ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 28 : ಓದುವ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಬಡತನವನ್ನು ನೆಪವಾಗಿಟ್ಟುಕೊಂಡು ಮಕ್ಕಳನ್ನು ಕೆಲಸಕ್ಕೆ ಕಳಿಸಬಾರದೆಂದು ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ ಪೋಷಕರುಗಳಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಗ್ರಾಮ ಪಂಚಾಯಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಅನ್ನೆಹಾಳ್‍ನ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ತಳಮಟ್ಟದಲ್ಲಿ ನ್ಯಾಯದ ಅರಿವು ಮಾಹಿತಿ ಮತ್ತು ಪಾರದರ್ಶಕತೆಯ ಉಪ ಕ್ರಮ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಮಕ್ಕಳ ರಕ್ಷಣೆಗಾಗಿಯೇ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರವೆಸಗಿದರೆ ಪೋಕ್ಸೊ ಕಾಯಿದೆಯಡಿ ಕಠಿಣ ಶಿಕ್ಷೆ ವಿಧಿಸಲಾಗುವುದು. ಎಲ್ಲಾ ರಂಗಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವಿದೆ. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು. ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ನೀಡಿದರೆ ಹಿಂಜರಿಕೆಯಿಲ್ಲದೆ ದೂರು ನೀಡಿ ರಕ್ಷಣೆ ಪಡೆದುಕೊಳ್ಳಿ. ಅಪರಿಚಿತರೊಂದಿಗೆ ಸಲುಗೆಯಿಂದ ವರ್ತಿಸುವುದು ಅಪಾಯಕಾರಿ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಶಿಕ್ಷಣದ ಕಡೆ ಹೆಚ್ಚಿನ ಕಾಳಜಿ ವಹಿಸಿ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೆಣ್ಣು ಮಕ್ಕಳಿಗೆ ಕರೆ ನೀಡಿದರು.
ನ್ಯಾಯದಿಂದ ಯಾರು ವಂಚಿತರಾಗಬಾರದೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುತ್ತದೆ. ಶುಲ್ಕ ನೀಡಿ ವಕೀಲರುಗಳನ್ನು ನೇಮಿಸಿಕೊಳ್ಳಲು ಆಗದವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಯೋಜನ ಪಡೆಯಬಹುದೆಂದು ಹೆಚ್.ಅಣ್ಣಪ್ಪಸ್ವಾಮಿ ವಿನಂತಿಸಿದರು.
ಕ್ಲಸ್ಟರ್ ಆರೋಗ್ಯಾಧಿಕಾರಿ ಸುಧಾಕರ ಮಾತನಾಡಿ ಧೂಮಪಾನ, ಮದ್ಯಪಾನ, ಡ್ರಗ್ಸ್, ಗುಟ್ಕ, ಪಾನ್‍ಪರಾಗ್‍ನಂತಹ ದುರಭ್ಯಾಸಗಳಿಗೆ ಬಲಿಯಾದರೆ ಜೀವನ ಹಾಳಾಗುತ್ತದೆ. ಶಾಲಾ-ಕಾಲೇಜುಗಳ ಸುತ್ತಮುತ್ತ ಗುಟ್ಕಾ, ಪಾನ್‍ಪರಾಗ್‍ನಂತ ವಸ್ತುಗಳನ್ನು ಮಾರಾಟ ಮಾಡಬಾರದೆಂಬ ನಿಯಮವಿದೆ. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆ ಇಲ್ಲ. ಹಾಗಾಗಿ ದುಶ್ಚಟಗಳಿಂದ ದೂರವಿರಬೇಕೆಂದು ಮಕ್ಕಳಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹನುಮಂತರಾಜು ಅಧ್ಯಕ್ಷತೆ ವಹಿಸಿದ್ದರು. ಅನ್ನೆಹಾಳ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಕಾರ್ಯದರ್ಶಿ ಶಿವಪ್ರಸಾದ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.











