ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಭದ್ರತಾ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ. ಪ್ರಧಾನಿ ಸಂಚರಿಸುವ ಮಾರ್ಗದ ಸಮೀಪದ ತಾತಗುಣಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ನಗರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಬಳಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರದೇಶ ಪ್ರಧಾನಿ ಮೋದಿ ಅವರ ಸಂಚಾರ ಮಾರ್ಗದ ಸಮೀಪದಲ್ಲೇ ಇರುವುದರಿಂದ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿವೆ. ಪ್ರಧಾನಿ ಆಗಮನಕ್ಕೂ ಮುನ್ನ ಆಂಟಿ ಸಬೋಟಾಜ್ ಚೆಕ್ (ಎಎಸ್ಸಿ) ತಂಡ ರಸ್ತೆ ಸ್ಯಾನಿಟೈಸ್ ಮಾಡುತ್ತಿದ್ದ ವೇಳೆ, ರಸ್ತೆಯಿಂದ ಸುಮಾರು 50 ಮೀಟರ್ ದೂರದ ಸೇತುವೆ ಪಕ್ಕದ ಕಾಂಪೌಂಡ್ ಬಳಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಜಾನೆ ಕೋರಮಂಗಲ ಪೊಲೀಸರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, “ಹೆಚ್ಎಎಲ್ ಹಾಗೂ ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮಾಹಿತಿ ಪಡೆದ ತಕ್ಷಣ ಬೆಂಗಳೂರು ಪೊಲೀಸರು ರಾಮನಗರ ಭಾಗದ ಪೊಲೀಸರೊಂದಿಗೆ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಹೆಚ್ಎಎಲ್ ಬಳಿ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಗದಿದ್ದರೂ, ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೊರಭಾಗದಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.
ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಕೋರಮಂಗಲ ಸಮೀಪದ ಮನೆಯಿಂದ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಈತ ಈ ಹಿಂದೆಯೂ ವಿಐಪಿಗಳ ಭೇಟಿ ಸಂದರ್ಭಗಳಲ್ಲಿ ಇದೇ ರೀತಿ ಹುಸಿ ಬಾಂಬ್ ಕರೆಗಳನ್ನು ಮಾಡುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಈತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಹಿಂದಿನ ಪ್ರಕರಣಗಳಲ್ಲಿ ಎಚ್ಚರಿಕೆ ನೀಡಿ ಬಿಟ್ಟುಕಳುಹಿಸಲಾಗಿತ್ತು. ಆದರೆ ಈ ಬಾರಿ ಕೇವಲ ಕರೆ ಮಾಡದೇ ಜಿಲೆಟಿನ್ ಕಡ್ಡಿಗಳನ್ನು ಎಸೆದಿರುವುದು ಪ್ರಕರಣವನ್ನು ಗಂಭೀರಗೊಳಿಸಿದೆ. ನಿಜವಾಗಿಯೂ ಆತನೇ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದಾನೆಯೇ ಅಥವಾ ಇದರ ಹಿಂದೆ ಮತ್ತಾರಾದರೂ ಇದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೇಂದ್ರ ವಲಯದ ಡಿಐಜಿ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, “ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ನಿಜ. ಬೆದರಿಕೆ ಕರೆ ಹಾಗೂ ಸ್ಫೋಟಕಗಳ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.ಸದ್ಯ ಪತ್ತೆಯಾದ ಜಿಲೆಟಿನ್ ಕಡ್ಡಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗಿದ್ದು, ಪ್ರಧಾನಿ ಭೇಟಿಯ ಹಿನ್ನೆಲೆ ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.

















