ಚಿತ್ರದುರ್ಗ. ಏ.30: ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯುವ ಫಲಾನುಭವಿಗಳಿಗೆ ಸಿಬಿಲ್ ಸ್ಕೋರ್ ಅಥವಾ ಇತರೆ ಯಾವುದೇ ತಾಂತ್ರಿಕ ಕಾರಣಗಳು ಅಡ್ಡಿಯಾಗಬಾರದು. ಅರ್ಹರಿಗೆ ತಲುಪಬೇಕಾದ ಸವಲತ್ತುಗಳನ್ನು ಶೀಘ್ರವಾಗಿ ವಿತರಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲಾ ವ್ಯವಸ್ಥಾಪಕರೊಂದಿಗೆ ಸಮಾಲೋಚನೆ ನಡೆಸಿದರು.
ಬಡ ಜನರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ನಿಗಮದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಸಿಬಿಲ್ ಸ್ಕೋರ್ ಸಮಸ್ಯೆ ಮುಂದಿಟ್ಟುಕೊಂಡು ಫಲಾನುಭವಿಗಳನ್ನು ಅಲೆದಾಡಿಸುವುದು ಸರಿಯಲ್ಲ. ಈ ಕುರಿತು ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಮಾತನಾಡಿದ್ದು, ಸರ್ಕಾರದ ಸೌಲಭ್ಯಗಳನ್ನು ನೀಡುವಾಗ ಭದ್ರತೆ, ಸಿಬಿಲ್ ಅಂಶಗಳನ್ನು ಪರಿಗಣಿಸದೇ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವೇಗ ನೀಡಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದ ಐದು ಗ್ಯಾರಂಟಿಗಳ ಜೊತೆಗೆ, ನಮ್ಮ ನಿಗಮದಿಂದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ನೇರ ಸಾಲ, ಉದ್ಯಮಶೀಲತೆ ಅಭಿವೃದ್ಧಿ ಯೋಜನೆ, ಸ್ವಾವಲಂಬಿ ಸಾರಥಿ ಹಾಗೂ ಹೈನುಗಾರಿಕೆ (ಕುರಿ, ಮೇಕೆ, ಹಸು ಸಾಕಾಣಿಕೆ) ಸೇರಿದಂತೆ ಒಟ್ಟು ಆರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಈ ಮೂಲಕ ಭೋವಿ ಸಮುದಾಯಕ್ಕೆ ಒಟ್ಟು 11 ಗ್ಯಾರಂಟಿಗಳು ತಲುಪುತ್ತಿವೆ ಎಂದು ಹೇಳಿದರು.
ಮೇ ಅಂತ್ಯದೊಳಗೆ “ಗಂಗಾ ಕಲ್ಯಾಣ” ಪೂರ್ಣ: ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸುವ ಬೋರ್‍ವೆಲ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಳೆಗಾಲ ಆರಂಭವಾದರೆ ಯಂತ್ರೋಪಕರಣಗಳು ಜಮೀನುಗಳಿಗೆ ಹೋಗಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳ ಅಂತ್ಯದೊಳಗೆ ಗಂಗಾ ಕಲ್ಯಾಣದ ಎಲ್ಲಾ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದ ಅವರು, ಈ ಸಂಬಂಧ ಈಗಾಗಲೇ ರಾಜ್ಯ ಮಟ್ಟದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ಭೋವಿ ಜನಾಂಗದ ಆರ್ಥಿಕ ಸಬಲೀಕರಣಕ್ಕೆ ನಿಗಮ ಬದ್ಧ: ಭೋವಿ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಹತ್ತಾರು ಜನಪರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ನಿಗಮದ ಅಧ್ಯಕ್ಷ ಎಂ. ರಾಮಪ್ಪ ತಿಳಿಸಿದರು.
ಸಮುದಾಯದ ಯುವ ಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ರಾಜ್ಯಾದ್ಯಂತ ಟೈಲರಿಂಗ್ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೇ ಬರುವ ಮೇ 4ರಂದು ಮೈಸೂರಿನಲ್ಲಿ 75 ದಿನಗಳ ಟೈಲರಿಂಗ್ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗುವುದು. 20 ರಿಂದ 45 ವರ್ಷದೊಳಗಿನ ಆಸಕ್ತ ಪುರುಷರು ಮತ್ತು ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ತರಬೇತಿ ಪಡೆಯುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು. ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ನಿಗಮದ ವತಿಯಿಂದ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು. ಕೇವಲ ತರಬೇತಿ ನೀಡುವುದು ಮಾತ್ರವಲ್ಲದೆ, ಅವರು ಹೊಲಿದ ಬಟ್ಟೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿಯನ್ನು ತರಬೇತಿ ನೀಡುವ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಹಾಗೆಯೇ ಮೇ 22 ಮತ್ತು 23 ರಂದು ಬಾಗಲಕೋಟೆ ಜಿಲ್ಲೆಯ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳ ಮಠದಲ್ಲಿ ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಪೂರ್ವ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ಬಾರಿ ನಿಗಮದ ಫಲಾನುಭವಿಗಳಿಗೆ ನೀಡುವ ಸೌಲಭ್ಯಗಳಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದೆ. ಈ ವರ್ಷದಿಂದ ಕಾರುಗಳ ಬದಲಿಗೆ ಟ್ರ್ಯಾಕ್ಟರ್‍ಗಳನ್ನು ನೀಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಭೋವಿ ಸಮುದಾಯದವರು ಹೆಚ್ಚಾಗಿ ಕಟ್ಟಡ ನಿರ್ಮಾಣ ಮತ್ತು ಕಾಂಟ್ರಾಕ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಅವರಿಗೆ ನೆರವಾಗಲು ಸ್ಟೀಲ್ ಸೆಂಟ್ರಿಂಗ್ ಸಾಮಗ್ರಿ ಹಾಗೂ ಸ್ವಂತವಾಗಿ ಬಳಸಲು ಅಜಾಕ್ಸ್ ಮೆಷಿನ್‍ಗಳನ್ನು ಒದಗಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.
ರಾಜ್ಯದ 11 ಜಿಲ್ಲೆಗಳಲ್ಲಿ ನಿಗಮದ ಕಚೇರಿಗಳಿದ್ದು, ಅವುಗಳಿಗೆ ಸ್ವಂತ ಜಾಗ ಗುರುತಿಸಿ ಶಾಶ್ವತ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಕೋಲಾರದಲ್ಲಿ 20,000 ಅಡಿ ಹಾಗೂ ಧಾರವಾಡದಲ್ಲಿ 22,000 ಅಡಿ ಜಾಗವನ್ನು ಖರೀದಿಸಲಾಗಿದೆ. ಚಿತ್ರದುರ್ಗದಲ್ಲಿಯೂ ಕನಿಷ್ಠ 5,000 ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಜಾಗಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಈ ಕಟ್ಟಡಗಳಲ್ಲಿ ತರಬೇತಿ ಕೇಂದ್ರ, ಮೀಟಿಂಗ್ ಹಾಲ್ ಮತ್ತು ಕಾರ್ಯಾಗಾರ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ವೈ.ರವಿಕುಮಾರ್, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ನಿವೃತ್ತ ಪ್ರಾಚಾರ್ಯ ಕನಕದಾಸ್ ಸೇರಿದಂತೆ ಮತ್ತಿತರರು ಇದ್ದರು.






















