ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಮೇ. 08 : ಸರ್ಕಾರ ಕಂದಾಯ ಇಲಾಖೆಯಿಂದ ಕಾಗದರಹಿತ ಮುಖರಹಿತ ನೋಂದಣಿಯನ್ನು ಅನುಷ್ಠಾನ ಗೊಳಿಸುತ್ತಿರುವುದನ್ನು ಚಿತ್ರದುರ್ಗ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘ ವಿರೋಧವನ್ನು ವ್ಯಕ್ತಪಡಿಸಿ ಈ ಹಿಂದೆ ಇದ್ದ ರೀತಿಯಲ್ಲಿ ನೊಂದಾಣಿಯನ್ನು ಮುಂದುವರೆಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಚಿತ್ರದುರ್ಗ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಆಶ್ವಕ್ ಆಹ್ಮದ್ ಮಾತನಾಡಿ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಎಲ್ಲಾ ದಸ್ತಾವೇಜುಗಳನ್ನು ಕಾಗದರಹಿತ, ಮುಖರಹಿತ ನೋಂದಣಿಯನ್ನು ಮಾಡುವ ಉದ್ದೇಶದಿಂದ ದಿನಾಂಕ: 02-05-2026ರಂದು ಚಾಮರಾಜನಗರ ಜಿಲ್ಲೆಯ ಕೆಲವೊಂದು ಉಪನೋಂದಣಾಧಿಕಾರಿಗಳವರ ಕಛೇರಿಗಳಲ್ಲಿ ಪ್ರಾಯೋಗಿಕವಾಗಿ ಕಾಗದರಹಿತ ನೋಂದಣಿ ಮಾಡಿರುವುದು ಸರಿಯಷ್ಟೆ. ಈ ಕಾಗದ ರಹಿತ ನೋಂದಣಿಯನ್ನು ಅನುಷ್ಠಾನ ಗೊಳಿಸುವುದಕ್ಕಿಂತ ಮುಂಚಿತವಾಗಿ ಸರ್ಕಾರದಿಂದ ಯಾವುದೇ ರೀತಿಯ ಪಬ್ಲಿಕೇಷನ್ ಅಗಲೀ, ಸಾರ್ವಜನಿಕರ ಆಭಿಪ್ರಾಯವನ್ನು ಸಹ ಸಂಗ್ರಹಿಸಿರುವುದಾಗಲೀ ಏನೂ ಮಾಡಿರುವುದಿಲ್ಲ. ಈ ಕಾಗದರಹಿತ ಮತ್ತು ಮುಖರಹಿತ ದಸ್ತಾವೇಜುಗಳನ್ನು ನೋಂದಣಿ ಮಾಡುವುದರಿಂದ ಸಾರ್ವಜನಿಕರಿಗೆ ಅಗುವ ಆನಾನುಕೂಲತೆ ಬಗ್ಗೆಯೂ ಸಹ ಯಾವುದೇ ಚರ್ಚೆ ನಡೆದಿರುವುದಿಲ್ಲ. ಈ ಕಾಗದ ರಹಿತ ಮತ್ತು ಮುಖ ರಹಿತ ನೋಂದಣಿ ಮಾಡುವುದರಿಂದ ಸಾರ್ವಜನಿಕರಿಗೆ ಆನಾನುಕೂಲಗಳು ಹೆಚ್ಚಿನ ರೀತಿಯಲ್ಲಿ ಇದೆ ಎಂದಿದ್ದಾರೆ.
ಕಾವೇರಿ 2.0 ತತ್ರಾಂಶದಲ್ಲಿ ಕಾಗದರಹಿತ/ಮುಖರಹಿತ ನೋಂದಣಿ ಮಾಡುವುದರಿಂದ ಎಲ್ಲಾ ದಸ್ತಾವೇಜುಗಳು ಡಿಜಿ ಲಾಕರ್‍ನಲ್ಲಿ ಸೇವ್ ಅಗುವುದರಿಂದ, ಪಕ್ಷಗಾರರಿಗೆ/ಖರೀದಿದಾರಿಗೆ ಯಾವುದೇ ರೀತಿಯ ಭೌತಿಕ ದಾಖಲೆ ದೂರೆಯುವುದಿಲ್ಲ.ಒಂದು ವೇಳೆ ಖರೀದಿದಾರರು ನೋಂದಣಿ ಅದ ತಕ್ಷಣ ಆಕಸ್ಮಿಕವಾಗಿ 2-3 ದಿನಗಳಲ್ಲಿ ಮೃತಪಟ್ಟ ಅಂದರೆ ಅಸ್ತಿ ಖರೀದಿದಾರನ ವಾರಸುದಾರರಿಗೆ ಇದರ ಮಾಹಿತಿ ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿ, .ಕಾಗದರಹಿತ/ಮುಖರಹಿತ ನೋಂದಣಿ ಪ್ರಕ್ರಿಯೆಯಲ್ಲಿ ಭೌತಿಕವಾಗಿ ಮಾರಟಗಾರರ ಖರೀದಿದಾರರ ಸಹಿಯೇ ಇರುವುದಿಲ್ಲ. ಈ ರೀತಿಯಲ್ಲಿ ನೋಂದಣಿಗಳನ್ನು ಮಾಡಿದರೆ ಭೂ ಮಾಫೀಯಾ ಮತ್ತು ಹ್ಯಾಕರ್‍ಗಳಿಗೆ ಬಹಳ ಅನುಕೂಲ ಮಾಡಿಕೊಟ್ಟಂತೆ ಅಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ರುದ್ರಸ್ವಾಮಿ ಮಾತನಾಡಿ, ಕಾಗದರಹಿತ/ಮುಖರಹಿತ ನೊಂದಣಿ ಮಾಡುವುದರಿಂದ ಬ್ಯಾಂಕ್‍ಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ವಗೈರೆ ಪಡೆಯಲು ತುಂಬಾ ಆನಾನುಕೂಲವಾಗುತ್ತದೆ. ಕಾಗದ ರಹಿತ/ಮುಖರಹಿತ ದಸ್ತಾವೇಜುಗಳಿಗೆ ಭೌತಿಕ ಸಹಿ ಇರುವುದಿಲ್ಲ ಡಿಜಿಟಲ್ ಸಹಿ ಮಾಡಬೇಕಾಗಿರುತ್ತದೆ. ಡಿಜಿಟಲ್ ಸೈನ್ (ಡೈಸ್) ಮಾಡಿಕೊಡಲು ಕನಿಷ್ಠ 2,000 ರೂ.ಗಳು ಖರ್ಚಾಗುತ್ತದೆ.ಕಾಗದ ರಹಿತ/ ಮುಖರಹಿತ ದಸ್ತಾವೇಜು ನೋಂದಣಿಗೆ ಸ್ಕ್ಯಾನಿಂಗ್ ಫೀ ರೂ. 800 ರಿಂದ 900 ಗಳು ಬರುತ್ತದೆ. ಹಾಲಿ ಇರುವ ಸಿಸ್ಟಮ್‍ನಲ್ಲಿ ಒಂದು ದಸ್ತಾವೇಜು ನೋಂದಣಿಗೆ ಸ್ಕ್ಯಾನಿಂಗ್ ಫೀ ಕೇವಲ 350 ರೂ.ಗಳು ಮಾತ್ರ ಇರುತ್ತದೆ. ಇದರಿಂದ ಸಾರ್ವಜನಿಕರ ಮೇಲೆ ಹೊರೆ ಅಗಲಿದೆ.ಇಷ್ಟೆಲ್ಲಾ ಲೋಪದೋಷಗಳಿದ್ದರೂ ಸಹ ಕಂದಾಯ ಸಚಿವರು ಪೇಪರ್‍ಲೆಸ್, ಫೇಸ್‍ಲೆಸ್ ಮಾಡುತ್ತೇನೆಂದು ಕರ್ನಾಟಕ ರಾಜ್ಯದ ಆಮಾಯಕ ಜನರ ಮೇಲೆ ರೈತಾಪಿ ಜನಗಳ ಮತ್ತು ಕೂಲಿ ಕಾರ್ಮಿಕರ ಭಾವನೆಗಳ ಜೊತೆ ಚೆಲ್ಲಾಟ ಅಡುತ್ತಿದ್ದಾರೆ, ಈ ಕಾಗದರಹಿತ/ ಮುಖರಹಿತ ನೋಂದಣಿಗೆ ನಮ್ಮಗಳೆಲ್ಲರ ವಿರೋದ ಇದೆ ಎಂದು ತಿಳಿಸಿದರು.
ಸಂಘಧ ಸಲಹೆಗಾರರಾದ ಗೋವಿಂದ ಮೂರ್ತಿ ಮಾತನಾಡಿ, ಚಿತ್ರದುರ್ಗ ನಗರದ ಸಾರ್ವಜನಿಕರು, ರೈತಾಪಿ ಜನರು, ಮತ್ತು ಕೂಲಿ ಕಾರ್ಮಿಕರು ಮತ್ತು ಚಿತ್ರದುರ್ಗ ಜಿಲ್ಲಾ ದಸ್ತಾವೇಜು ಬರಹಗಾರರ ಒಕ್ಕೂಟದಿಂದ ವಿನಂತಿಸುವುದೇನೆಂದರೆ ಈ ಕಾಗದ ರಹಿತ ಮುಖ ರಹಿತ ನೋಂದಣಿ ಕಾರ್ಯವನ್ನು ಈ ಕೂಡಲೇ ನಿಲ್ಲಿಸಿ. ಈಗ ಹಾಲಿ ಇರುವ ಕಾವೇರಿ ತಂತ್ರಾಂಶದಿಂದಲೇ ನೋಂದಣಿ ಕಾರ್ಯಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಗೋಷ್ಟಿಯಲ್ಲಿ ಕಾರ್ಯದರ್ಶಿ ಕೆಂಚಪ್ಪ, ದಲಿತ ಛಲವಾದಿ ಮಹಾ ಸಭಾದ ಕಾರ್ಯದರ್ಶಿ ದಯಾನಂದ, ಚಂದ್ರಪ್ಪ, ಮಂಜುನಾಥ್ ಭಾಗವಹಿಸಿದ್ದರು.



















