ಭಾವನಗರ (ಗುಜರಾತ್).ಜುಲೈ.07: ಗುಜರಾತ್ ನ ಭಾವನಗರ ಜಿಲ್ಲೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಮೈಮನ ಜುಂ ಎನಿಸುವ ಘಟನೆಯೊಂದು ನಡೆದಿದೆ. ಹಸುವಿಗೆ ಮೇವು ಹಾಕಲು ಹೋದ ದನಗಾಹಿಯೊಬ್ಬನ ಮೇಲೆ ಸಿಂಹ ದಾಳಿ ಮಾಡಿದ್ದು, ಬರೋಬ್ಬರಿ 30 ನಿಮಿಷಗಳ ಕಾಲ ಆತನನ್ನು ನೆಲಕ್ಕೆ ನೂಕಿ ಹಿಡಿದಿಟ್ಟುಕೊಂಡಿದೆ. ಸದ್ಯ ಈ ಭೀಕರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಭಾವನಗರ ಜಿಲ್ಲೆಯ ಪಲಿಟಾನಾ ತಾಲೂಕಿನ ಗರಾಜಿಯಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಕಾಲುಭಾಯ್ ಬೋಘಾಭಾಯ್ ಪರ್ಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ಮುಂಜಾನೆ ಸುಮಾರು 8:30ರ ಸುಮಾರಿಗೆ ಕಾಲುಭಾಯ್ ತಮ್ಮ ಮನೆಯ ಸಮೀಪವಿರುವ ಹಸುಗಳಿಗೆ ಮೇವು ಹಾಕಲು ತೆರಳಿದ್ದರು. ಈ ವೇಳೆ ಅಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಸಿಂಹವೊಂದು ದಿಢೀರನೆ ಅವರ ಮೇಲೆ ಎರಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಸಿಂಹವು ಕಾಲುಭಾಯ್ ಅವರನ್ನು ನೆಲಕ್ಕೆ ತಳ್ಳಿ, ತನ್ನ ಬಲವಾದ ಪಂಜುಗಳಿಂದ ಅವರ ಕಾಲನ್ನು ಅಮುಕಿ ಹಿಡಿದಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಅವರ ಕೈಯನ್ನು ತನ್ನ ದವಡೆಯೊಳಗೆ ಸಿಲುಕಿಸಿಕೊಂಡು ಕಚ್ಚಿ ಹಿಡಿದಿದೆ. ಇದರಿಂದಾಗಿ ಕಾಲುಭಾಯ್ ಅವರಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, “ಬಚಾವೋ.. ಬಚಾವೋ..” ಎಂದು ಜೋರಾಗಿ ಕಿರುಚಾಡಿದ್ದಾರೆ.
LION ATTACKS ON ANIMAL CARE TAKER 🚨
A lioness attacked a Maldhari family near Palitana in Gujarat's Bhavnagar district.
– Lion trapped the guy for 30 minutes😨
– Look at the guy how he consoles Lion by Touching his head 😭
– After being rescued and rushed to a hospital for… pic.twitter.com/gWYDg9AYkX
— Jeet (@JeetN25) July 6, 2026
ಇದನ್ನು ಓದಿಸಿಗರೇಟ್ ಬಿಡಲು ಇಲ್ಲಿವೆ 6 ಅದ್ಭುತ ಮಾರ್ಗಗಳು!
ಕಾಲುಭಾಯ್ ಅವರ ಕಿರುಚಾಟ ಕೇಳಿ ಗ್ರಾಮಸ್ಥರು ಕೋಲುಗಳನ್ನು ಹಿಡಿದು ಸ್ಥಳಕ್ಕೆ ಧಾವಿಸಿದ್ದಾರೆ. ಸಿಂಹವನ್ನು ಸುತ್ತುವರಿದ ಗ್ರಾಮಸ್ಥರು ಜೋರಾಗಿ ಕೂಗಾಡುತ್ತಾ, ಅದನ್ನು ಹೆದರಿಸಿ ಓಡಿಸಲು ಸತತ ಪ್ರಯತ್ನ ನಡೆಸಿದ್ದಾರೆ. ಆದರೂ ಸಿಂಹವು ಸುಮಾರು ಅರ್ಧ ಗಂಟೆಯ ಕಾಲ ಕಾಲುಭಾಯ್ ಅವರನ್ನು ಬಿಡದೆ ತೀವ್ರ ಆತಂಕದ ವಾತಾವರಣ ನಿರ್ಮಿಸಿತ್ತು. ಕೊನೆಗೂ ಗ್ರಾಮಸ್ಥರ ತೀವ್ರ ಪ್ರಯತ್ನದ ನಂತರ ಸಿಂಹವು ಕಾಲುಭಾಯ್ ಅವರನ್ನು ಬಿಟ್ಟು, ಹತ್ತಿರದಲ್ಲೇ ಕಟ್ಟಿದ್ದ ಹಸುವಿನ ಕಡೆಗೆ ಮುಖ ಮಾಡಿದೆ.ತಕ್ಷಣವೇ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಕಾಲುಭಾಯ್ ಅವರನ್ನು ಪಲಿಟಾನಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಾನು ಬೆಳಗ್ಗೆ ಹಸುವಿಗೆ ಮೇವು ಹಾಕಲು ಹೋಗಿದ್ದೆ. ಅಲ್ಲಿಯೇ ಕುಳಿತಿದ್ದ ಸಿಂಹ ದಿಢೀರನೆ ನನ್ನ ಮೇಲೆ ದಾಳಿ ಮಾಡಿತು. ಮೊದಲು ನನ್ನನ್ನು ಕೆಳಗೆ ತಳ್ಳಿ, ನಂತರ ನನ್ನ ಕೈಯನ್ನು ಬಾಯಿಯಲ್ಲಿ ಕಚ್ಚಿ ಹಿಡಿಯಿತು. ಸುಮಾರು ಅರ್ಧ ಗಂಟೆ ಕಾಲ ಅದು ನನ್ನ ಕೈಯನ್ನು ಬಿಡಲಿಲ್ಲ. ಕೊನೆಗೆ ಅದರ ಹಿಡಿತ ಸ್ವಲ್ಪ ಸಡಿಲಗೊಂಡಾಗ ನಾನು ಹೇಗೋ ಬಚಾವಾದೆ ಎಂದು ಹೇಳಿದರು.




















