ಬೆಂಗಳೂರು: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸೂಕ್ತ ರೀತಿಯಲ್ಲಿ ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ರಾಜ್ಯದ್ಯಂತ ‘ಪ್ರಜಾಸೇವಾ ಆಂದೋಲನ’ ಸಭೆಗಳನ್ನು ಆಯೋಜಿಸಲು ಮಾರ್ಗದರ್ಶಿ সূಚಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಪ್ರಜಾಸೇವಾ) ಸುತ್ತೋಲೆ ಹೊರಡಿಸಿದೆ.
ಪ್ರತಿ ತಿಂಗಳ ಎಲ್ಲಾ ಶನಿವಾರಗಳಂದು (2ನೇ ಹಾಗೂ 4ನೇ ಶನಿವಾರ ಸೇರಿದಂತೆ) ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಡ್ಡಾಯವಾಗಿ ಸಭೆಗಳನ್ನು ನಡೆಸಲಾಗುವುದು.

1ನೇ ಮತ್ತು 3ನೇ ಶನಿವಾರ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಹಾಗೂ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದಲ್ಲಿ ಆಯೋಜನೆ.

2ನೇ ಮತ್ತು 4ನೇ ಶನಿವಾರ: ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು/ಹೋಬಳಿ ಮಟ್ಟದ ಸಭೆಗಳು.
ಅಧಿಕಾರಿಗಳ ಉಪಸ್ಥಿತಿ: ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಿಇಒ ಹಾಗೂ ತಾಲೂಕು/ಹೋಬಳಿ ಮಟ್ಟದ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವುದು ಕಡ್ಡಾಯ.
ಪೂರ್ವ ಸಿದ್ಧತೆ: ಸಭೆಗೆ 15 ದಿನಗಳ ಮುಂಚಿತವಾಗಿ ಕಂದಾಯ ಸಿಬ್ಬಂದಿ ಮನೆ-ಮನೆಗೆ ತೆರಳಿ ಸಾರ್ವಜನಿಕರಿಗೆ ಮುದ್ರಿತ ಅರ್ಜಿ ನಮೂನೆ ಮತ್ತು ಮಾಹಿತಿ ತಲುಪಿಸಲಿದ್ದಾರೆ.
ಆನ್ಲೈನ್ ಪೋರ್ಟಲ್: ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಸ್ಥಳದಲ್ಲೇ ipgrs.karnataka.gov.in ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ, ಸ್ವೀಕೃತಿ ಸಂಖ್ಯೆಯನ್ನು (Acknowledgement) ಸಾರ್ವಜನಿಕರಿಗೆ ನೀಡಲಾಗುತ್ತದೆ.
ಅನುದಾನ: ತಾಲೂಕು ಮಟ್ಟದ ಸಭೆಗಳ ನಿರ್ವಹಣೆಗೆ ₹5 ಲಕ್ಷ, ಇತರ ತಾಲೂಕು ಮಟ್ಟದ ಸಭೆಗೆ ₹1 ಲಕ್ಷ ಹಾಗೂ ಹೋಬಳಿ ಮಟ್ಟದ ಸಭೆಗೆ ₹50,000 ಅನುದಾನ ಬಿಡುಗಡೆ ಮಾಡಲಾಗುವುದು.
ಮೇಲ್ವಿಚಾರಣೆ ಹಾಗೂ ಪರಿಶೀಲನೆ:
ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಅರ್ಜಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡದ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.













