ಐಚಿ-ನಗೋಯಾ : ಏಷ್ಯನ್ ಗೇಮ್ಸ್ 2026ರಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ಒಟ್ಟು 85 ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಅಭಿಯಾನವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ. ಭಾರತವು 21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚಿನ ಪದಕಗಳನ್ನು ಗೆದ್ದು ಬೀಗಿದೆ.
ಕೂಟದ ಕೊನೆಯ ದಿನದಂದು ಭಾರತದ ಪಾಲಿಗೆ ಚಿನ್ನದ ಬೇಟೆಯೇ ನಡೆಯಿತು. ಹಾಕಿ, ಕ್ರಿಕೆಟ್, ಕುಸ್ತಿ, ಬಿಲ್ಲುಗಾರಿಕೆ ಮತ್ತು ಗಾಲ್ಫ್ ಕ್ರೀಡೆಗಳಲ್ಲಿ ಭಾರತ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಉಜ್ಬೇಕಿಸ್ತಾನ್ ತಂಡವನ್ನು ಹಿಂದಿಕ್ಕಿ ಅಗ್ರ ನಾಲ್ಕರಲ್ಲಿ ಸ್ಥಾನ ಭದ್ರಪಡಿಸಿಕೊಂಡಿತು.
ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಮಣಿಸಿ ಚಿನ್ನ:
ಅತ್ಯಂತ ಕುತೂಹಲ ಕೆರಳಿಸಿದ್ದ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸಿ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್‌ಗೆ 211 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನವನ್ನು 192/6 ರನ್‌ಗಳಿಗೆ ಕಟ್ಟಿಹಾಕಿ ಭಾರತ ಐತಿಹಾಸಿಕ ಜಯ ದಾಖಲಿಸಿತು.
🚨IT’S OFFICIAL NOW, FOLKS!
INDIAN TEAM HAS FINISHED 4TH IN THE MEDAL TALLY AT THE ASIAN GAMES 2026!
21 GOLD 🥇 27 SILVER 🥈 37 BRONZE
Total – 85 Medals 🎖️
Uzbekistan finished 9th today in their last event – Equestrian (Individual Jumping). https://t.co/sqlQsShgcS
— The Khel India (@TheKhelIndia) October 4, 2026
ಹಾಕಿಯಲ್ಲಿ ಮಲೇಷ್ಯಾ ವಿರುದ್ಧ ಭರ್ಜರಿ ಜಯ, ಒಲಿಂಪಿಕ್ಸ್‌ಗೆ ಅರ್ಹತೆ:
ಪುರುಷರ ಹಾಕಿಯಲ್ಲೂ ಪ್ರಾಬಲ್ಯ ಮುಂದುವರಿಸಿದ ಭಾರತ, ಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ 5-1 ಗೋಲುಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಐದನೇ ಬಾರಿಗೆ ಹಾಕಿ ಚಿನ್ನ ಗೆಲ್ಲುವುದರ ಜೊತೆಗೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನೂ ಗಿಟ್ಟಿಸಿಕೊಂಡಿತು.
ಇತಿಹಾಸ ಸೃಷ್ಟಿಸಿದ ಕುಮ್‌ಕುಮ್, ಪ್ರಣವಿ ಮತ್ತು ಅಮನ್:
ಕುಸ್ತಿಪಟು ಅಮನ್ ಸೆಹ್ರಾವತ್, ಬಿಲ್ಲುಗಾರಿಕೆ ಪಟು ಕುಮ್‌ಕುಮ್ ಮೊಹೋದ್ ಹಾಗೂ ಗಾಲ್ಫರ್ ಪ್ರಣವಿ ಅರಸ್ ಕೊನೆಯ ದಿನ ಭಾರತಕ್ಕೆ ಬಂಗಾರದ ಪದಕ ತಂದುಕೊಟ್ಟರು. ಕುಮ್‌ಕುಮ್ ಏಷ್ಯನ್ ಗೇಮ್ಸ್‌ನ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಪ್ರಣವಿ ಅರಸ್ ಗಾಲ್ಫ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮಾಡಿದರು.














