ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 06 : ಜಿಲ್ಲೆಯಾದ್ಯಂತ ಸೋಮವಾರದಿಂದ ಪ್ರವಾಸ ಕೈಗೊಂಡು ಯೂತ್ ಕಾಂಗ್ರೆಸ್ನ್ನು ಶಕ್ತಿಶಾಲಿಯನ್ನಾಗಿಸುವುದಾಗಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಂ.ನಿಶ್ಚಿತ್(ಚಿಂಟು) ಇವರ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭವಿಷ್ಯದ ಪ್ರಧಾನಿ ರಾಹುಲ್ಗಾಂಧಿರವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿರುವುದು ಕಾಂಗ್ರೆಸ್ಗೆ ಬಲ ಬಂದಂತಾಗಿದೆ. ದೇಶದ ಪ್ರಧಾನಿ ನರೇಂದ್ರಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವ ಸಮೂಹವನ್ನು ವಂಚಿಸಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಐದು ಗ್ಯಾರೆಂಟಿಗಳನ್ನು ರಾಜ್ಯದ ಜನತೆಗೆ ಕೊಟ್ಟಿದೆ. ಪ್ರತಿ ವರ್ಷವೂ ರಾಜ್ಯ ಸರ್ಕಾರ ಯುವಕರ ಸಂಘಕ್ಕೆ ಹತ್ತು ಲಕ್ಷ ರೂ.ಗಳನ್ನು ನೀಡುತ್ತದೆ. ಇದನ್ನು ಬಳಸಿಕೊಂಡು ಯೂತ್ ಕಾಂಗ್ರೆಸ್ನ್ನು ಸಂಘಟಿಸುವಂತೆ ಎಂ.ನಿಶ್ಚಿತ್ಗೆ ಸೂಚಿಸಿದರು.
ರಾಜಕಾರಣ ಯಾರ ಸ್ವತ್ತಲ್ಲ. ನೀವುಗಳು ನನ್ನ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಂ.ನಿಶ್ಚಿತ್ಗೆ ನಾಯಕತ್ವದ ಗುಣವಿದೆ. ಇದರಿಂದ ಪಕ್ಷಕ್ಕೆ ಶಕ್ತಿ ಬರುತ್ತದೆಂದು ನಂಬಿದ್ದೇನೆ. ಪ್ರತಿಯೊಂದು ಮನೆಯಲ್ಲಿಯೂ ಕಾಂಗ್ರೆಸ್ ಕೊಡುಗೆಯಿದೆ ಎನ್ನುವುದನ್ನು ಯೂತ್ ಕಾಂಗ್ರೆಸ್ನವರು ಜನತೆಗೆ ತಿಳಿಸಬೇಕೆಂದು ಕಾರೆಹಳ್ಳಿ ಉಲ್ಲಾಸ್ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಹೆಚ್.ಆಂಜನೇಯ ಇವರುಗಳೆಲ್ಲಾ ಯೂತ್ ಕಾಂಗ್ರೆಸ್ನಿಂದ ಬೆಳೆದವರು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದ್ದು, ಕಾಂಗ್ರೆಸ್ ಪಕ್ಷ. ದೇಶದ ಮುಂದಿನ ಪ್ರಧಾನಿ ರಾಹುಲ್ಗಾಂಧಿಗೆ ಯೂತ್ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ. ಬಲ ಬೇಕು. ಸಂವಿಧಾನದಲ್ಲಿ ಎಲ್ಲಾ ಜಾತಿ ಧರ್ಮದವರಿಗೆ ಸಮಾನ ಅವಕಾಶವಿದೆ. ಹದಿನೆಂಟು ವರ್ಷದವರಿಗೂ ಮತದಾನದ ಹಕ್ಕು ನೀಡಿದ್ದು, ದಿ.ರಾಜೀವ್ಗಾಂಧಿ ಎನ್ನುವುದನ್ನು ಸ್ಮರಿಸಿಕೊಂಡರು.
ಹದಿನೆಂಟು ವರ್ಷ ತುಂಬಿದವರು ನಿಮ್ಮ ನಿಮ್ಮ ವಾರ್ಡ್, ಬೂತ್ಗಳಲ್ಲಿ ಮತದಾನದ ಹಕ್ಕು ಪಡೆದುಕೊಳ್ಳಿ. ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವವರ ಹೆಸರುಗಳನ್ನು ಸೇರಿಸುವುದು ನಿಮ್ಮ ಹೊಣೆ. ರಾಹುಲ್ಗಾಂಧಿ ದೇಶಕ್ಕಾಗಿ ಆರು ಸಾವಿರ ಕಿ.ಮೀ. ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ. ನೀವುಗಳು ಪಕ್ಷ, ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ ಎಂದು ಯೂತ್ ಕಾಂಗ್ರೆಸ್ನವರಿಗೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್ ಮಾತನಾಡುತ್ತ 1989 ರಲ್ಲಿ ಯೂತ್ ಕಾಂಗ್ರೆಸ್ಗೆ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದೆವು. ಮೂರನೆ ಅವಧಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿಯಿಂದ ದೇಶಕ್ಕೆ ಏನು ಲಾಭವಾಗಿಲ್ಲ. ರಾಹುಲ್ಗಾಂಧಿ ಪ್ರಧಾನ ಮಂತ್ರಿಯಾಗಬೇಕಾದರೆ ಯೂತ್ ಕಾಂಗ್ರೆಸ್ನವರು ಸಂಘಟಿತರಾಬೇಕು. ಕಾಂಗ್ರೆಸ್ ಬಡವರ ಪಕ್ಷ. ಯೂತ್ ಕಾಂಗ್ರೆಸ್ಗೆ ಅಸ್ತಿತ್ವವಿದೆ. ಎಲ್ಲಿಯಾದರೂ ಅನ್ಯಾಯ ಕಂಡು ಬಂದರೆ ಪ್ರತಿಭಟಿಸಿ. ದೇಶ, ಸಂವಿಧಾನ ಉಳಿಯಬೇಕಾಗಿರುವುದರಿಂದ ರಾಹುಲ್ಗಾಂಧಿಯನ್ನು ಪ್ರಧಾನಿಯನ್ನಾಗಿಸಿ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಲ್ಲಿ ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ನ್ನು ಬಲಪಡಿಸಲು ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಶ್ರಮಿಸುತ್ತಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯಬೇಕಾಗಿರುವುದರಿಂದ ಯೂತ್ ಕಾಂಗ್ರೆಸ್ ಈಗಿನಿಂದಲೇ ಶ್ರಮಿಸಬೇಕು. ಉತ್ತರಾಖಂಡದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗವನ್ನು ಆರ್.ಎಸ್.ಎಸ್. ಬಿಜೆಪಿ. ಮನುವಾದಿಗಳು ಶುದ್ದೀಕರಿಸಿರುವುದನ್ನು ಪ್ರತಿಯೊಬ್ಬರು ಖಂಡಿಸುವಂತೆ ಹೇಳಿದರು.
ಶ್ರೀರಾಮುಲುರವರಂತೆ ಕಾಂಗ್ರೆಸ್ನವರು ಯಾವ ಹಗರಣವನ್ನು ಎಸಗಿಲ್ಲ. ರಾಹುಲ್ಗಾಂಧಿ ಮೇಲೆ ದಾಖಲಿಸಿರುವ ಎಫ್.ಐ.ಆರ್.ವಿರುದ್ದ ಎಲ್ಲರೂ ಹೋರಾಡಬೇಕು. ಬಿಜೆಪಿ. ನಾಯಕರುಗಳು ಎಲ್ಲಿಯೇ ಬರಲಿ ಕಪ್ಪು ಭಾವುಟ ಪ್ರದರ್ಶಿಸಿ ಎಂದು ಯೂತ್ ಕಾಂಗ್ರೆಸ್ನವರಲ್ಲಿ ಕೋರಿದರು.
ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಎಂ.ನಿಶ್ಚಿತ್(ಚಿಂಟು) ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ರವರು ನನ್ನ ಮೇಲೆ ವಿಶ್ವಾಸ ನಂಬಿಕೆಯಿಟ್ಟು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದ ರೀತಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ನ್ನು ಬಲಪಡಿಸಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷವನ್ನು ಗೆಲ್ಲಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಜಿ.ವಿ.ಮಧುಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಚಾಂದ್ಪೀರ್, ಯೂತ್ ಕಾಂಗ್ರೆಸ್ನ ನಿಜಾಮುದ್ದಿನ್, ಪ್ರಶಾಂತ್, ಪವನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸುರೇಶ್ ಹಾಗೂ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.













