Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಳಲ್ಕೆರೆ : ಅಪಘಾತವೆಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಿದ್ದ ಪತಿ ಕೊಲೆ ಕೇಸ್ ಭೇದಿಸಿದ ಪೊಲೀಸರು!

---Advertisement---

ಹೊಳಲ್ಕೆರೆ : ಅಪಘಾತವೆಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಿದ್ದ ಪತಿ ಕೊಲೆ ಕೇಸ್ ಭೇದಿಸಿದ ಪೊಲೀಸರು!
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದಲ್ಲಿ ನಡೆದಿದ್ದ ವೀರೇಶಪ್ಪ ಎಂಬುವವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಅದು ಆಕಸ್ಮಿಕ ಸಾವಲ್ಲ ಬದಲಿಗೆ ವ್ಯವಸ್ಥಿತ ಕೊಲೆ ಎಂಬುದನ್ನು ಹೊಳಲ್ಕೆರೆ ಪೊಲೀಸರು ಅತ್ಯಂತ ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹೆಂಡತಿ ಮತ್ತು ಆಕೆಯ ಪ್ರಿಯಕರ ಸೇರಿ ಜಂಟಿಯಾಗಿ ಕೊಲೆ ಮಾಡಿ, ಅಪಘಾತದ ನಾಟಕವಾಡಿದ್ದ ಹಂತಕರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಕಳೆದ ಮೇ 8 ರಂದು ಲೋಕದೊಳಲು ಗ್ರಾಮದ ವೀರೇಶಪ್ಪ ಎಂಬುವವರು ಹಣೆಗೆ ರಕ್ತಗಾಯಗಳಾಗಿ ಸಾವನ್ನಪ್ಪಿದ್ದರು. ಆ ಸಮಯದಲ್ಲಿ ಮೃತನ ಪತ್ನಿ ಕಾವ್ಯ ಹಾಗೂ ಮಗ ಸಂತೋಷ್ ಸೇರಿ, ವೀರೇಶಪ್ಪ ಎಲ್ಲೋ ಬಿದ್ದು ಗಾಯಗೊಂಡಿದ್ದಾರೆ ಎಂದು ಸುಳ್ಳು ಹೇಳಿ ಆಟೋದಲ್ಲಿ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೀರೇಶಪ್ಪ ಅವರ ಸಾವು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ ಮತ್ತು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ವೃತ್ತ ನಿರೀಕ್ಷಕರಾದ ಶೈಲ ಜಿ ಚೌಗುಲಾ ಹಾಗೂ ಉಪನಿರೀಕ್ಷಕರಾದ ಸಚಿನ್ ಪಟೇಲ್ ಎನ್.ಜಿ ನೇತೃತ್ವದ ತಂಡ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೀರೇಶಪ್ಪ ಅವರನ್ನು ಬಲವಂತವಾಗಿ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿತ್ತು. ಇದೇ ವೇಳೆ ಮೃತನ ಅಣ್ಣ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ಪೊಲೀಸರು ಆರೋಪಿಗಳಾದ ಪತ್ನಿ ಕಾವ್ಯ ಮತ್ತು ಆಕೆಯ ಪ್ರಿಯಕರ ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ರಹಸ್ಯ ಹೊರಬಿದ್ದಿದೆ. ಕಾವ್ಯಾಗೆ ಕಳೆದ ಮೂರು ವರ್ಷಗಳಿಂದ ಅದೇ ಗ್ರಾಮದ ತಿಪ್ಪೇಸ್ವಾಮಿ ಎಂಬಾತನೊಂದಿಗೆ ಅನೈತಿಕ ಸಂಬಂಧವಿತ್ತು. ಈ ವಿಷಯ ಪತಿ ವೀರೇಶಪ್ಪನಿಗೆ ತಿಳಿದು, ಆತ ಕಾವ್ಯಾಗೆ ಬುದ್ಧಿ ಕಲಿಸಲು ಮುಂದಾಗಿದ್ದ. ಇದರಿಂದ ತಮಗೆ ತೊಂದರೆಯಾಗಬಹುದು ಎಂದು ಭಾವಿಸಿದ ಕಾವ್ಯ ಮತ್ತು ಪ್ರಿಯಕರ ತಿಪ್ಪೇಸ್ವಾಮಿ ಸೇರಿ ವೀರೇಶಪ್ಪನನ್ನೇ ಮುಗಿಸಲು ಸಂಚು ರೂಪಿಸಿದ್ದರು.

ಮೇ 8 ರಂದು ಮಧ್ಯಾಹ್ನ ಇಬ್ಬರೂ ಸೇರಿ ವೀರೇಶಪ್ಪನ ಹಣೆಗೆ ಅಡಿಕೆ ಕತ್ತಿಯಿಂದ ಹೊಡೆದು ಗಾಯಗೊಳಿಸಿ, ಬಳಿಕ ಬಟ್ಟೆ ಒಣಗಿಸುವ ಹಗ್ಗದಿಂದ ಕುತ್ತಿಗೆಯನ್ನು ಜೋರಾಗಿ ಬಿಗಿದು ಸಾಯಿಸಿದ್ದರು. ತದನಂತರ ಯಾರಿಗೂ ಅನುಮಾನ ಬಾರದಂತೆ ಎಲ್ಲೋ ಬಿದ್ದು ಸತ್ತಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದರು. ಸದ್ಯ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಠಿಣ ಕೊಲೆ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಬೇಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ರಂಜಿತ್ ಕುಮಾರ್ ಬಂಡಾರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now