ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಸೆ. 06 : ಬಸವಾದಿ ಶರಣರು ನೀಡಿದ ಕಾಯಕ, ದಾಸೋಹ ಹಾಗೂ ಸಾಹಿತ್ಯ ಸಿದ್ಧಾಂತಗಳು ಸಮಾಜಕ್ಕೆ ಮಾರ್ಗ ದರ್ಶಕವಾಗಿವೆ. ಪ್ರತಿಯೊಬ್ಬರೂ ಕಾಯಕ ಮಾಡಿ ಜೀವನ ನಡೆಸಬೇಕೆಂಬ ಸಂದೇಶವನ್ನು 12ನೇ ಶತಮಾನ ದಲ್ಲೇ ನೀಡಲಾಗಿತ್ತು. ಆದರೆ, ಇಂದಿನ 21ನೇ ಶತಮಾನದಲ್ಲಿ ನೀಡುವವರಿಗಿಂತ ಬೇಡುವವರ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದು ಸಿದ್ಧಯ್ಯನಕೋಟೆ ಮಠದ ಪೀಠಾಧಿಪತಿಗಳಾದ ಶ್ರೀ ಬಸವಲಿಂಗ ಶ್ರೀಗಳು ತಿಳಿಸಿದರು.

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ, ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘ ಅಮ್ಮಿನಗಡ ಹಾಗೂ ಬರಹವೇ ಶಕ್ತಿ ವೇದಿಕೆ ಗದಗ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಹಮ್ಮಿ ಕೊಳ್ಳ ಲಾದ ತೃತೀಯ ಸಾಹಿತ್ಯ ಸಮ್ಮೇಳನ, ಜಿಲ್ಲಾ ಘಟಕ ಉದ್ಘಾಟನೆ, ಕೃತಿ ಲೋಕಾರ್ಪಣೆ, ಕವಿಗೋಷ್ಟಿ 2026ರ ರಾಜ್ಯ ಮಟ್ಟದ ಸಾಧಕರಿಗೆ ಪ್ರಶಸ್ತಿ ಸಮಾರಂಭದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಸ್ವೀಕಾರ ಮಾಡಿ ಮಾತನಾಡಿದ ಶ್ರೀಗಳು, ಕೃಷಿ ಕಾಯಕದಲ್ಲಿ ನಿರತರಾದವರ ತನು, ಮನ ಹಾಗೂ ಭಾವ ಪರಿಶುದ್ಧವಾಗಿ ರುತ್ತದೆ ಬಸವಾದಿ ಶರಣರು ದೈವತ್ವವನ್ನು ಕಾಯಕದಲ್ಲೇ ಕಂಡುಕೊಂಡಿದ್ದರು. 12ನೇ ಶತಮಾನದಲ್ಲಿ ಯಾವು ದೇ ಆಧುನಿಕ ಸೌಲಭ್ಯಗಳಿಲ್ಲದಿದ್ದರೂ, ಅನುಭವ ಮಂಟಪದ ಪ್ರಭಾವದಿಂದಾಗಿ ದನ ಕಾಯು ವವರು, ಕುಟ್ಟುವವರು ಹಾಗೂ ಹೊಲದಲ್ಲಿ ದುಡಿಯುವ ಸಾಮಾನ್ಯ ಶರಣ-ಶರಣೆಯರು ಅದ್ಭುತವಾದ ವಚನ ಸಾಹಿತ್ಯವನ್ನು ನೀಡಿದ್ದರು. ಶರಣರಿಗಿಂತ ಶರಣೆಯರು ಒಂದು ಹೆಜ್ಜೆ ಮುಂದಿದ್ದರು ಎಂದು ಸ್ಮರಿಸಿ ಯುವ ಪೀಳಿಗೆಯು ವ್ಯಸನ ಹಾಗೂ ಮೊಬೈಲ್ ದಾಸರಾಗದೆ, ಶರಣರ ಕಾಯಕ ಸಿದ್ಧಾಂತ ಮತ್ತು ಮನೆಯ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸಾಗಬೇಕು. ಜೊತೆಗೆ ಅನ್ನದಾತ ರೈತನ ಹಿತ ಕಾಯುವುದು ಸರ್ಕಾರ ಹಾಗೂ ಇಡೀ ಸಮಾಜದ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಯುವಜನತೆ ವಿವಿಧ ವ್ಯಸನಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಮೊಬೈಲ್ ಬಳಕೆಯತಿಯಿಂದಾಗಿ ಯುವ ಸಮುದಾಯ ಹಾಳಾಗುತ್ತಿದ್ದು, ನಿರ್ದಿಷ್ಟ ವಯಸ್ಸು ಬರುವವರೆಗೆ ಮಕ್ಕಳಿಗೆ ಮೊಬೈಲ್ ನೀಡಬಾರದು `ಮನೆಯೇ ಮೊದಲ ಪಾಠಶಾಲೆ’ಯಾಗಿದ್ದು, ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಿದರೆ ಅದು ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಯುವಕರನ್ನು ಸರಿದಾರಿಗೆ ತರಲು ಕಲಾ ವೇದಿಕೆ ಹಾಗೂ ಸಂಘ-ಸಂಸ್ಥೆಗಳು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದ ಶ್ರೀಗಳು ಇಂದಿನ ಕಾಲದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳಿದ್ದರೂ, ನಾವು ಶರಣರು ತೋರಿದ ಕಾಯಕ ಮಾರ್ಗದಿಂದ ದೂರ ಸರಿಯುತ್ತಿದ್ದೇವೆ. ಪ್ರಪಂಚದಲ್ಲಿ ಬದಲಾವಣೆಯಾಗಲು ಮತ್ತು ಮುಂದಿನ ಯುವ ಪೀಳಿಗೆಗೆ ಸೂಕ್ತ ಸಂದೇಶ ನೀಡಲು ನಾವು ಈ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ನಮಗೆ ಅನ್ನ ನೀಡುವ ರೈತನ ಜೀವನ ಇಂದಿನ ಮಳೆ ಅಭಾವ ಹಾಗೂ ಬೆಳೆ ಹಾನಿಯಿಂದಾಗಿ ಕಷ್ಟದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಕ್ಷಾತೀತವಾಗಿ ರೈತರ ಹಿತ ಕಾಯಲು ಆದ್ಯತೆ ನೀಡಬೇಕು. ತಾವು ಸ್ವತಃ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಬೀಳು ಬಿದ್ದ ಜಮೀನಿನಲ್ಲಿ ಬೋರ್‍ವೆಲ್ ಕೊರೆಸಿ, ನೀರು ಉಣಿಸಿ 350 ಚೀಲ ಭತ್ತ ಬೆಳೆದಿದೆ. ಈ ಸಾಧನೆಗಾಗಿ ತಮಗೆ ಲಭಿಸಿದ ‘ರೈತ ಪ್ರಶಸ್ತಿ’ ಸೇರಿದಂತೆ ಎಲ್ಲಾ ಗೌರವಗಳನ್ನು ದೇಶದ ಸಮಸ್ತ ರೈತರಿಗೆ ಸಮರ್ಪಿಸುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಮಾತನಾಡಿ, ಪ್ರಶಸ್ತಿ ಪುರಸ್ಕೃತರಾದ ಸಿದ್ಧಯ್ಯನಕೋಟೆಯ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಅವರು ಬಸವಣ್ಣನವರ ತತ್ವಗಳನ್ನು ನಿಜವಾದ ಅರ್ಥದಲ್ಲಿ ಜೀವನದಲ್ಲಿ ಅಳವಡಿಸಿ ಕೊಂಡ ವರು. ಇಷ್ಟಲಿಂಗ ಪೂಜೆ ಹಾಗೂ ಪ್ರವಚನಗಳಿಗೆ ಮಾತ್ರ ಸೀಮಿತವಾಗದೆ, ಮಳೆಗಾಲದಲ್ಲಿ ಕೃಷಿ ಕಾಯಕ ಹಾಗೂ ಮಠಕ್ಕೆ ಬರುವ ಅತಿಥಿಗಳಿಗೆ ಸ್ವತಃ ಅಡುಗೆ ಮಾಡಿ ಪ್ರಸಾದ ಬಡಿಸುವ ಮೂಲಕ ಕಾಯಕ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ. ಮೊಳಕಾಲ್ಮೂರಿನ ಬರಡು ಪ್ರದೇಶದ ಕುಗ್ರಾಮವಾಗಿದ್ದ ಸಿದ್ಧಯ್ಯನ ಕೋಟೆಯನ್ನು ಇಂದು ಪುಣ್ಯಕ್ಷೇತ್ರವನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
ಚಿತ್ರದುರ್ಗದ ಹಳೆ ನಗರಸಭೆಯ ಮುಂಭಾಗದಲ್ಲಿ ರಾಜಾವೀರ ಮದಕರಿ ನಾಯಕರ ಬೃಹತ್ ಕಂಚಿನ ಪ್ರತಿಮೆ ನಿರ್ಮಾಣವಾಗಲು ಮಾಜಿ ನಗರಸಭಾಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ, ಹೆಚ್.ಮಂಜಪ್ಪ, ನಿರಂಜನ ಮೂರ್ತಿ ಹಾಗೂ ಹೆಚ್. ವೆಂಕಟೇಶ್ ಅವರ ಸುದೀರ್ಘ ಹೋರಾಟ ಹಾಗೂ ಪರಿಶ್ರಮ ಕಾರಣವಾಗಿದೆ. ಮೊಬೈಲ್ ಮತ್ತು ಲ್ಯಾಂಡ್‍ಲೈನ್ ಸೌಲಭ್ಯಗಳಿಲ್ಲದ ಕಾಲದಲ್ಲೂ ಸಹ ಇವರೆಲ್ಲರೂ ಶ್ರಮಿಸಿ ಈ ಸತ್ಕಾರ್ಯ ವನ್ನು ಪೂರ್ಣಗೊಳಿಸಿದ್ದರು. ಮಹಿಳಾ ಸಂಘಟನೆಗಳು ಹಾಗೂ ವೇದಿಕೆಯ ಸದಸ್ಯರು ಸ್ವಯಂ ಪ್ರೇರಿತರಾಗಿ, ಶಿಸ್ತುಬದ್ಧವಾಗಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ಸಾಧಕರನ್ನು ಗುರುತಿಸಿ ಗೌರವಿಸಿರು ವುದು ಶ್ಲಾಘನೀಯ ಎಂದರು.
ನಾಡು-ನುಡಿ, ಕಾಯಕ ಸಮಾಜ ಹಾಗೂ ಸಾಂಸ್ಕೃತಿಕ ಪರಂಪರೆಗೆ ಅಪಾರ ಕೊಡುಗೆ ನೀಡಿದ ಸಿದ್ಧಯ್ಯನ ಕೋಟೆಯ ಬಸವಲಿಂಗ ಸ್ವಾಮೀಜಿ ಹಾಗೂ ಮಾಜಿ ಅಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ ಅವರಿಗೆ ನೀಡಲಾದ ಪ್ರಶಸ್ತಿಗಳು ಈ ಪುರಸ್ಕಾರಗಳ ಘನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಕಾಯಕ ಹಾಗೂ ಸಮಾಜಸೇವೆಯೇ ನಿಜವಾದ ಧರ್ಮ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
`ರಾಜಾವೀರ ಮದಕರಿ ನಾಯಕ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ ನಾಯಕ ಸಮಾಜದ ಅಧ್ಯಕ್ಷರು ನಗರಸಭೆಯ ಮಾಜಿ ಅಧ್ಯಕ್ಷರಾದ ಹೆಚ್.ಜೆ. ಕೃಷ್ಣಮೂರ್ತಿ ಮಾತನಾಡಿ, ನಾನು ಚಿಕ್ಕಂದಿನಾದಾUಗಿನಿಂದ ಚಿತ್ರದುರ್ಗದಲ್ಲಿ ರಾಜ ವೀರ ಮದಕರಿ ನಾಯಕ ಪ್ರತಿಮೆಯನ್ನು ಮಾಡುವುದಾಗಿ ಹಲವಾರು ಜನ ಬಂದಿದ್ದರು ಆದರೆ ಅವರಿಂದ ಅದು ಸಾಧ್ಯವಾಗಿಲ್ಲ, ನಾನು ನಗರಸಭೆಯ ಸದಸ್ಯನಾದ ಮೇಲೆ ಅಧ್ಯಕ್ಷರನ್ನು ಹಿಡಿದು ಚಿತ್ರದುರ್ಗದಲ್ಲಿ ಮದಕರಿ ನಾಯಕ ಪ್ರತಿಮೆ ಆಗಲೇ ಬೇಕು ಎಂದು ಹಠ ಹಿಡಿದು ನಗರಸಭೆಯಿಂದ 15 ಲಕ್ಷ ರೂಗಳನ್ನು ಪಾವತಿಸಿ ಜನತೆಯಿಂದ ಹಣವನ್ನು ಪಡೆದು ಪ್ರತಿಮೆಯನ್ನು ನಿರ್ಮಾಣ ಮಾಡಲಾಯಿತು ಆದರೆ ಅದನ್ನು ಎಲ್ಲಿ ಕೂರಿಸಬೇಕೆಂದು ಚರ್ಚೆಗಳು ನಡೆದು ಅಂತಿಮವಾಗಿ ಆಗಿನ ಮೆಜೆಸ್ಟಿಕ್ ವೃತ್ತದಲ್ಲಿ ಮದಕರಿ ನಾಯಕರ ಪ್ರತಿಮೆಯನ್ನು ಕೊರಿಸಲು ತೀರ್ಮಾನ ಮಾಡಿ 1997ರಲ್ಲಿ ಸ್ಥಾಪನೆ ಮಾಡಲಾಯಿತು, ಇದರ ನಿರ್ಮಾಣಕ್ಕೆ ಬಹಳಷ್ಟು ಅಡೆ ತಡೆಗಳು ಬಂದವು ಅವುಗಳನ್ನು ನಿಭಾಯಿಸಿ ಪ್ರತಿಮೆಯನ್ನು ಸ್ಥಾಪನೆ ಮಾಡಲಾಯಿತೆಂದು ತಿಳಿಸಿದರು.
ಚಿತ್ರದುರ್ಗದ ಮುರುಘಾರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಸವಕುಮಾರ ಸ್ವಾಮೀಜಿ ಅವರ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿಗಳಾದ ಶ್ರೀಮತಿ ಸೌಭಾಗ್ಯ ಅಶೋಕ ಕೊಪ್ಪ ವಹಿಸಿದ್ದರು. ವಿಶ್ವ ಬಂಜಾರ ಕಲಾ ಸಾಹಿತ್ಯಕ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹೆಚ್.ವಾಯ್ ರಾಠೋಡ್, ನ್ಯಾಯಾವಾದಿಗಳಾದ ಬಿ.ಕೆ.ರಹಮತ್ತುಲ್ಲಾ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾರದ ಜೈರಾಂ ಬಿ. ಸಂಸ್ಥಾಪಕರಾದ ಶ್ರೀಮತಿ ದಯಾ ಪುತ್ತೂರ್ಕರ್, ಕಸಾಪ ಸದಸ್ಯರಾದ ಯೋಗೇಶ್ ಲಮಾಣಿ, ನಗರಸಭೆಯ ಮಾಜಿ ಅಧ್ಯಕ್ಷರಾದ ಹೆಚ್.ಮಂಜಪ್ಪ, ನಿರಂಜನ ಮೂರ್ತಿ, ಸದಸ್ಯರಾದ ವೆಂಕಟೇಶ್ ಕನ್ನಡಿಗರ ಸಾಹಿತ್ಯ ಪರಿಷತ್ತಿನ ಹುನಗುಂದ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ್ ಭಾಗವಹಿಸಿದ್ದರು.












