ಸುದ್ದಿಒನ್,ಬೆಂಗಳೂರು,ಮೇ.30: ಕರ್ನಾಟಕ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಯೊಂದು ನಡೆದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಪಡೆಯಲ್ಲಿ ಹೊಸ ಸರ್ಕಾರ ರಚನೆಯ ಚಟುವಟಿಕೆಗಳು ಚುರುಕುಗೊಂಡಿವೆ. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ನಿಕ್ಕಿಯಾಗಿದೆ.
ಇಂದು ಸಂಜೆ ಆಯೋಜನೆಯಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯಲ್ಲಿ ಡಿಕೆಶಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಆದರೆ, ಈ ಸಭೆಗೂ ಮುನ್ನವೇ ಡಿ.ಕೆ. ಶಿವಕುಮಾರ್ ಅವರು ರಾಜಭವನಕ್ಕೆ (ಲೋಕಭವನ) ದೌಡಾಯಿಸಿ, ರಾಜ್ಯಪಾಲರನ್ನು ಭೇಟಿ ಮಾಡಿರುವುದು ಭಾರಿ ಕುತೂಹಲ ಮೂಡಿಸಿದೆ.
ದಿಢೀರ್ ರಾಜ್ಯಪಾಲರ ಭೇಟಿಗೆ ಕಾರಣವೇನು?
ಇಂದು ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಕಾಂಗ್ರೆಸ್ ಶಾಸಕರ ಮಹತ್ವದ ಸಭೆ ನಿಗದಿಯಾಗಿದೆ. ನಿಯಮದ ಪ್ರಕಾರ ಈ ಸಭೆಯ ಬಳಿಕವಷ್ಟೇ ನಾಯಕರು ರಾಜ್ಯಪಾಲರನ್ನು ಭೇಟಿಯಾಗಬೇಕಿತ್ತು. ಆದರೆ, ರಾಜ್ಯಪಾಲರು ಇಂದು ಮಧ್ಯಾಹ್ನ 1 ಗಂಟೆಯ ನಂತರ ಧರ್ಮಸ್ಥಳ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಸಂಜೆಯ ವೇಳೆಗೆ ಅವರು ಬೆಂಗಳೂರಿನಲ್ಲಿ ಲಭ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ತಾಂತ್ರಿಕ ಅಡಚಣೆ ಎದುರಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಡಿಕೆಶಿ ಅವರು ಸಿಎಲ್ಪಿ ಸಭೆಗೂ ಮುಂಚಿತವಾಗಿಯೇ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್? ಡಿಕೆಶಿ ನೀಡಿದ ಎರಡು ದಿನಾಂಕಗಳು!
ರಾಜ್ಯಪಾಲರೊಂದಿಗಿನ ಈ ಸೌಜನ್ಯಯುತ ಭೇಟಿಯ ವೇಳೆ ಡಿ.ಕೆ. ಶಿವಕುಮಾರ್ ಅವರು ಹೊಸ ಸರ್ಕಾರ ರಚನೆ ಹಾಗೂ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಡಿಕೆಶಿ ಅವರು ರಾಜ್ಯಪಾಲರ ಮುಂದೆ ಎರಡು ಪ್ರಮುಖ ದಿನಾಂಕಗಳನ್ನು ಪ್ರಸ್ತಾಪಿಸಿದ್ದಾರೆ:
ಮೊದಲ ಆಯ್ಕೆ: ಜೂನ್ 1
ಎರಡನೇ ಆಯ್ಕೆ: ಜೂನ್ 5

ಈ ಎರಡು ದಿನಾಂಕಗಳಲ್ಲಿ ಒಂದನ್ನು ಅಂತಿಮಗೊಳಿಸಿ, ನೂತನ ಮುಖ್ಯಮಂತ್ರಿಯಾಗಿ ಸಾರಥ್ಯ ವಹಿಸಿಕೊಳ್ಳಲು ಕನಕಪುರ ಬಂಡೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕ ಕೇವಲ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದ್ದು, ರಾಜ್ಯ ರಾಜಕೀಯದಲ್ಲಿ ‘ಡಿಕೆಶಿ ಯುಗ’ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















