ಶಿವಮೊಗ್ಗ.ಆಗಸ್ಟ್.18 : ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ, ಸಮಾಜಕ್ಕೆ ಮಾನವೀಯ ಮೌಲ್ಯಗಳ ಅತ್ಯುನ್ನತ ಸಂದೇಶ ನೀಡಿದ ಎರಡು ಕುಟುಂಬಗಳಿಗೆ ಘನ ಕರ್ನಾಟಕ ಸರ್ಕಾರದ ವತಿಯಿಂದ ಪ್ರಶಂಸನೀಯ ಪತ್ರವನ್ನು ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ಗೌರವಿಸಿದರು .
ಅಕಾಲಿಕವಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖ ಮತ್ತು ಆಕ್ರಂದನದ ನಡುವೆಯೂ ಅಂಗಾಂಗ ದಾನದಂತಹ ಉದಾತ್ತ ನಿರ್ಧಾರ ತಂದು, ನಾಲ್ಕು ಜನರ ಜೀವ ಉಳಿಸಿ ಇತರರ ಕತ್ತಲೆಯ ಬದುಕಿಗೆ ಬೆಳಕಾಗಿದ್ದಾರೆ .
ಗಿರೀಶ್ (16 ವರ್ಷ) – ಶಿರಾಳಕೊಪ್ಪ

ಶಿರಾಳಕೊಪ್ಪ ಪಟ್ಟಣದ ನಿವಾಸಿಗಳಾದ ಶ್ರೀಮತಿ ರೂಪ ಮತ್ತು ಶ್ರೀ ಕುಮಾರ್ ದಂಪತಿಗಳ 16 ವರ್ಷದ ಸುಪುತ್ರ ಕು.ಗಿರೀಶ್ ರಸ್ತೆ ಅಪಘಾತಕ್ಕೆ ಈಡಾಗಿದ್ದರು . ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06.03.2026 ರಂದು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು . ಮಗನ ಅಗಲಿಕೆಯ ತೀವ್ರ ನೋವಿನಲ್ಲೂ ಪೋಷಕರು ಅಂಗಾಂಗ ದಾನಕ್ಕೆ ಮುಂದಾದರು . ಗಿರೀಶ್ ಅವರ ದೇಹದಿಂದ ಪಡೆದ ಲಿವರ್, ಎಡ ಮತ್ತು ಬಲ ಭಾಗದ ಮೂತ್ರಕೋಶಗಳು ಹಾಗೂ ಹೃದಯದ ಕವಾಟಗಳನ್ನು ಜೀವದ ಉಳಿವಿಗಾಗಿ ಹೋರಾಡುತ್ತಿದ್ದ ನಾಲ್ಕು ಜನರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ .
ಕು|| ಕೀರ್ತನ – ಭದ್ರಾವತಿ
ಭದ್ರಾವತಿಯ ಶ್ರೀಮತಿ ನೀಲಮ್ಮ ಮತ್ತು ಶ್ರೀ ಕುಮಾರ್ ದಂಪತಿಗಳ ಪುತ್ರಿ ಕು|| ಕೀರ್ತನ ಹಠಾತ್ ಸಂಭವಿಸಿದ ಆರೋಗ್ಯ ವೈಪರೀತ್ಯದಿಂದಾಗಿ ಅಕಾಲಿಕ ಮರಣ ಹೊಂದಿದರು . ಮಗಳನ್ನು ಕಳೆದುಕೊಂಡ ಅಸಹನೀಯ ದುಃಖದಲ್ಲೂ ಈ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ . ಕೀರ್ತನ ಅವರ ದೇಹದಿಂದ ಪಡೆದ ಅಂಗಾಂಗಗಳನ್ನು (ಲಿವರ್, ಎರಡೂ ಮೂತ್ರಕೋಶಗಳು ಹಾಗೂ ಹೃದಯದ ಕವಾಟಗಳು) ಯಶಸ್ವಿಯಾಗಿ ಕಸಿ ಮಾಡಿ ನಾಲ್ಕು ಜನರ ಜೀವ ಉಳಿಸಲಾಗಿದೆ .
ಸಾರ್ಥಕ ಬದುಕು: ತಮ್ಮ ಮಕ್ಕಳ ಹುಟ್ಟು ಮತ್ತು ಸಾವು ಎರಡನ್ನೂ ಸಾರ್ಥಕಗೊಳಿಸಿ, ನಾಲ್ಕು ಜೀವಗಳಿಗೆ ಹೊಸ ಆಶಾಕಿರಣವಾದ ಎರಡೂ ಕುಟುಂಬಗಳ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಸರ್ಕಾರವು ಈ ಶುಭ ದಿನದಂದು ಶ್ಲಾಘನಾ ಪತ್ರ ನೀಡಿ ಗೌರವಿಸಿದೆ
















