ದೆಹಲಿ.ಆಗಸ್ಟ್ 7: ಯುಪಿಐ (UPI) ವಹಿವಾಟುಗಳ ಮೇಲಿನ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಕುರಿತು ಎದ್ದಿರುವ ವಿವಾದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. ಯುಪಿಐ ಮೇಲಿನ ಯಾವುದೇ ಸಂಭಾವ್ಯ ಎಂಡಿಆರ್ ಶುಲ್ಕದ ಹೊರೆಯು ಕೇವಲ ವ್ಯಾಪಾರಿಗಳ ಮೇಲಷ್ಟೇ ಬೀಳಲಿದ್ದು, ಸಾಮಾನ್ಯ ಗ್ರಾಹಕರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬ್ಯಾಂಕುಗಳು ಹಾಗೂ ಫಿನ್‌ಟೆಕ್ ಕಂಪನಿಗಳು ಸುಧಾರಿತ ತಂತ್ರಜ್ಞಾನ, ಡಿಜಿಟಲ್ ಮೂಲಸೌಕರ್ಯ ಮತ್ತು ಭದ್ರತಾ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಲು ಇದು ನೆರವಾಗಲಿದ್ದು, ಅಂತಿಮವಾಗಿ ಇದು ಬಳಕೆದಾರರಿಗೇ ಅನುಕೂಲವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತೆರಿಗೆ ಮತ್ತು ಇತರ ಕಾಯ್ದೆಗಳ (ತಿದ್ದುಪಡಿ) ವಿಧೇಯಕ, 2026 ಸಂಸತ್ತಿನಲ್ಲಿ ಅಂಗೀಕಾರಗೊಂಡ ನಂತರ ಎಂಡಿಆರ್ ಜಾರಿಯ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಎಂಡಿಆರ್ ಅನುಷ್ಠಾನಗೊಳಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಎನ್‌ಪಿಸಿಐ (NPCI) ನೇತೃತ್ವದ ಯುಪಿಐ ಸ್ಟೀರಿಂಗ್ ಕಮಿಟಿಯು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಸಂಸತ್ತಿನಲ್ಲಿ ವಿಧೇಯಕ ಮಂಡನೆ ವೇಳೆ ಪ್ರತಿಪಕ್ಷಗಳು ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರೆ ಈ ಎಲ್ಲಾ ವಿಷಯಗಳ ಬಗ್ಗೆ ಉಭಯ ಸದನಗಳಲ್ಲಿ ವಿವರವಾದ ಚರ್ಚೆ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.

ಹೊಸ ತಿದ್ದುಪಡಿ ವಿಧೇಯಕವು ಪ್ರಸ್ತುತ ಇರುವ ಉಚಿತ ಯುಪಿಐ ವ್ಯವಸ್ಥೆಯನ್ನು ರದ್ದುಗೊಳಿಸಿ, ಭವಿಷ್ಯದಲ್ಲಿ ಡಿಜಿಟಲ್ ಪಾವತಿಗಳ ಮೇಲೆ ಎಂಡಿಆರ್ ಹೇರಲು ಹಾದಿ ಮಾಡಿಕೊಡುತ್ತದೆ ಮತ್ತು ಇದರಿಂದ ಸಾಮಾನ್ಯ ಜನರಿಗೆ ಹೊರೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದರು. ಅಲ್ಲದೆ ಆರ್‌ಬಿಐ ಬಳಿ ಸಾಕಷ್ಟು ಪ್ರಮಾಣದ ಜಮಾ ಹಣವಿರುವುದರಿಂದ ಯುಪಿಐ ನಿರ್ವಹಣೆಗೆ ಎಂಡಿಆರ್ ಅಗತ್ಯವಿಲ್ಲ ಹಾಗೂ ಅಮೆರಿಕದ ಯುಎಸ್‌ಟಿಆರ್ (USTR) ವರದಿ ಮತ್ತು ಒತ್ತಡಕ್ಕೆ ಮಣಿದು ಸರ್ಕಾರ ಈ ತಿದ್ದುಪಡಿ ತರುತ್ತಿದೆ ಎಂದು ದೂರಿದ್ದರು. ಆದರೆ, ಈ ಆರೋಪಗಳನ್ನು ತಿರಸ್ಕರಿಸಿರುವ ಸರ್ಕಾರ, ನಿಗದಿತ ಕಾನೂನು ಪ್ರಕ್ರಿಯೆಗಳ ಮೂಲಕವೇ ಈ ವಿಷಯದಲ್ಲಿ ಮುಂದುವರಿಯಲಾಗುವುದು ಎಂದು ಹೇಳಿದೆ.










