Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಕಿಂಗ್ ಸ್ಟಡಿ : 40 ವರ್ಷಕ್ಕೂ ಮುನ್ನವೇ ಮುಟ್ಟು ನಿಂತರೆ ಹೃದಯಾಘಾತ, ಪಾರ್ಶ್ವವಾಯು ಅಪಾಯ ಶೇ. 40 ರಷ್ಟು ಹೆಚ್ಚು!

---Advertisement---

ದೆಹಲಿ: 40 ವರ್ಷ ವಯಸ್ಸಿಗಿಂತ ಮುಂಚಿತವಾಗಿಯೇ ಋತುಬಂಧಕ್ಕೆ (ಮುಟ್ಟು ನಿಲ್ಲುವುದು) ಒಳಗಾಗುವ ಮಹಿಳೆಯರಲ್ಲಿ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ನಂತಹ ಗಂಭೀರ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಗಣನೀಯವಾಗಿ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ.

ವಿಶ್ವಪ್ರಸಿದ್ಧ ‘ದಿ ಲ್ಯಾನ್ಸೆಟ್ ಅಬ್ಸ್ಟೆಟ್ರಿಕ್ಸ್, ಗೈನಕಾಲಜಿ ಅಂಡ್ ವುಮೆನ್ಸ್ ಹೆಲ್ತ್’ (The Lancet Obstetrics, Gynaecology & Women’s Health) ನಿಯತಕಾಲಿಕೆಯಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.

ವಿಶ್ವದ 26 ದೇಶಗಳ 1,11,600 ಕ್ಕೂ ಹೆಚ್ಚು ಮಹಿಳೆಯರ ದತ್ತಾಂಶವನ್ನು ಬಳಸಿ ‘ಪ್ಯೂರ್’ (PURE – Prospective Urban Rural Epidemiologic) ಸಂಸ್ಥೆಯ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.45 ವರ್ಷದ ಆಸುಪಾಸಿನಲ್ಲಿ ಮುಟ್ಟು ನಿಲ್ಲುವ ಮಹಿಳೆಯರಿಗೆ ಹೋಲಿಸಿದರೆ, 40 ರಿಂದ 44 ವರ್ಷದೊಳಗೆ ಆರಂಭಿಕ ಋತುಬಂಧಕ್ಕೆ ಒಳಗಾಗುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಶೇಕಡಾ 30 ರಿಂದ 40 ರಷ್ಟು ಹೆಚ್ಚು ಇರುತ್ತದೆ.

ಈ ಅಧ್ಯಯನದಲ್ಲಿದ್ದ 7,872 ಭಾರತೀಯ ಮಹಿಳೆಯರ ಪೈಕಿ ಶೇ. 18.4 ರಷ್ಟು (1,445 ಮಹಿಳೆಯರು) ಅವಧಿಗೆ ಮುನ್ನವೇ (Premature Menopause) ಮುಟ್ಟು ನಿಲ್ಲುವ ಸಮಸ್ಯೆಗೆ ಒಳಗಾಗಿದ್ದಾರೆ. ಭಾರತೀಯ ಮಹಿಳೆಯರಲ್ಲಿ ಋತುಬಂಧದ ಸರಾಸರಿ ವಯಸ್ಸು ಕೇವಲ 44.6 ವರ್ಷಗಳಾಗಿದೆ. ಒಟ್ಟಾರೆಯಾಗಿ, ಶೇ. 43.6 ರಷ್ಟು ಭಾರತೀಯ ಮಹಿಳೆಯರು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಋತುಬಂಧವನ್ನು ಎದುರಿಸುತ್ತಿದ್ದಾರೆ.

ಯುರೋಪ್ (47.8 ವರ್ಷ) ಮತ್ತು ಶ್ರೀಮಂತ ದೇಶಗಳಿಗೆ (48 ವರ್ಷ) ಹೋಲಿಸಿದರೆ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಹಾಗೂ ಕಡಿಮೆ ಆದಾಯವಿರುವ ದೇಶಗಳ ಮಹಿಳೆಯರಲ್ಲಿ ಸರಾಸರಿ 44.7 ವರ್ಷಕ್ಕೇ ಮುಟ್ಟು ನಿಲ್ಲುತ್ತಿದೆ ಎಂದು ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕಿ ಡಾ. ಸಿಮೋನ್ ಮಾರ್ಷ್ನರ್ ತಿಳಿಸಿದ್ದಾರೆ.

ಭಾರತೀಯ ಮಹಿಳೆಯರಿಗೆ ಇದು ಏಕೆ ಮುಖ್ಯ?

ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಮುನ್ನ ಉತ್ಪತ್ತಿಯಾಗುವ ಸ್ತ್ರೀ ಹಾರ್ಮೋನ್ಗಳು (Estrogen) ಅವರ ರಕ್ತದ ಲಿಪಿಡ್ಗಳು, ದೇಹದ ಕೊಬ್ಬಿನ ವಿತರಣೆ ಮತ್ತು ರಕ್ತನಾಳಗಳನ್ನು ರಕ್ಷಿಸುತ್ತವೆ. ಹೀಗಾಗಿ ಅವರಿಗೆ ಹೃದಯಾಘಾತದ ಭಯ ಕಡಿಮೆ ಇರುತ್ತದೆ.ಆದರೆ, ಒಮ್ಮೆ ಮುಟ್ಟು ನಿಂತರೆ ಈ ಹಾರ್ಮೋನ್ಗಳ ರಕ್ಷಣೆ ಇಲ್ಲದಂತಾಗುತ್ತದೆ. ಆಗ ಮಹಿಳೆಯರಲ್ಲೂ ಪುರುಷರಷ್ಟೇ ಸಮಾನವಾಗಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರಾದ ಡಾ. ಕೆ. ಶ್ರೀನಾಥ್ ರೆಡ್ಡಿ ವಿವರಿಸಿದ್ದಾರೆ.
ಬೇಗ ಮುಟ್ಟು ನಿಲ್ಲಲು ಕಾರಣಗಳೇನು?
ಡಾ. ರೆಡ್ಡಿ ಅವರ ಪ್ರಕಾರ, ಭಾರತದಂತಹ ದೇಶಗಳಲ್ಲಿ ಮಹಿಳೆಯರಲ್ಲಿ ಬೇಗ ಮುಟ್ಟು ನಿಲ್ಲಲು ಈ ಕೆಳಗಿನ ಅಂಶಗಳು ಕಾರಣವಾಗಿವೆ

ಮಾನಸಿಕ ಒತ್ತಡ ಮತ್ತು ಅಪೌಷ್ಟಿಕತೆ: ಅತಿಯಾದ ಸ್ಟ್ರೆಸ್, ಹಣ್ಣು ಹಾಗೂ ಕಾಳುಗಳಿಲ್ಲದ ಸಂಸ್ಕರಿಸಿದ ಆಹಾರ ಪದ್ಧತಿ.

ಧೂಮಪಾನದ ಪ್ರಭಾವ: ಮಹಿಳೆಯರು ಸ್ವತಃ ಧೂಮಪಾನ ಮಾಡುವುದು ಮಾತ್ರವಲ್ಲದೆ, ಮನೆಯಲ್ಲಿ ಪುರುಷರು ಮಾಡುವ ಧೂಮಪಾನದ ಹೊಗೆಯನ್ನು ಸೇವಿಸುವುದರಿಂದಲೂ (Passive Smoking) ಬೇಗ ಮುಟ್ಟು ನಿಲ್ಲಬಹುದು.

ಪರಿಸರ ಮಾಲಿನ್ಯ ಮತ್ತು ಜಾಗತಿಕ ತಾಪಮಾನ: ಹವಾಮಾನ ಬದಲಾವಣೆ ಮತ್ತು ರಾಸಾಯನಿಕ ಮಾಲಿನ್ಯಗಳು ಅಂಡಾಶಯದ ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತವೆ.
ಮಧುಮೇಹ ಮತ್ತು ನಿದ್ದೆಯ ಕೊರತೆ: ಮಧುಮೇಹ (Diabetes) ಹಾಗೂ ಸರಿಯಾಗಿ ನಿದ್ದೆ ಮಾಡದಿರುವುದು ಕೂಡ ಇದಕ್ಕೆ ಪ್ರಮುಖ ಕಾರಣ.
ಭಾರತೀಯ ಸಾಮಾಜಿಕ ಪರಿಸ್ಥಿತಿ: ಭಾರತದಲ್ಲಿ ಕಂಡುಬರುವ ರಕ್ತಹೀನತೆ (Anaemia), ಬಾಲ್ಯ ವಿವಾಹ, ಪದೇ ಪದೇ ಗರ್ಭಧಾರಣೆ ಹಾಗೂ ಪೌಷ್ಟಿಕಾಂಶದ ಕೊರತೆ ಕೂಡ ಇದರ ಮೇಲೆ ಪ್ರಭಾವ ಬೀರುತ್ತವೆ ಎಂದು ಆರೋಗ್ಯ ವೃತ್ತಿಪರರಾದ ಅರುಂಧತಿ ಮುರಳಿಧರನ್ ಹೇಳಿದ್ದಾರೆ.

ಮುಂದಿರುವ ಪರಿಹಾರವೇನು?

ಭಾರತದಲ್ಲಿ ಈಗಾಗಲೇ ಮಧುಮೇಹ, ರಕ್ತದೊತ್ತಡ (BP) ಮತ್ತು ಕ್ಯಾನ್ಸರ್ ತಪಾಸಣೆಗೆ ಬಲವಾದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಿವೆ. ಆದರೆ, ವೈದ್ಯರು ಮಹಿಳೆಯರ ಹೃದಯದ ಆರೋಗ್ಯವನ್ನು ತಪಾಸಣೆ ಮಾಡುವಾಗ ಅವರ ಮುಟ್ಟು ನಿಂತ ವಯಸ್ಸಿನ ಇತಿಹಾಸವನ್ನು ಕೇಳುವುದು ಅಪರೂಪ.

ಈಗಿರುವ ಆರೋಗ್ಯ ಯೋಜನೆಗಳಲ್ಲೇ ‘ಮೆನೋಪಾಸ್ ಸ್ಕ್ರೀನಿಂಗ್’ (ಋತುಬಂಧದ ತಪಾಸಣೆ) ಅನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಯಾವ ಮಹಿಳೆಗೆ ಹೃದಯಾಘಾತದ ಅಪಾಯ ಹೆಚ್ಚಿದೆ ಎಂಬುದನ್ನು ಮೊದಲೇ ಪತ್ತೆಹಚ್ಚಿ, ಅವರ ಆರೋಗ್ಯಕರ ವೃದ್ಧಾಪ್ಯಕ್ಕೆ ನೆರವಾಗಬಹುದು. ಮಹಿಳೆಯರ ಆರೋಗ್ಯದ ಮೇಲಿನ ಸಾಮಾಜಿಕ ಮತ್ತು ಪರಿಸರ ಒತ್ತಡಗಳನ್ನು ಕಡಿಮೆ ಮಾಡಿದರೆ ಅವರ ಹೃದಯವನ್ನು ದೀರ್ಘಕಾಲ ಕಾಪಾಡಬಹುದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now