ಬೆಂಗಳೂರು.ಆಗಸ್ಟ್.7: ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಅಡಿಯಲ್ಲಿ 40 ವರ್ಷ ಮೇಲ್ಪಟ್ಟ ಎಲ್ಲಾ ಸರ್ಕಾರಿ ನೌಕರರಿಗೆ ವಾರ್ಷಿಕ ವೈದ್ಯಕೀಯ ತಪಾಸಣೆ (Annual Health Checkup) ಸೌಲಭ್ಯವನ್ನು ಒದಗಿಸಲು ಕ್ರಮ ವಹಿಸಿದೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿದೆ.
ಸರ್ಕಾರದ ಆದೇಶದನ್ವಯ ನೊಂದಾಯಿತ ಆಸ್ಪತ್ರೆಗಳಲ್ಲಿ ನೌಕರರ ಆರೋಗ್ಯ ತಪಾಸಣೆ ನಡೆಸಲಾಗುವುದು ಹಾಗೂ ಇದಕ್ಕೆ ಸಂಬಂಧಿಸಿದ ಕ್ಲೇಮ್‌ಗಳನ್ನು ನಿಯಮಾನುಸಾರ ಜಾರಿಗೊಳಿಸಲಾಗುತ್ತದೆ. ಪ್ರಸ್ತುತ ಈ ಯೋಜನೆಗಾಗಿ ಖಾಸಗಿ ಹಾಗೂ ಬೋಧನಾ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ (MoU) ಮಾಡಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಬೆಳಗಾವಿಯ ಅನ್ನಪೂರ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜು, ಕಲಬುರಗಿಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆ, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಹಾಗೂ ಬಾಗಲಕೋಟೆಯ ಎಸ್.ಎನ್.ಎಂ.ಸಿ ಹೆಚ್.ಎಸ್.ಕೆ ಆಸ್ಪತ್ರೆಗಳು ಜುಲೈ 31, 2026 ರಂದು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿವೆ.

ಈ ಯೋಜನೆಯ ಸೌಲಭ್ಯವು ರಾಜ್ಯದ 40 ವರ್ಷ ಮೇಲ್ಪಟ್ಟ ನೌಕರರಿಗೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆಸ್ಪತ್ರೆಗಳು ಈ ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಈ ಕುರಿತು ಎಲ್ಲ ನೊಂದಾಯಿತ ಆಸ್ಪತ್ರೆಗಳಿಗೆ ಹಾಗೂ ಆಯಾ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.












