Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಗಳೂರು, ಮೊಳಕಾಲ್ಮೂರಿಗೆ ಭದ್ರೆ ಹರಿದ ನಂತರವೇ ಸಂಭ್ರಮ ಬಯಲು ಸೀಮೆ ಬಾಗಿನ ಸಮರ್ಪಣೆ ನಂತರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರತಿಜ್ಞೆ ಸ್ವೀಕಾರ

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 06 : ಜಗಳೂರು, ಚಳ್ಳಕೆರೆ, ಮೊಳಕಾಲ್ಮೂರಿಗೆ ಭದ್ರೆ ಹರಿದ ನಂತರವೇ ನಾವು ಸಂಭ್ರಮಿಸುತ್ತೇವೆ. ಅಲ್ಲಿಯವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಎಚ್ಚರಿಸುವ ಹೋರಾಟ ನಿರಂತರವಾಗಿರುತ್ತದೆ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರತಿಜ್ಞೆ ಸ್ವೀಕಾರ ಮಾಡಿದೆ.

ಚಿ್ಕ್ಕಮಗಳೂರು ಜಿಲ್ಲೆಯ ತರಿಕೆರೆ ಸಮೀಪದ ಶಾಂತಿ ಪುರದ ಬಳಿ ಭದ್ರೆ ಲಿಫ್ಟ್ ಪ್ರದೇಶದಲ್ಲಿ ಭಾನುವಾರ ಬಯಲು ಸೀಮೆ ಬಾಗಿನ ಸಮರ್ಪಣೆ ಮಾಡಿದ ತರುವಾಯ ಮಾತನಾಡಿದ ಮುಖಂಡರುಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ಜವಾಬ್ದಾರಿ ಅರಿತು ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಹಕ್ಕೊತ್ತಾಯ ಮಂಡಿಸಿದರು.

ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಳೂರು, ಮೊಳಕಾಲ್ಮುರು, ಚಳ್ಳಕೆರೆ ಜನ ಸಮುದಾಯದ ಸಂಕಷ್ಟ ಪರಿಸ್ಥಿತಿ ಪ್ರಧಾನವಾಗಿರಿಸಿಕೊಂಡು ಹೋರಾಟ ಕಟ್ಟಲಾಗಿತ್ತು. ಈ ಮೂರು ತಾಲೂಕುಗಳ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಸಾಗದೇ ಇರುವುದು ಆತಂಕ ತಂದಿದೆ. ಕ್ರಮಿಸಬೇಕಾದ ಹಾದಿ ದೂರವಿದೆ. ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ತುಂಬಿಸಿದಾಕ್ಷಣ ಜನ ಸಂಭ್ರಮಿಸುವುದಿಲ್ಲ. ಪ್ರಧಾನ ಉದ್ದೇಶ ಈಡೇರುವ ತನಕ ನಾವುಗಳಾರೂ ವಿರಮಿಸುವುದಿಲ್ಲವೆಂದರು.

ಭದ್ರಾ ಮೇಲ್ದಂಡೆ ಕಾಮಗಾರಿ ಸಾಗುತ್ತಿರುವ ಬಗೆ, ಅನುದಾನವಿಲ್ಲದೆ ಸೊರಗಿರುವ ಪರಿ, ಆಮೆ ನಡಿಗೆ ಪ್ರಗತಿ ಎಲ್ಲವನ್ನು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತೀರಾ ಹತ್ತಿರದಿಂದ ಗಮನಿಸುತ್ತಿದೆ. ಕಾಮಗಾರಿ ಚುರುಕಿಗೆ ಕಾಲ ಕಾಲಕ್ಕೆ ಎಚ್ಚರಿಸುತ್ತಾ ಬಂದಿದೆ. ಗೋನೂರು ಕೆರೆಗೆ ನೀರು ತರುವುದು ಆಳುವ ಸರ್ಕಾರಗಳ ಜವಾಬ್ದಾರಿಯಲ್ಲ. ಮುಂದೇನು ಎಂಬ ಬಗ್ಗೆ ಆಲೋಚಿಸಬೇಕಾಗಿದೆ. ಗುಬ್ಬಿ ಕುಡಿಯಲು ಕಾಲುವೆಯಲ್ಲಿ ನೀರು ತುಂಬಿಸುವುದ ನೀರಾವರಿ ಯೋಜನೆ ಉದ್ದೇಶವೇ ಎಂದು ಪ್ರಶ್ನಿಸಿದ ಮುಖಂಡರು, ಜನರ ಮುಂದೆ ಹುಸಿತನಗಳ ಹರಡುವ ಕೆಲಸವ ಸರ್ಕಾರಗಳು ಮಾಡಬಾರದೆಂದು ಸಲಹೆ ಮಾಡಿದ್ದಾರೆ.

 

ಕಾಮಗಾರಿ ಮುಗಿದು ಎಂಟು ವರ್ಷದ ನಂತರ ಚಿತ್ರದುರ್ಗ ಕಾಲುವೆಗೆ ಪರೀಕ್ಷಾರ್ಥ ನೀರು ಹರಿಸಲಾಗುತ್ತಿದೆ. ಈ ಒಂದು ಪ್ರಕ್ರಿಯೆಯಲ್ಲಿಯೇ ಸರ್ಕಾರಗಳ ಕಾಳಜಿ ಅರ್ಥವಾಗುತ್ತದೆ. ಪರೀಕ್ಷಾರ್ಥದ ನಂತರ ಕಾಮಗಾರಿ ಮುಗಿದಿರುವ ಪ್ರದೇಶದ ಕೆರೆಗಳಿಗೆ ನೀರು ಉಣಿಸಬೇಕು. ಭದ್ರಾ ಮೇಲ್ದಂಡೆಯಡಿ 367 ಕೆರೆಗಳ ಭರ್ತಿ ಮಾಡಬೇಕಾಗಿದೆ. ಪರೀಕ್ಷಾರ್ಥ ಹರಿಯುವಿಕೆಯಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯಡಿ 100 ಕೆರೆಗಳಿಗೆ ಮಾತ್ರ ನೀರು ಪೂರೈಕೆಯಾಗುತ್ತದೆ. ಕೆರೆಗಳಿಗೆ ನೀರು ತುಂಬಿಸಲು ಆಗಮಿಸುವ ಕಾರ್ಯಕ್ಕೆ ಚಾಲನೆ ನೀಡಲು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಮಗಾರಿ ಮುಗಿಸುವ ಸ್ಪಷ್ಟ ಭರವಸೆ ನೀಡಬೇಕು. ಬಯಲು ಸೀಮೆ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬಾರದು ಎಂದು ಸಮಿತಿ ಆಗ್ರಹಿಸಿದೆ.

 

ಬಾಗಿನ ಸಮರ್ಪಣೆ ಮಾಡಿ ಮಾತನಾಡಿದ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಳೆದ 30 ವರ್ಷಗಳಿಂದ ಅನೇಕ ಮಹನೀಯರು ಈ ನೀರಿಗಾಗಿ ನಿರಂತರ ಹೋರಾಟ ನಡೆಸಿದ್ದಾರೆ. ಇಂದು ಆ ಹೋರಾಟದ ಫಲ ದೊರೆತಿದ್ದು, ಅಗಲಿದ ಹೋರಾಟಗಾರರನ್ನು ಮೊದಲು ಸ್ಮರಿಸಬೇಕಾಗಿದೆ. ತರೀಕೆರೆ ಮತ್ತು ಹೊಸಹಳ್ಳಿ ಭಾಗದಲ್ಲಿ ಜಮೀನು ನೀಡಲು ರೈತರು ನಡೆಸಿದ್ದ ಮುಷ್ಕರದ ಸಂದರ್ಭದಲ್ಲಿ, ಅವರನ್ನು ಸಾಣೇಹಳ್ಳಿಗೆ ಕರೆಸಿ ಮನವೊಲಿಸಿ ಸಮಸ್ಯೆ ಪರಿಹರಿಸಲಾಗಿತ್ತು. ಇಷ್ಟಾದರೂ ನೀರು ಬಂದಿರುವುದು ಖುಷಿಯ ಸಂಗತಿ. ಕೇವಲ ನೀರು ಬಂದ ತಕ್ಷಣ ಜಾಗೃತಿ ಕಳೆದುಕೊಳ್ಳಬಾರದು. ಆರಂಭಶೂರತ್ವ ಬಿಟ್ಟು ಸದಾ ಜಾಗೃತರಾಗಿದ್ದರೆ ಮಾತ್ರ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ನೀರು ತಲುಪಿಸಲು ಸಾಧ್ಯ. ರೈತರ ನೆಮ್ಮದಿಯಲ್ಲೇ ನಮ್ಮ ನೆಮ್ಮದಿ ಇದೆ ಎಂದರು.

ಶಿವಮೊಗ್ಗ ಬಸವಕೇಂದ್ರದ ಶ್ರೀ ಮರುಳಸಿದ್ಧ ಸ್ವಾಮಿಗಳು ಮಾತನಾಡಿ, ಶತಮಾನಗಳ ಬರದ ಅನುಭವದ ನಂತರ ಇಂದು ಭದ್ರಾ ನದಿ ಬಯಲುಸೀಮೆಯತ್ತ ಹರಿದು ಬಂದಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದು ಒಬ್ಬಿಬ್ಬರ ಹೋರಾಟವಲ್ಲ. ಈ ಯೋಜನೆಗಾಗಿ ಶ್ರಮಿಸಿದ ಎಲ್ಲ ನಾಯಕರು ಹಾಗೂ ರೈತರ ಶ್ರಮ ಅಭಿನಂದನಾರ್ಹ. ನೀರು ನಿರಂತರವಾಗಿ ಹರಿಯಲು ರೈತರು ತಮ್ಮ ಗಟ್ಟಿ ಧ್ವನಿಯನ್ನು ಕಾಯ್ದುಕೊಳ್ಳಬೇಕು ಎಂದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಲಪತಿ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್ ಬಾಬು, ರೈತ ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್, ನಿವೃತ್ತ ಡಿವೈಎಸ್ಪಿಗಳಾದ ಮಹಾಂತರೆಡ್ಡಿ, ಸೈಯದ್ ಇಸಾಕ್, ಸ್ಕೌಟ್ ಮತ್ತು ಗೈಡ್ಸ್ ನ ಅನಂತರೆಡ್ಡಿ, ಕರವೇ ಅಧ್ಯಕ್ಷ ರಮೇಶ್, ಲಕ್ಷ್ಮಣರೆಡ್ಡಿ, ನೀಲಜ್ಜಿ ಮುರಿಗೇಂದ್ರಪ್ಪ, ಮುರಿಗೆಪ್ಪರ ಜಯಣ್ಣ, ಲೋಕೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ