ ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ತಮ್ಮ ಕೋಟ್ಯಂತರ ರೂಪಾಯಿ ಆಸ್ತಿ, ಭದ್ರತೆ ಹಾಗೂ ರಾಜಕೀಯ ದರ್ಪವನ್ನು ಬದಿಗಿಟ್ಟು ಭಿಕ್ಷುಕನ ವೇಷ ಧರಿಸಿ ಬೀದಿಗೆ ಇಳಿಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಘಾಟ್‌ಕೋಪರ್ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಅವರ ಈ ವಿಶಿಷ್ಟ ಪ್ರಯೋಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಅಫಿಡವಿಟ್ ಪ್ರಕಾರ ಪರಾಗ್ ಶಾ ಅವರು ₹3,383 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವ ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬರು. ಇಂತಹ ಕುಬೇರ ಶಾಸಕ ಸಾಮಾನ್ಯ ಹರಿದ ಬಟ್ಟೆ ಧರಿಸಿ, ಮುಖಕ್ಕೆ ಮೇಕಪ್ ಹಾಕಿ ತಮ್ಮ ಗುರುತನ್ನು ಮರೆಮಾಚಿ ಘಾಟ್‌ಕೋಪರ್ ರೈಲ್ವೆ ನಿಲ್ದಾಣದ ಸುತ್ತಮುತ್ತ ಭಿಕ್ಷಾಟನೆ ಮಾಡಿದ್ದಾರೆ. ಜೈನ ಧರ್ಮದ ಪರ್ಯುಷಣ ಪರ್ವ ಮತ್ತು ಚಾತುರ್ಮಾಸದ ಅಂಗವಾಗಿ, ರಾಷ್ಟ್ರಸಂತ ನಮ್ರಮುನಿ ಮಹಾರಾಜ್ ಸಾಹೇಬ್ ಅವರ ಸಂದೇಶದಿಂದ ಪ್ರೇರೇಪಿತರಾಗಿ ಅವರು ಈ ಹೆಜ್ಜೆ ಇಟ್ಟಿದ್ದಾರೆ. ಸಮಾಜದ ಕಟ್ಟಕಡೆಯ ಬಡವರ, ನಿರ್ಗತಿಕರ ನೈಜ ಪರಿಸ್ಥಿತಿಯನ್ನು ಹತ್ತಿರದಿಂದ ಅರಿಯುವುದೇ ಈ ಪ್ರಯೋಗದ ಮುಖ್ಯ ಉದ್ದೇಶವಾಗಿತ್ತು.

ಭಿಕ್ಷುಕನ ವೇಷದಲ್ಲಿದ್ದಾಗ ಶಾಸಕರಿಗೆ ಸಮಾಜದಿಂದ ವಿಭಿನ್ನ ಅನುಭವಗಳು ಎದುರಾದವು. ಕೆಲವರು ಅವರನ್ನು ಕಣ್ಣೆತ್ತಿಯೂ ನೋಡದೆ ಸಾಗಿದರೆ, ಇನ್ನು ಕೆಲವರು ಕನಿಕರದಿಂದ ಕೆಲ ನಾಣ್ಯಗಳನ್ನು ಇಲ್ಲವೇ ಆಹಾರವನ್ನು ನೀಡಿದರು. ಮತ್ತೆ ಕೆಲವರು ಆ ಸ್ಥಳದಿಂದ ತಕ್ಷಣ ತೊಲಗುವಂತೆ ಗದರಿಸಿದರು. ಆದರೆ ಕೆಲ ಗಂಟೆಗಳ ನಂತರ ಶಾಸಕರು ಮೇಕಪ್ ತೆಗೆದು, ತಮ್ಮ ಎಂದಿನ ಬಿಳಿ ಖಾದಿ ವಸ್ತ್ರ, ದುಬಾರಿ ಕಾರುಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಅದೇ ಸ್ಥಳಕ್ಕೆ ಬಂದಾಗ ಸಂಪೂರ್ಣ ಚಿತ್ರಣವೇ ಬದಲಾಯಿತು. ಸ್ವಲ್ಪ ಸಮಯದ ಹಿಂದಷ್ಟೇ ಕಡೆಗಣಿಸಿದ್ದ ಜನರೇ ಅವರ ಬಳಿ ಬಂದು ಕೈಮುಗಿದು ಸತ್ಕರಿಸಲು ಶುರುಮಾಡಿದರು.

ಈ ಘಟನೆಯ ಕುರಿತು ಮಾತನಾಡಿರುವ ಪರಾಗ್ ಶಾ, ಪರಿಸ್ಥಿತಿ ಚೆನ್ನಾಗಿದ್ದಾಗ ಕೈಗಳು ದಾನ ಮಾಡುತ್ತವೆ, ಅದೇ ಪರಿಸ್ಥಿತಿ ಕೈಕೊಟ್ಟಾಗ ಅದೇ ಕೈಗಳು ಅನ್ನಕ್ಕಾಗಿ ಅಂಗಲಾಚಬೇಕಾಗುತ್ತದೆ; ಸಂಪತ್ತು ಮತ್ತು ಅಧಿಕಾರ ಶಾಶ್ವತವಲ್ಲ, ಮಾನವೀಯತೆಯೇ ಮುಖ್ಯ ಎಂಬ ಸಂದೇಶವನ್ನು ನೀಡಿದ್ದಾರೆ. ಕೇವಲ ಒಂದು ದಿನದ ಅನುಭವದಿಂದ ಬಡತನದ ಸಂಪೂರ್ಣ ನೋವು ಅಳೆಯಲು ಸಾಧ್ಯವಿಲ್ಲ ಎಂಬ ಟೀಕೆಗಳ ನಡುವೆಯೂ, ಸಾವಿರಾರು ಕೋಟಿ ಒಡೆಯನೊಬ್ಬ ಸಮಾಜದ ಮುಖವಾಡ ಕಳಚಲು ಮಾಡಿದ ಈ ವಿಭಿನ್ನ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

 

Join WhatsApp

Join Now

Join Telegram

Join Now