Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ಕುಂಡಲಿ’ ಭವಿಷ್ಯಕ್ಕೆ ಹೆದರಿ 28 ವರ್ಷದ ಐಟಿ ಎಂಜಿನಿಯರ್ ಗೆ ಡ್ರೈವಿಂಗ್ ನಿಷೇಧ: ದಿನವೂ ಆಫೀಸ್ ಗೆ ಬಿಡುವ ತಂದೆ!

---Advertisement---

ಅಹಮದಾಬಾದ್.ಜೂನ್.29: ಇಂದಿನ ಆಧುನಿಕ ಯುಗದಲ್ಲೂ ಜಾತಕ, ಕುಂಡಲಿ ಮತ್ತು ಜ್ಯೋತಿಷ್ಯದ ಮೇಲಿನ ಅತಿಯಾದ ನಂಬಿಕೆಗಳು ಮನುಷ್ಯನ ಜೀವನವನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದಕ್ಕೆ ಆಘಾತಕಾರಿ ಉದಾಹರಣೆಯೊಂದು ಬೆಳಕಿಗೆ ಬಂದಿದೆ. ಕುಂಡಲಿಯಲ್ಲಿನ ಭವಿಷ್ಯ ನುಡಿಯೊಂದಕ್ಕೆ ಹೆದರಿ, 28 ವರ್ಷದ ಐಟಿ ಎಂಜಿನಿಯರ್ ಒಬ್ಬರಿಗೆ ವಾಹನ ಚಾಲನೆ ಮಾಡುವುದನ್ನು ಅವರ ಕುಟುಂಬಸ್ಥರು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

ಅಹಮದಾಬಾದ್ ಮೂಲದ ‘ನ್ಯೂಕಾನ್ಸ್’ ಸಂಸ್ಥೆಯ ಸಂಸ್ಥಾಪಕರಾದ ಪ್ರಿತೇಶ್ ಲಖಾನಿ ಎಂಬ ಉದ್ಯಮಿ ಸೋಶಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಈಗ ಇಂಟರ್ನೆಟ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪ್ರಿತೇಶ್ ಲಖಾನಿ ಅವರ ಪ್ರಕಾರ, ಆ 28 ವರ್ಷದ ಯುವಕ ಸುಶಿಕ್ಷಿತ ಐಟಿ ಎಂಜಿನಿಯರ್ ಆಗಿದ್ದು, ಈಗಾಗಲೇ ಮದುವೆಯಾಗಿ ಒಂದು ಮಗುವಿನ ತಂದೆಯೂ ಆಗಿದ್ದಾನೆ. ಆದರೆ, ಆತನಿಗೆ ಇದುವರೆಗೆ ಸ್ವತಃ ವಾಹನ ಚಾಲನೆ ಮಾಡಲು ಅನುಮತಿ ನೀಡಿಲ್ಲ. ಅಷ್ಟೇ ಏಕೆ, ಆತ ತನ್ನ ಇಡೀ ಜೀವನದಲ್ಲಿ ಕನಿಷ್ಠ ಪಕ್ಷ ಸೈಕಲ್ ತುಳಿಯುವುದನ್ನೂ ಕಲಿತಿಲ್ಲ! ಇದಕ್ಕೆ ಕಾರಣ ಆತನ ಜನ್ಮ ಕುಂಡಲಿ.

ಅವನ ಕುಂಡಲಿಯ ಪ್ರಕಾರ, ಆತ ವಾಹನ ಚಾಲನೆ ಮಾಡಿದರೆ ಯಾರನ್ನಾದರೂ ಕೊಲ್ಲುವ ಸಾಧ್ಯತೆಯಿದೆ ಎಂದು ಬರೆಯಲಾಗಿದೆ. ಇದೇ ಕಾರಣಕ್ಕೆ ಆತನಿಗೆ ಡ್ರೈವಿಂಗ್ ಕಲಿಯಲು ಮನೆಯವರು ಬಿಟ್ಟಿಲ್ಲ. ಪ್ರತಿದಿನ ಆತನ ತಂದೆಯೇ ಆಫೀಸ್ಗೆ ಬಂದು ಬಿಟ್ಟು ಹೋಗುತ್ತಾರೆ,” ಎಂದು ಲಖಾನಿ ಬರೆದುಕೊಂಡಿದ್ದಾರೆ. ಇದನ್ನು ಕೇಳಿ ಆಶ್ಚರ್ಯಗೊಂಡ ಲಖಾನಿ, “ಹಾಗಾದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದ ಆತನ ಕೆಲಸಕ್ಕೆ ತೊಂದರೆಯಾಗುತ್ತಾ ಎಂದು ಕುಂಡಲಿಯಲ್ಲಿ ಏನಾದರೂ ಬರೆದಿದೆಯೇ?” ಎಂದು ಆತನ ತಂದೆಯನ್ನು ತಮಾಷೆಯಾಗಿ ಕೇಳಿದ್ದಾಗಿ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.

ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ

ಲಖಾನಿ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಮೂಢನಂಬಿಕೆ ಮತ್ತು ಜ್ಯೋತಿಷ್ಯದ ಕುರಿತು ನೆಟ್ಟಿಗರ ನಡುವೆ ಭಾರಿ ಸಂವಾದ ಶುರುವಾಗಿದೆ. ಜನರು ತಮ್ಮ ಸ್ವಂತ ಬುದ್ಧಿಶಕ್ತಿಯನ್ನು ಬಿಟ್ಟು ಇಂತಹ ಚಾರ್ಟ್ಗಳನ್ನು ನಂಬಿ ಜೀವನ ನಡೆಸುತ್ತಿರುವುದು ಬೇಸರದ ಸಂಗತಿ. ದೇವರು ಮನುಷ್ಯನಿಗೆ ಯೋಚಿಸಲು ಮೆದುಳು ಕೊಟ್ಟಿದ್ದರೂ, ಮನುಷ್ಯ ಗ್ರಹಗತಿಗಳ ಚಾರ್ಟ್ ನಂಬಿ ಬದುಕುತ್ತಿದ್ದಾನೆ,” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ನನ್ನ ಸ್ನೇಹಿತನೊಬ್ಬ ತಾನು ಮದುವೆಯಾದರೆ ಹೆಂಡತಿ ಸತ್ತುಹೋಗುತ್ತಾಳೆ ಎಂಬ ಜಾತಕದ ಭವಿಷ್ಯ ನಂಬಿ, ಸುಂದರವಾಗಿದ್ದರೂ ಮದುವೆಯೇ ಆಗದೆ ಉಳಿದುಬಿಟ್ಟ. ಇಷ್ಟು ಓದಿದವರೂ ಹೀಗೆ ಮೂಢನಂಬಿಕೆಯಲ್ಲಿ ಬದುಕುತ್ತಾರಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದು ಮೂಢನಂಬಿಕೆಯಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಮೃತ್ಯು ಕಾರಕ’ ಮತ್ತು ಗ್ರಹಗಳ ಸ್ಥಾನಗಳನ್ನು ಸರಿಯಾಗಿ ವಿಶ್ಲೇಷಿಸಿದರೆ ಇಂತಹ ಅಪಘಾತಗಳ ಮುನ್ಸೂಚನೆ ಸಿಗುವುದು ನಿಜ ಎಂದು ಕೆಲವರು ಜ್ಯೋತಿಷ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ತಂತ್ರಜ್ಞಾನ ಲೋಕದಲ್ಲಿ ಸದಾ ಬ್ಯುಸಿಯಾಗಿರುವ ಐಟಿ ಎಂಜಿನಿಯರ್ ಒಬ್ಬರು, ಇಂದಿಗೂ ಇಂತಹದೊಂದು ಜಾತಕದ ಭವಿಷ್ಯಕ್ಕೆ ಕಟ್ಟುಬಿದ್ದು ಬದುಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Join WhatsApp

Join Now

Join Telegram

Join Now