Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಹಕರ ಗಮನಕ್ಕೆ: ಜುಲೈ.1ರಿಂದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಹೊಸ ನಿಯಮಗಳು ಜಾರಿ!

---Advertisement---

ದೆಹಲಿ.ಜೂನ್.29: ನೀವು ಮನೆಯಲ್ಲಿ ಎಲ್ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಪ್ರಮುಖ ವಿಷಯವನ್ನು ನೀವು ಖಂಡಿತವಾಗಿಯೂ ತಿಳಿದುಕೊಳ್ಳಲೇಬೇಕು. ಜುಲೈ 1 ರಿಂದ ದೇಶದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ.

ಕೇಂದ್ರ ಸರ್ಕಾರ ತಂದಿರುವ ಈ ಹೊಸ ನಿಯಮಗಳಿಂದಾಗಿ ಕೆಲವು ಹಳೆಯ ಗ್ರಾಹಕರ ಗ್ಯಾಸ್ ಕನೆಕ್ಷನ್ ಗಳು ಸಂಪೂರ್ಣವಾಗಿ ರದ್ದಾಗುವ ಅಪಾಯವಿದೆ. ಮುಖ್ಯವಾಗಿ ಮನೆಯಲ್ಲಿ ಪಿಎನ್ಜಿ (PNG – ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಹೊಂದಿರುವವರು ಮತ್ತು ಇದುವರೆಗೆ ಇ-ಕೆವೈಸಿ (e-KYC) ಪೂರ್ಣಗೊಳಿಸದವರು ಜುಲೈ 1 ರಿಂದ ತೊಂದರೆ ಎದುರಿಸಬೇಕಾಗಬಹುದು.

ಕೇಂದ್ರ ಸರ್ಕಾರವು ಎಲ್ ಪಿಜಿ ತಿದ್ದುಪಡಿ ಆದೇಶವನ್ನು ಕಡ್ಡಾಯಗೊಳಿಸಿದೆ. ಈ ಹೊಸ ನಿಯಮದ ಪ್ರಕಾರ, ಯಾರ ಮನೆಯಲ್ಲಾದರೂ ಈಗಾಗಲೇ ಪಿಎನ್ ಜಿ (ಪೈಪ್ಲೈನ್ ಗ್ಯಾಸ್) ಸಂಪರ್ಕವಿದ್ದು, ಅದರೊಂದಿಗೆ ಇಂಡೇನ್, ಹೆಚ್ಪಿ ಅಥವಾ ಭಾರತ್ ಗ್ಯಾಸ್ನ ಎಲ್ಪಿಜಿ ಸಂಪರ್ಕವನ್ನೂ ಬಳಸುತ್ತಿದ್ದರೆ, ಅವರ ಎಲ್ ಪಿಜಿ ಸಂಪರ್ಕವನ್ನು 30 ದಿನಗಳ ಒಳಗಾಗಿ ರದ್ದುಗೊಳಿಸಲಾಗುವುದು. ಒಂದೇ ಮನೆಯಲ್ಲಿ ಎರಡೂ ಕನೆಕ್ಷನ್ಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ. ಒಂದು ವೇಳೆ ಗ್ರಾಹಕರು ಸ್ವಯಂಪ್ರೇರಿತರಾಗಿ ತಮ್ಮ ಎಲ್ಪಿಜಿ ಸಂಪರ್ಕವನ್ನು ಸರೆಂಡರ್ ಮಾಡಿದರೆ, ಅವರಿಗೆ ಒಂದು ಕೂಪನ್ ನೀಡಲಾಗುತ್ತದೆ. ಭವಿಷ್ಯದಲ್ಲಿ ಯಾವಾಗಲಾದರೂ ಮತ್ತೆ ಎಲ್ಪಿಜಿ ಸಂಪರ್ಕ ಬೇಕು ಎನಿಸಿದರೆ ಈ ಕೂಪನ್ ಬಳಸಿ ಸುಲಭವಾಗಿ ಪಡೆಯಬಹುದು.

ನಿಮ್ಮ ಪ್ರದೇಶದಲ್ಲಿ ಪಿಎನ್ ಜಿ ಮೂಲಸೌಕರ್ಯವಿದ್ದು, ಗ್ಯಾಸ್ ಪೂರೈಕೆ ಲಭ್ಯವಿದ್ದರೆ, ಅಲ್ಲಿನ ಎಲ್ಲಾ ಎಲ್ಪಿಜಿ ಗ್ರಾಹಕರು 3 ತಿಂಗಳೊಳಗೆ ಪಿಎನ್ಜಿ ಸಂಪರ್ಕಕ್ಕೆ ಬದಲಾಗಬೇಕು ಎಂದು ಈ ವರ್ಷದ ಮಾರ್ಚ್ನಲ್ಲಿ ಸರ್ಕಾರ ಘೋಷಿಸಿತ್ತು. ಹಾಗೆ ಬದಲಾಗದಿದ್ದರೆ ಅವರ ಗ್ಯಾಸ್ ಕನೆಕ್ಷನ್ ಕಡಿತಗೊಳಿಸಲಾಗುತ್ತದೆ. ಮಾರ್ಚ್ನಲ್ಲಿ ನೀಡಲಾಗಿದ್ದ ಈ 3 ತಿಂಗಳ ಗಡುವು ಜೂನ್ ಕೊನೆಗೆ ಮುಕ್ತಾಯಗೊಳ್ಳಲಿದೆ. ಆದ್ದರಿಂದ ನಿಮ್ಮ ಪ್ರದೇಶದಲ್ಲಿ ಪೈಪ್ಲೈನ್ ಗ್ಯಾಸ್ ಸೌಲಭ್ಯವಿದ್ದರೆ ತಕ್ಷಣ ಆ ಸಂಪರ್ಕವನ್ನು ಪಡೆಯುವುದು ಅನಿವಾರ್ಯವಾಗಿದೆ.

ಸರ್ಕಾರವು ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವ ಗ್ರಾಹಕರೆಲ್ಲರಿಗೂ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ಗ್ರಾಹಕರು ಜೂನ್ 30 ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿರುತ್ತದೆ. ಯಾರಾದರೂ ಈ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದರೆ, ಜುಲೈ 1 ರಿಂದ ಅವರ ಗ್ಯಾಸ್ ಸೇವೆ ಸ್ಥಗಿತಗೊಳ್ಳಬಹುದು ಅಥವಾ ಸಿಲಿಂಡರ್ ಬುಕ್ ಮಾಡುವಾಗ ಸಮಸ್ಯೆ ಎದುರಾಗಬಹುದು. ಆದರೆ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿದವರಿಗೆ ಈ ನಿಯಮ ಅನ್ವಯಿಸುವುದಿಲ್ಲ, ಅವರು ಮತ್ತೊಮ್ಮೆ ಮಾಡುವ ಅಗತ್ಯವಿಲ್ಲ.

ಪ್ರಸ್ತುತ ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು 25 ದಿನಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಗ್ಯಾಪ್ ಇರಬೇಕೆಂಬ ನಿಯಮವಿದೆ. ಹಿಂದೆ ಯುದ್ಧದ ಸಂದರ್ಭದಲ್ಲಿ ಗ್ಯಾಸ್ ಕಾಳಸಂತೆ ತಡೆಯಲು ಮತ್ತು ನಿರಂತರ ಪೂರೈಕೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಈ ಮಿತಿಯನ್ನು ಹೇರಿತ್ತು. ಆದರೆ ಪ್ರಸ್ತುತ ‘ಸ್ಟ್ರೇಟ್ ಆಫ್ ಹಾರ್ಮುಜ್’ ಮಾರ್ಗ ಮುಕ್ತವಾಗಿರುವುದರಿಂದ, ಜುಲೈ 1 ರಿಂದ ಈ ಬುಕಿಂಗ್ ಅವಧಿಯ ಮಿತಿಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Join WhatsApp

Join Now

Join Telegram

Join Now