ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಪ್ರದೀಪ್ ಎಂಬುವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ವೈರಲ್ ಆಗಿರುವ ಆಡಿಯೊಗೆ ಪ್ರತಿಕ್ರಿಯಿಸಿರುವ ಸದಾನಂದ ಗೌಡ, “ಈ ಆಡಿಯೊಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ನನ್ನ ಧ್ವನಿಯೇ ಅಲ್ಲ. ನಾನು ಅಂತಹ ಯಾವುದೇ ಮಾತುಕತೆ ನಡೆಸಿಲ್ಲ. ಆದ್ದರಿಂದ ಈ ಕುರಿತು ಪ್ರತಿಕ್ರಿಯಿಸುವ ಪ್ರಶ್ನೆಯೇ ಇಲ್ಲ.
ಆಡಿಯೊ ಯಾರದ್ದು ಎಂಬುದನ್ನು ಮಾಧ್ಯಮಗಳೇ ಪರಿಶೀಲಿಸಲಿ” ಎಂದು ಸ್ಪಷ್ಟಪಡಿಸಿದ್ದಾರೆ.ಆದರೆ ವೈರಲ್ ಆಡಿಯೊದಲ್ಲಿನ ಧ್ವನಿ ಸದಾನಂದ ಗೌಡ ಅವರ ಧ್ವನಿಗೆ ಹೋಲಿಕೆ ಹೊಂದಿದ್ದು, ಇಂಗ್ಲಿಷ್ನಲ್ಲಿ ನಡೆದಿರುವ ಸಂಭಾಷಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷೀಯ ಅವಧಿ, ಅವರನ್ನು ಯಾವಾಗ ಬದಲಾಯಿಸಬೇಕು ಎಂಬ ವಿಚಾರಗಳು ಪ್ರಸ್ತಾಪವಾಗಿವೆ ಎನ್ನಲಾಗಿದೆ. ಇದರಿಂದ ಬಿಜೆಪಿ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆ ಹುಟ್ಟಿಕೊಂಡಿದೆ.
ಆಡಿಯೊದಲ್ಲಿನ ಮಾತುಕತೆಯ ಪ್ರಕಾರ, ವಿಜಯೇಂದ್ರ ಅವರ ಅಧ್ಯಕ್ಷೀಯ ಅವಧಿ ನವೆಂಬರ್ವರೆಗೆ ಮುಂದುವರಿಯಲಿ. ಈಗಲೇ ಅವರನ್ನು ಬದಲಾಯಿಸಿದರೆ ಬಿಜೆಪಿ ಲಿಂಗಾಯತ ವಿರೋಧಿ ಎಂಬ ಸಂದೇಶ ಹೋಗುವ ಸಾಧ್ಯತೆ ಇದೆ. ಅವಧಿ ಮುಗಿದ ಬಳಿಕ ಯೋಜಿತವಾಗಿ ಬದಲಾವಣೆ ಮಾಡಿದರೆ ಯಾರೂ ಪ್ರಶ್ನಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಯಾವುದೇ ವಿರೋಧ ಎದುರಾಗುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.
ಸಂಭಾಷಣೆಯ ವೇಳೆ ಪ್ರದೀಪ್ ಎಂಬುವರು ಬಿ.ಎಲ್. ಸಂತೋಷ್ ಅವರ ಪಾತ್ರದ ಬಗ್ಗೆ ಪ್ರಶ್ನಿಸಿದಾಗ, “ಅದು ಹಾಗಿರಲಿ” ಎಂಬ ಉತ್ತರ ಕೇಳಿಬಂದಿದೆ ಎನ್ನಲಾಗಿದೆ. ಅಲ್ಲದೆ, “ಜನರು ನನ್ನನ್ನು ಇನ್ನೂ ಗುರುತಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡರೂ ಹಲವರು ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ” ಎಂಬ ಹೇಳಿಕೆಯೂ ಆಡಿಯೊದಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಸದಾನಂದ ಗೌಡ, “ಇದು ನನ್ನ ಆಡಿಯೊ ಅಲ್ಲ. ನಾನು ಮಾತನಾಡಿಲ್ಲ. ಹೀಗಾಗಿ ಉತ್ತರಿಸುವ ಅಗತ್ಯವೂ ಇಲ್ಲ” ಎಂದು ಪುನರುಚ್ಚರಿಸಿದರು.
ಇದೇ ವೇಳೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಸದಾನಂದ ಗೌಡ, “ವಿಶ್ವನಾಥ್ ಮುತ್ತಪ್ಪ ರೈ ಅವರ ಆಪ್ತನಾಗಿ ಗೂಂಡಾಗಿರಿ ಮಾಡುತ್ತಿದ್ದ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಹಣ ಮತ್ತು ಕೊಳ್ಳೆ ಹೊಡೆಯುವುದೇ ಅವರ ಕೆಲಸ” ಎಂದು ತೀವ್ರ ವಾಗ್ದಾಳಿ ನಡೆಸಿದರು.
“ನಾನು ಒಕ್ಕಲಿಗ ಅಲ್ಲ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆ ಕೂಡ ನಡೆದಿದೆ. ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೂ ತರಲಿದ್ದೇನೆ” ಎಂದು ಸದಾನಂದ ಗೌಡ ಹೇಳಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











