ಬೆಂಗಳೂರು.ಜುಲೈ.11: ನೀವು ಜಾಗ ಅಥವಾ ಮನೆ ಖರೀದಿಸಲು ಇಲ್ಲವೇ ಮಾರಾಟ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಬೇಕಾಗಿದೆಯೇ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇದೆ. ಬರುವ ಜುಲೈ 12 ರ ಭಾನುವಾರದಂದು ರಾಜ್ಯಾದ್ಯಂತ ಇರುವ ಎಲ್ಲಾ ಉಪ ನೋಂದಣಾಧಿಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಸಾಮಾನ್ಯವಾಗಿ ಭಾನುವಾರ ಸರ್ಕಾರಿ ರಜೆ ಇರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಾರ್ವಜನಿಕರ ಈ ಭಾರಿ ಒತ್ತಡವನ್ನು ನಿವಾರಿಸಲು ಹಾಗೂ ದಾಖಲಾತಿ ಪ್ರಕ್ರಿಯೆಗಳನ್ನು ವೇಗಗೊಳಿಸಲು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯು ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ವಾರದ ದಿನಗಳಲ್ಲಿ ಕಚೇರಿಗೆ ಭೇಟಿ ನೀಡಲು ಸಮಯವಿಲ್ಲದ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಇಲಾಖೆಯ ಈ ನಿರ್ಧಾರದಿಂದ ಭಾರಿ ಅನುಕೂಲವಾಗಲಿದೆ. ಜುಲೈ 12ರ ಭಾನುವಾರದಂದು ಆಸ್ತಿ ನೋಂದಣಿ ಸೇರಿದಂತೆ ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.









