Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ – ಮೆದಕೇರಿಪುರ (ಮದಕರಿಪುರ) ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್, ಚಿತ್ರದುರ್ಗ,

ಮೆದಕೇರಿಪುರ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗ ದಿಂದ 4 ಕಿಲೋಮೀಟರ್ ದೂರ ಪೂರ್ವಕ್ಕೆ, ಚಿತ್ರದುರ್ಗ – ಚಳ್ಳಕೆರೆ ಮಾರ್ಗದಲ್ಲಿದೆ. ಮೂಲತಃ ಇದೊಂದು ಶಾಸನಸ್ಥ- ಐತಿಹಾಸಿಕ ಗ್ರಾಮವಾಗಿದೆ .ಮದಕರಿಪುರ ಎಂದು ಕರೆಯಲಾಗುವ ಈ ಗ್ರಾಮದ ಹಳೆ ಹೆಸರು ಮೆದಕೇರಿಪುರ. ಆಡುಭಾಷೆಯಲ್ಲಿ ಇದನ್ನು ಇಂದಿಗೂ ಮೆದ್ಕೇಪುರ ಎನ್ನುತ್ತಾರೆ.

ಚಿತ್ರದುರ್ಗವನ್ನು ಆಳಿದ ಕೊನೆಯ ದೊರೆ ರಾಜವೀರ ಚಿಕ್ಕಮೆದಕೇರಿ ನಾಯಕನ ಪಟ್ಟಾಭಿಷೇಕದ ನೆನಪಿಗೆ (1754 ರಲ್ಲಿ)ಈ ಗ್ರಾಮವನ್ನು ನಿರ್ಮಿಸಲಾಗಿದೆ. ಅಂದು ಕಟ್ಟಿಸಿದ್ದ ಕೋಟೆ ಗೋಡೆಗಳ ಕುರುಹುಗಳು ಇಂದಿಗೂ ಕಾಣಬಹುದಾಗಿದೆ. ಇದು ಈಗಿನ ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇದೆ.

ಲಂಬಾಣಿಹಟ್ಟಿ ,ಪಿಳ್ಳೇಕೆರೆನಹಳ್ಳಿ ಗ್ರಾಮಗಳು ಮದಕರಿಪುರ ಗ್ರಾಮ ಪಂಚಾಯಿತಿ ಆಡಳಿತ ವ್ಯಾಪ್ತಿಗೆ ಸೇರಿವೆ. ಚಿತ್ರದುರ್ಗದ ಹೊರವಲಯದಲ್ಲಿರುವ ಈ ಗ್ರಾಮವು ಇಂದಿಗೂ ತನ್ನ ಮೂಲ ಗ್ರಾಮ್ಯ ಸಂಸ್ಕೃತಿಯನ್ನು ಉಳಿಸಿಕೊಂಡಿದೆ .ಗ್ರಾಮದ ಸುತ್ತಮುತ್ತಲಿನ ಹೊಲಗಳೆಲ್ಲ ನಗರೀಕರಣದ ಪ್ರಭಾವದಿಂದ ಬದಲಾಗುತ್ತಿದೆ.ಇನ್ನೊಂದು ದಶಕದಲ್ಲಿ ಈ ಗ್ರಾಮ ಸಂಪೂರ್ಣ ಚಿತ್ರದುರ್ಗ ನಗರದೊಳಗೆ ಸೇರಿ ಬಿಡುತ್ತದೆ.
ಗ್ರಾಮದ ಉತ್ತರಕ್ಕೆ ಚಿತ್ರದುರ್ಗ ನಗರದ ಹೊಸ ಬೈಪಾಸ್ ರಸ್ತೆ ನಿರ್ಮಾಣಗೊಳ್ಳುತ್ತಿದೆ.

ಸಂಪೂರ್ಣ ಬಯಲುಸೀಮೆ,ಗುಡ್ಡಗಾಡು ವಾತಾವರಣ ಹೊಂದಿರುವ ಈ ಗ್ರಾಮದ ಪೂರ್ವ ದಿಕ್ಕು ಹಾಗೂ ಆಗ್ನೇಯಕ್ಕೆ ಗುಡ್ಡ ಸಾಲುಗಳು ಆವರಿಸಿವೆ.ಗ್ರಾಮದ ಉತ್ತರ ದಿಕ್ಕಿನಲ್ಲಿ ಗೋನೂರು ಕೆರೆಯಿದ್ದು,ಈ ಕೆರೆಗೆ ಗ್ರಾಮದ ಮಳೆ ನೀರು ಹೋಗಿ ಸೇರುತ್ತದೆ.ಕೆರೆ ಕೋಡಿಯ ಪಕ್ಕದಲ್ಲಿರುವ ಗುಡ್ಡವು ತಳವಾರ ಗುಡ್ಡ ಎಂದೇ ಹೆಸರಾಗಿದೆ .ಅದರ ಪಕ್ಕದಲ್ಲಿ ಮೂರುತಲೆ ಗುಡ್ಡ ನಂತರ ಸಣ್ಣಮಟ್ಟಿ,ಬಿಳಿಗುಡ್ಡ, ಕರೆಗುಡ್ಡ ಮತ್ತು ಎಮ್ಮೆಮಟ್ಟಿ ಎಂಬ ಹೆಸರುಗಳ ಗುಡ್ಡಗಳಿವೆ .ಎಮ್ಮೆಮಟ್ಟಿ ಹಾಗೂ ಅಡ್ಡ ಗುಡ್ಡದ ನಡುವೆ ಚಳ್ಳಕೆರೆಗೆ ಹೋಗುವ ರಸ್ತೆ ಇದೆ .ನಂತರ ಇರುವ ಗೊಲ್ಲರ ಗುಡ್ಡವು ಕಣಿವೆ ಮಾರಮ್ಮ ದೇವಸ್ಥಾನದವರೆಗೂ ಹಬ್ಬಿದೆ .ಹಳೆಯ ರಾಷ್ಟ್ರೀಯ ಹೆದ್ದಾರಿ ಬಲಭಾಗದಲ್ಲಿರುವ ಗುಡ್ಡ ಕರಿಯಪ್ಪನ ಮಟ್ಟಿಯಾಗಿದ್ದು ನಂತರ ಬರುವ ಗುಡ್ಡವೇ ಕಣಿವೆ ಹನುಮಪ್ಪನ ಗುಡ್ಡ. ಇಲ್ಲಿ ಆಂಜನೇಯನ ದೇವಸ್ಥಾನಕ್ಕೆ ಗ್ರಾಮದವರು ವರ್ಷಕ್ಕೊಮ್ಮೆ ಶ್ರಾವಣಮಾಸದಲ್ಲಿ ಪೂಜೆ ಸಲ್ಲಿಸಿ ಪರೇವು ಆಚರಣೆ ಮಾಡುತ್ತಾರೆ.

ಈಗಿನ ರೈಲು ಹಳಿಯ ಬಳಿ ಹಿಂದೆ ಗೊಲ್ಲನಕಟ್ಟೆ ಎಂಬ ಗೋಕಟ್ಟೆ ಇದ್ದು ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವಾಗಿತ್ತು .ಅದು ಇತ್ತೀಚಿನ ದಿನಗಳಲ್ಲಿ ಇಲ್ಲವಾಗಿದೆ.

ಇತಿಹಾಸ:
ಮದಕರಿಪುರದ ಬಳಿ ಇರುವ ಕ್ರಿ.ಶ.1199 ಕಾಮಯ್ಯನಾಯಕನ ಕಾಲದ 2 ಶಾಸನಗಳಿದ್ದು, ಇವುಗಳ ಪ್ರಕಾರ ಕಾಮಯ್ಯನಾಯಕನ ಅಧಿಕಾರಿಯಾಗಿದ್ದ ಹಿರಿಯಮಗೌಡನು ಸೋಮನಾಥದೇವರ ಆರಾಧಕನಾಗಿದ್ದು ತನ್ನ ಗ್ರಾಮವಾದ “ಬೆಣ್ಣೆ ದೊಣೆಯೂರು” (ಈಗಿನ ಮದಿಕೇರಿಪುರ ಗ್ರಾಮದ ಉತ್ತರ ದಿಕ್ಕಿನಲ್ಲಿರುವ ಈಶ್ವರನ ಗುಡಿ ಇರುವ ಪ್ರದೇಶ) ಮಧ್ಯದಲ್ಲಿ ಕಲ್ಲಿನ ಸೋಮನಾಥ ದೇವಾಲಯವನ್ನು, ಶಿಖರವನ್ನು ಕಟ್ಟಿಸಿ, ಕಳಸವನ್ನಿಡಿಸಿದನು.ಈ ದೇವರ ಅಂಗಭೋಗ,ಪೂಜೆ ಪುನಸ್ಕಾರ,ನಂದಾದೀವಿಗೆ, ನೈವೇದ್ಯಕ್ಕೆ, ಪೂಜಾರಿಯ ಸುಖವಸತಿಗೂ,ದೇವಾಲಯದ ಖಂಡ ಸ್ಪಟಿಕ ಜೀರ್ಣೋದ್ಧಾರಕ್ಕೂ, ಮಹಾಸಾಮಂತ ಕಾಮಯ್ಯನಾಯಕನ ಅನುಜ್ಞೆ ಪಡೆದು 12 ಮತ್ತರು ಭೂಮಿಯನ್ನು ಕ್ರಿ.ಶ.1121 ರಲ್ಲಿ ಭೂದಾನ ಮಾಡಿದನು. ಶಾಸನೋಕ್ತ ದಾಖಲೆಯಂತೆ ಕಲ್ಯಾಣ ಚಾಲುಕ್ಯರ ಮತ್ತು ಹೊಯ್ಸಳರ ಕಾಲದಲ್ಲಿ ಬೆಣ್ಣೆ ದೊಣೆಯೂರು ನಂತರ “ಬೆಂಡೋಣೆ”ಯಾಯಿತು. ಇದೇ ಗ್ರಾಮವನ್ನು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಚಿತ್ರದುರ್ಗದ ಹಿಡಿಂಬೇಶ್ವರ ದೇವರಿಗೆ ದಾನಗ್ರಾಮವಾಗಿ ನೀಡಿದ ಕಾರಣ ಇದಕ್ಕೆ “ಇಡುಬಯ್ಯ ದೇವರ ಸೋಮಪುರ” ಎಂಬ ಹೆಸರಿನಿಂದಲೂ ಕರೆಯಲಾಗಿದೆ. ಈಗ ಈ ಗ್ರಾಮವು ಬೇಚರಾಕ್ ಗ್ರಾಮವಾಗಿದೆ.

ಗ್ರಾಮದ ಮಂದಿರಗಳ ಪರಿಚಯ:

1.ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನ: ಗ್ರಾಮದ ಮಧ್ಯಭಾಗದಲ್ಲಿರುವ ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು, ಪೂರ್ವಾಭಿಮುಖವಾಗಿದೆ. ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ದೇವಸ್ಥಾನದಲ್ಲಿ ಗರ್ಭಗೃಹ, ಸಭಾಮಂಟಪಗಳಿದ್ದು, ಗರ್ಭಗೃಹದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮೀ ಶಿಲ್ಪವನ್ನು ಪ್ರತಿಷ್ಟಾಪಿಸಲಾಗಿದೆ.ಪ್ರತಿವರ್ಷ ಈ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಸಲಾಗುತ್ತದೆ. ಸಿಡಿ ಉತ್ಸವ ಪ್ರಮುಖ ಆಚರಣೆಯಾಗಿದೆ.

2.ಆಂಜನೇಯಸ್ವಾಮಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ದಕ್ಷಿಣಾಭಿಮುಖವಾಗಿದೆ. ಈ ದೇವಾಲಯವು ಹಿಂದೆ ಹಳೆಗ್ರಾಮದ ಹೊರಭಾಗವಾಗಿದ್ದಿತು. ಇದರ ಹತ್ತಿರದ ಗುಡ್ಡೆಕಲ್ಲು ಹಿಂದೆ ಗ್ರಾಮದ ಗಡಿಕಲ್ಲು ಆಗಿದ್ದತು.ಈ ದೇವಾಲಯದ ಕಾಂಪೌಂಡ್ ಗೋಡೆಯ ಬಳಿಯಲ್ಲಿ ಹಿಂದಿನ ಕೋಟೆ ಗೋಡೆಯ ಕುರುಹುಗಳನ್ನು ಕಾಣಬಹುದು. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಪಾಳೆಯಗಾರರ ಕಾಲದ ಆಂಜನೇಯನ ಶಿಲ್ಪವನ್ನು ಕಾಣಬಹುದಾಗಿದೆ.ಈ ದೇವರ ಉತ್ಸವವನ್ನು ಪ್ರತಿವರ್ಷ ನಡೆಸಲಾಗುತ್ತದೆ.

3.ಬಸವೇಶ್ವರ ದೇವಸ್ಥಾನ: ಗ್ರಾಮದ ಮಧ್ಯಭಾಗದಲ್ಲಿರುವ ಬಸವೇಶ್ವರ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು ,ಗ್ರಾಮ ಪಂಚಾಯಿತಿ ಕಚೇರಿಯ ಎದುರಿನಲ್ಲಿದೆ. ಈ ದೇವಾಲಯವನ್ನು ಪೂರ್ವಾಭಿಮುಖವಾಗಿದ್ದು,ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ. ಗರ್ಭಗೃಹದಲ್ಲಿ ಬಸವಣ್ಣ ದೇವರನ್ನು ಪೂಜಿಸಲಾಗುತ್ತದೆ .

ಇದರ ಜೊತೆಯಲ್ಲಿ ಗ್ರಾಮದಲ್ಲಿ ಗೌರಸಮುದ್ರ ಮಾರಮ್ಮ ,ಕಾಳಿಕಾಂಬ ದೇವಾಲಯ ,ಒಂದು ಮಸೀದಿ ಹಾಗೂ ಗ್ರಾಮದ ಹೊರಭಾಗದಲ್ಲಿ ಗೊಲ್ಲಾಳಮ್ಮ ದೇವಾಲಯ, ಲಂಬಾಣಿ ಹಟ್ಟಿಯಲ್ಲಿ ಸೇವಾಲಾಲ್ ಸ್ವಾಮಿ ದೇವಾಲಯಗಳಿವೆ.

4.ಮದಕರಿಪುರ ಗ್ರಾಮದ ಉತ್ತರಕ್ಕೆ ಇರುವ ಕಲ್ಲೇಶ್ವರ (ಸೋಮನಾಥ) ದೇವಾಲಯದ ಪರಿಚಯ.

ಚಿತ್ರದುರ್ಗ- ಚಳ್ಳಕೆರೆ ರಸ್ತೆಯ ಮದಕರಿಪುರ ಗ್ರಾಮದ ಉತ್ತರಕ್ಕೆ ರೈಲ್ವೆ ಹಳಿಯನ್ನು ದಾಟಿ, ಹೊಸ ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಮುಂದೆ ಹೋದರೆ ಪ್ರಾಚೀನ ದೇಗುಲವೊಂದು ಒಂದು ದೊಡ್ಡ ಆಲದ ಮರದ ಬಳಿ ಗೋಚರಿಸುತ್ತದೆ.

ಕಲ್ಲೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು ,ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ 12ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಕನಿಷ್ಠ ಸ್ಥಿತಿಯ ಸಂರಕ್ಷಣೆಯಲ್ಲಿ ಇರುವ ಈ ಮಂದಿರಕ್ಕೆ ಸುರಕ್ಷತೆ ಹಾಗೂ ಸಂರಕ್ಷಣೆ ಬೇಕಾಗಿದೆ. ದೇವಾಲಯವಿರುವ ಸ್ಥಳವು ಬೇಚರಾಕ್ ಗ್ರಾಮವಾಗಿದೆ. ಇಂದು ಇಲ್ಲಿ ಜನವಸತಿಯಿಲ್ಲ.ದೇವಾಲಯವು ಗರ್ಭಗೃಹ ,ಅರ್ಧಮಂಟಪ ,ನವರಂಗ ಹಾಗೂ ಪ್ರಾಕಾರ ಗೋಡೆಗಳಿಂದ ಕೂಡಿದೆ.

 

ದೇವಾಲಯದ ಗರ್ಭಗೃಹದಲ್ಲಿ ಮೂರು ಅಡಿಗಳ ಎತ್ತರದ ಪ್ರತಿಷ್ಠಾಪನ ಲಿಂಗವಿದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಪೂರ್ಣ ಕಂಬಗಳ ಉಬ್ಬು ಗೆತ್ತನೆಗಳಿವೆ .ಅಂತರಾಳದಲ್ಲಿ ಒಂದು ಅಡಿ ಎತ್ತರ,ಎರಡು ಅಡಿಗಳಷ್ಟು ಉದ್ದವಿರುವ ನಂದಿಯ ಶಿಲ್ಪವಿದೆ .ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಇವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿವೆ.ಈ ಕಂಬಗಳು ಅರ್ಧ ಅಡಿ ಎತ್ತರದ ಪೀಠದ ಮೇಲಿದೆ. ಇವುಗಳ ದಿಂಡನ್ನು ಕೆಳಭಾಗದಲ್ಲಿ ಚಚ್ಚೌಕ ವಾಗಿ, ಮಧ್ಯಭಾಗವನ್ನು ಬಹುಮುಖಗಳಲ್ಲಿ ,ಮೇಲ್ಭಾಗವನ್ನು ಚಚ್ಚೌಕ ಹಾಗೂ ವೃತ್ತಾಕಾರಗಳಲ್ಲಿ ಕಡೆದಿರುವರು .ಕಂಬದ ಮೇಲೆ ಚಕ್ರ ರೂಪದ ವೃತ್ತಾಕಾರದ ಬೋದಿಗೆ ಮತ್ತು ಚಚ್ಚೌಕವಾದ ಫಲಕಗಳಿವೆ .ನವರಂಗದ ಮೇಲಿನ ಭುವನೇಶ್ವರಿಯಲ್ಲಿ ಮುಗುಚಿದ ಪದ್ಮವನ್ನು ಚಿತ್ರಿಸಿರುವರು. ನವರಂಗದ ಸುತ್ತಲೂ ಗೋಡೆಯನ್ನು ಇತ್ತೀಚೆಗೆ ಕಟ್ಟಲಾಗಿದೆ. ನವರಂಗದ ಸುತ್ತಲೂ ಕುಳಿತುಕೊಳ್ಳಲು ಅನುವಾಗುವ ಕಕ್ಷಾಸನವಿದೆ. ಇದರ ಎಡಬದಿಯ ಗೋಡೆಯಲ್ಲಿ ಸಪ್ತಮಾತೃಕೆಯರ ಶಿಲಾ ಪಟ್ಟಿಕೆ ಮತ್ತು ಗಜಲಕ್ಷ್ಮಿ ಶಿಲ್ಪಗಳಿವೆ. ನವರಂಗದ ಮುಂಭಾಗದ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಯಾಳಿಗಳನ್ನು ಕಡೆದಿರುವರು. ದೇವಾಲಯದ ಗರ್ಭಗೃಹದ ಮೇಲ್ಭಾಗದಲ್ಲಿ ಶಿಖರವಿದ್ದು ಇದು ಪಾಂಸನ ಮಾದರಿಯದ್ದಾಗಿದೆ.ಪಿರಮಿಡ್ ನ ಆಕಾರದಲ್ಲಿರುವ ಶಿಖರವು ಎಂಟು ಹಂತಗಳಲ್ಲಿದೆ. ಮೇಲೆ ಮುಗುಚಿದ ಬೇಸಿನ್ ಆಕಾರದ ಶಿಖರ ಹಾಗೂ ಮೇಲ್ಭಾಗದಲ್ಲಿ ಕಲ್ಲಿನ ಕಳಸ ಗಳಿವೆ. ಈ ದೇಗುಲದ ಪೂಜಾ ಕಾರ್ಯಗಳನ್ನು ಶ್ರಾವಣ ಮಾಸದಲ್ಲಿ ಹಮ್ಮಿಕೊಳ್ಳಲಾಗುವುದು.ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭ,ಎರಡು ಶಿಲಾಶಾಸನಗಳು,ಕೈಮುಗಿದು ನಿಂತ ರಾಜಸ್ತ್ರೀ, ನಂದಿ, ನಾಗರಕಲ್ಲು ಹಾಗೂ ನಾಲ್ಕು ವೀರಗಲ್ಲುಗಳಿವೆ.ಒಂದು ಶಿಲಾಶಾಸನವು ಕ್ರಿ.ಶ.1199 ಕ್ಕೆ ಸೇರಿದ್ದು, ಕಲ್ಯಾಣ ಚಾಲುಕ್ಯ ಅರಸ ಆರನೇ ವಿಕ್ರಮಾದಿತ್ಯನನ್ನು ಉಲ್ಲೇಖಿಸುತ್ತದೆ. ವಿಕ್ರಮಾದಿತ್ಯನನ್ನು ತ್ರಿಭುವನಮಲ್ಲನೆಂದು ಕರೆದಿದೆ . ಅಲ್ಲದೆ ಇವನು ಮಹಾಮಂಡಲೇಶ್ವರನಾದ ತ್ರಿಭುವನಮಲ್ಲ ಪಾಂಡ್ಯನು ನೊಳಂಬವಾಡಿ 36000 ವನ್ನು ನೋಡಿಕೊಳ್ಳುತ್ತಿದ್ದನು ಎಂದಿದೆ. ಉದಯಾದಿತ್ಯ ನಾಯಕರ ಸುಪುತ್ರನಾದ ಲಕ್ಷ್ಮಿಕಾಂತನು ಇವನ ಮಹಾ ಸಾಮಂತನಾಗಿದ್ದನು.ಆಗ ಕಾಮಯ್ಯ ನಾಯಕನು ಬೆಂಮತ್ತನೂರ ನೆಲೆವೀಡಿನಲ್ಲಿ ಆಳುತ್ತಿರುವಾಗ ಅವನ ಅಧಿಕಾರಿ ಹಡುವಂಗೆರೆಯ ಹರಿಯಮ ಗಾವುಂಡನು ಬೆಂಣೆದೊಣೆಯೂರ ನಡುವೆ ಇರುವ ಶ್ರೀ ಸೋಮನಾಥ ದೇವರ ದೇವಾಲಯವನ್ನು ಉತ್ತುಂಗ, ಪ್ರಾಸಾದ, ಶಿಖರ, ಕಳಸಗಳನ್ನು ಕಲ್ಲಿನಲ್ಲಿ ನಿರ್ಮಾಣ ಮಾಡಿಸಿ ದೇವರ ಅಂಗಭೋಗ ಪೂಜೆ ಪುನಸ್ಕಾರ, ನಂದಾದೀವಿಗೆ, ನೈವೇದ್ಯಗಳಿಗೆ ,ಪೂಜಾರಿಗಳಿಗೆ ,ಖಂಡ ಸ್ಫುಟಿತ ಜೀರ್ಣೋದ್ಧಾರಕ್ಕಾಗಿ ಒಟ್ಟು 12 ಮತ್ತರು ಭೂಮಿಯನ್ನು ದಾನ ನೀಡಿದನೆಂದು ಹೇಳುತ್ತದೆ.

 

ಇದರಿಂದ ಪ್ರಸ್ತುತ ದೇವಾಲಯವು 12ನೇ ಶತಮಾನದಲ್ಲಿ ಸೋಮನಾಥ ದೇವಾಲಯ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಈ ದೇವಾಲಯವನ್ನು ಸಂಪೂರ್ಣವಾಗಿ ಕಟ್ಟಿಸಿದುದಲ್ಲದೆ ಅದರ ನಿರ್ವಹಣೆಗೆ ಭೂಮಿಯನ್ನು ದಾನ ನೀಡಿದವನು ಹರಿಯಮ ಗವುಡ ನೆಂಬುದು ದೃಢವಾಗುತ್ತದೆ. ಪ್ರಾಚೀನ ಕಾಲದ ಈ ದೇಗುಲವು ಇಂದು ರಕ್ಷಣೆ ಇಲ್ಲದೆ ಶಿಥಿಲವಾಗಿದೆ .ಈ ದೇವಾಲಯ ಮತ್ತು ಶಿಲ್ಪಾವಶೇಷಗಳನ್ನು ರಕ್ಷಿಸುವ ಅಗತ್ಯವಿದೆ.

# ಮದಕರಿಪುರ ಗ್ರಾಮಕ್ಕೆ ಸಂಬಂಧಿಸಿದಂತೆ ಇತಿಹಾಸವನ್ನು ಸಂಕ್ಷೇಪಿಸಿ ಬರೆದವರು.
ದಾಸೇಗೌಡ.ಎಂ.ಆರ್.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು,ಮದಕರಿಪುರ, ಚಿತ್ರದುರ್ಗ ತಾಲೂಕು.
ಫೋನ್:9742761208.

 

#ಆಕರ ಗ್ರಂಥಗಳು:
1.ಕೆ.ಪಿ.ಎಂ.ಗಣೇಶಯ್ಯ ಸಂಪಾದಿಸಿದ “ಮೆದಿಕೇರಿಪುರ ಗ್ರಾಮ ದರ್ಶನ”
2.ಸಿ.ಎಂ.ತಿಪ್ಪೇಸ್ವಾಮಿ ಅವರ ಕೃತಿ, “ಉಚ್ಛಂಗಿ ಪಾಂಡ್ಯರು”.
3.ಎಸ್.ವೈ.ಸೋಮಶೇಖರ್. ಹಂಪಿ.ವಿ.ವಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...