ದೆಹಲಿ : ಮದುವೆ ಹಾಗೂ ಸಾಲು ಸಾಲು ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆ ಸೈಬರ್ ವಂಚಕರು ಹೊಸ ಮಾದರಿಯ ಖೆಡ್ಡಾ ತೋಡಿದ್ದಾರೆ. ವಾಟ್ಸಾಪ್‌ನಲ್ಲಿ ಡಿಜಿಟಲ್ ಆಮಂತ್ರಣ ಪತ್ರಿಕೆಯ ಹೆಸರಿನಲ್ಲಿ ಅಪಾಯಕಾರಿ ಆ್ಯಪ್ (APK) ಫೈಲ್‌ಗಳನ್ನು ಕಳುಹಿಸಿ, ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಗಂಭೀರ ಪ್ರಕರಣಗಳು ಬೆಳಕಿಗೆ ಬಂದಿವೆ. ಗುಜರಾತ್ ಒಂದರಲ್ಲೇ ಹಲವರು ಇತ್ತೀಚಿನ ವಾರಗಳಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಅಹಮದಾಬಾದ್ ಸಮೀಪದ ಕಲೋಲ್ ಮೂಲದ 50 ವರ್ಷದ ಧಾನ್ಯ ವ್ಯಾಪಾರಿಯೊಬ್ಬರಿಗೆ ವಾಟ್ಸಾಪ್‌ನಲ್ಲಿ “ಇನ್ವಿಟೇಶನ್ ಕಾರ್ಡ್, ಜಿಬಿ ಇನ್‌ಸ್ಟಾಗ್ರಾಮ್ ಎಪಿಕೆ ಫೈಲ್” ಎಂಬ ಹೆಸರಿನ ಫೈಲ್ ಬಂದಿತ್ತು. ಅದನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡುತ್ತಿದ್ದಂತೆ, ಅವರ ಬ್ಯಾಂಕ್ ಖಾತೆಯಿಂದ ಎರಡು ಹಂತಗಳಲ್ಲಿ ಬರೋಬ್ಬರಿ 6.18 ಲಕ್ಷ ರೂಪಾಯಿ ಲಪಟಾಯಿಸಲಾಗಿದೆ.
ಇದೇ ಮಾದರಿಯಲ್ಲಿ ಅಹಮದಾಬಾದ್‌ನ ಎಲೆಕ್ಟ್ರಿಷಿಯನ್ ಒಬ್ಬರು ತಮ್ಮ ಸ್ನೇಹಿತನ ನಂಬರ್‌ನಿಂದಲೇ ಬಂದ ಮದುವೆ ಆಮಂತ್ರಣದ ಎಪಿಕೆ ಫೈಲ್ ತೆರೆದು 1.51 ಲಕ್ಷ ರೂಪಾಯಿ ಹಾಗೂ ಮತ್ತೊಂದು ಪ್ರಕರಣದಲ್ಲಿ 74 ವರ್ಷದ ವೃದ್ಧರೊಬ್ಬರು ಯುಪಿಐ ವಹಿವಾಟುಗಳ ಮೂಲಕ ಬರೋಬ್ಬರಿ 15.5 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಎಪಿಕೆ (APK) ಎಂಬುದು ಆಂಡ್ರಾಯ್ಡ್ ಫೋನ್‌ಗಳಲ್ಲಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಬಳಸುವ ಫೈಲ್ ಮಾದರಿಯಾಗಿದೆ. ಸಾಮಾನ್ಯ ಆಮಂತ್ರಣ ಪತ್ರಿಕೆಗಳು ಫೋಟೋ ಅಥವಾ ಪಿಡಿಎಫ್ ರೂಪದಲ್ಲಿರುತ್ತವೆ. ಆದರೆ ಈ ಎಪಿಕೆ ಫೈಲ್ ಕ್ಲಿಕ್ ಮಾಡಿದರೆ, ಅದು ಬಳಕೆದಾರರ ಗಮನಕ್ಕೆ ಬಾರದಂತೆ ಮೊಬೈಲ್‌ನಲ್ಲಿ ಅಪಾಯಕಾರಿ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುತ್ತದೆ. ಒಮ್ಮೆ ಈ ಮಾಲ್‌ವೇರ್ ಫೋನ್ ಸೇರಿದರೆ, ಬ್ಯಾಂಕಿಂಗ್ ಒಟಿಪಿ ಸಂದೇಶಗಳನ್ನು ಕದ್ದು ಓದುವುದು, ಸಂಪೂರ್ಣ ಮೊಬೈಲ್ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಮತ್ತು ರಹಸ್ಯವಾಗಿ ಹಣ ವರ್ಗಾವಣೆ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಸ್ವಯಂಚಾಲಿತವಾಗಿ ಇದೇ ನಕಲಿ ಫೈಲ್ ಕಳುಹಿಸಿ ಆಪ್ತರನ್ನೂ ಬಲೆಗೆ ಬೀಳಿಸುತ್ತದೆ.
ನಿಜವಾದ ಆಮಂತ್ರಣಗಳು ಚಿತ್ರ, ವಿಡಿಯೋ ಅಥವಾ ಪಿಡಿಎಫ್ ರೂಪದಲ್ಲಿರುತ್ತವೆ. ಯಾವುದೇ ಫೈಲ್ ಹೆಸರಿನ ಕೊನೆಯಲ್ಲಿ ‘.apk’ ಎಂದಿದ್ದರೆ ಅದು ಆಮಂತ್ರಣವಲ್ಲ, ಅಪಾಯಕಾರಿ ಆ್ಯಪ್ ಫೈಲ್ ಎಂಬುದನ್ನು ನೆನಪಿನಲ್ಲಿಡಬೇಕು. ಆಪ್ತರ ನಂಬರ್‌ನಿಂದಲೇ ಸಂದೇಶ ಬಂದರೂ ಅದು ಅನಿರೀಕ್ಷಿತ ಎಂದೆನಿಸಿದರೆ, ಫೈಲ್ ತೆರೆಯುವ ಮುನ್ನ ಅವರಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳುವುದು ಸೂಕ್ತ. ಜೊತೆಗೆ ಜಿಬಿ ವಾಟ್ಸಾಪ್ ಅಥವಾ ಜಿಬಿ ಇನ್‌ಸ್ಟಾಗ್ರಾಮ್‌ನಂತಹ ಅನಧಿಕೃತ ಮೋಡ್ ಆ್ಯಪ್‌ಗಳಿಂದ ಸದಾ ದೂರವಿರಬೇಕು.
ಸುರಕ್ಷತೆಯ ದೃಷ್ಟಿಯಿಂದ ಗೂಗಲ್ ಪ್ಲೇ ಸ್ಟೋರ್‌ನಂತಹ ಅಧಿಕೃತ ಮೂಲಗಳಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಕು. ಫೋನ್ ಸೆಟ್ಟಿಂಗ್ಸ್‌ನಲ್ಲಿ ಅಪರಿಚಿತ ಮೂಲಗಳಿಂದ ಆ್ಯಪ್ ಇನ್‌ಸ್ಟಾಲ್ ಮಾಡುವ ಆಯ್ಕೆಯನ್ನು ಆಫ್ ಇಡಬೇಕು ಮತ್ತು ವಾಟ್ಸಾಪ್‌ನಲ್ಲಿ ಆಟೋ-ಡೌನ್‌ಲೋಡ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವುದು ಉತ್ತಮ. ಒಂದು ವೇಳೆ ಅಪ್ಪಿತಪ್ಪಿ ಇಂತಹ ಫೈಲ್ ಡೌನ್‌ಲೋಡ್ ಆಗಿದ್ದರೆ, ತಕ್ಷಣವೇ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ, ಬ್ಯಾಂಕ್‌ಗೆ ಕರೆ ಮಾಡಿ ಖಾತೆ ಹಾಗೂ ಕಾರ್ಡ್‌ಗಳನ್ನು ಬ್ಲಾಕ್ ಮಾಡಿಸಬೇಕು. ನಂತರ 1930 ಸಹಾಯವಾಣಿ ಅಥವಾ cybercrime.gov.in ಪೋರ್ಟಲ್ ಮೂಲಕ ಸೈಬರ್ ಪೊಲೀಸರಿಗೆ ದೂರು ನೀಡಿ, ಮೊಬೈಲ್ ಅನ್ನು ಸಂಪೂರ್ಣವಾಗಿ ಫ್ಯಾಕ್ಟರಿ ರೀಸೆಟ್ ಮಾಡಬೇಕು.











