Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ ತಾಲ್ಲೂಕು ಲೋಕದೊಳಲು ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಹೊಳಲ್ಕೆರೆಯಿಂದ ಏಳು ಕಿಲೋಮೀಟರ್ ದೂರವಿರುವ ಲೋಕದೊಳಲು ಗ್ರಾಮವು ಹೊಳಲ್ಕೆರೆ -ಹೊಸದುರ್ಗ ರಾಜ್ಯ ಹೆದ್ದಾರಿ 47 ರಲ್ಲಿ ಆಗ್ನೇಯ ದಿಕ್ಕಿನಲ್ಲಿದೆ.‌ ವಿಶ್ವನಾಥನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ಗ್ರಾಮವು, ಐತಿಹಾಸಿಕ ಶಾಸನಸ್ಥ ಸ್ಥಳವಾಗಿದೆ .ತಾಲೂಕಿನ ಅತೀ ಪುರಾತನ ಜನವಸತಿ ಪ್ರದೇಶವಾದ ಇದರ ಮೂಲ ಹೆಸರು ಲೋಕಾಯತಪೊಳಲ್.

ಹಿಂದೆ ಇಲ್ಲಿ ಲೋಕಾಯತರು (ಚಾರ್ವಾಕರು-ನಾಸ್ತಿಕರು) ಎಂಬ ಪಂಥದವರು ವಾಸವಿದ್ದ ಪ್ರದೇಶವಾಗಿತ್ತು. ಇದೇ ಮುಂದುವರೆದು
ಲೋಕಾಯತರವೊಳಲು ಆಗಿ ಲೋಕದೊಳಲು ಆಗಿದೆ. ಇಂದಿಗೂ ಆಡುಭಾಷೆಯಲ್ಲಿ ಜನರು ಈ ಗ್ರಾಮವನ್ನು ಲೋಕ್ ದೊಳ್ ಎನ್ನುತ್ತಾರೆ .
ಗ್ರಾಮದ ಮೂಲ ಸ್ಥಳ ಈಗ ಇರುವ ಗ್ರಾಮದಿಂದ 1/4 ಕಿಲೋಮೀಟರ್ ಆಗ್ನೇಯ ದಿಕ್ಕಿಗೆ ಹಾಳೂರು ಎಂಬ ಜಾಗದಲ್ಲಿ ಇತ್ತು. ಅದರ ಹತ್ತಿರದ ಜಾಗದಲ್ಲಿ ಕೆರೆ ಇದ್ದು ,ಇದನ್ನು ಸಿಡಿಲ ಕೆರೆ ಎನ್ನಲಾಗುತ್ತದೆ .ಕೆರೆಯ ಏರಿಯ ಬಳಿ ಪ್ರಾಚೀನ ಸಿದ್ದೇಶ್ವರನ (ಸಿಡಿಲೇಶ್ವರ )ದೇವಸ್ಥಾನವಿದೆ. ಕ್ರಿಸ್ತಶಕ 10ನೇ ಶತಮಾನದಲ್ಲಿ ಈ ಪ್ರದೇಶವು ರಾಷ್ಟ್ರಕೂಟ ಸಾಮ್ರಾಜ್ಯದ ಭಾಗವಾದ ಕದಂಬಳಿಗೆ ನಾಡಿಗೆ ಸೇರಿತ್ತು.ಒಂದು ಉಲ್ಲೇಖದಂತೆ ಅಂದಿನ ದೊರೆ ಅಕಾಲವರ್ಷನ ಕಾಲದಲ್ಲಿ ಕ್ರಿಸ್ತಶಕ 968 ರಲ್ಲಿ ಶೂದ್ರಕಯ್ಯ ಎಂಬುವನು ಈಗಿನ ಸಿದ್ದೇಶ್ವರ ದೇವಾಲಯವನ್ನು ಕಟ್ಟಿಸಿ,ದಿವ್ಯಲಂಗಿ ಎಂಬ ವೀರಶೈವ ಸ್ವಾಮೀಜಿಯವರಿಗೆ ಲೋಕದೊಳಲು ಹಾಗೂ ಗುಂಡೇರಿ ಗ್ರಾಮಗಳಿಗೆ ಸೇರಿದ ಜಮೀನು ಗಳನ್ನು ದೇವರ ಸೇವೆಗಾಗಿ ನೀಡುವ ಬಗ್ಗೆ ತಿಳಿಸುತ್ತದೆ . 16-17 ಶತಮಾನದಲ್ಲಿ ಆಳ್ವಿಕೆ ಮಾಡಿದ ಪಾಳೆಯಗಾರರು ಈ ಗ್ರಾಮದಲ್ಲಿ ನಿರ್ಮಿಸಿದ್ದ ಕೋಟೆ ಅವಶೇಷ,ನಿವೇಶನ, ಉತ್ತರ ದಿಕ್ಕಿನ ದ್ವಾರ ಬಾಗಿಲು ಇಂದಿಗೂ ಕಾಣಬಹುದಾಗಿದೆ.

 

ಗ್ರಾಮದಲ್ಲಿ ಮುಖ್ಯವಾಗಿ ಲಿಂಗಾಯತ ,ಸರ್ಪಒಕ್ಕಲಿಗ ಬೋವಿ ,ನಾಯಕ, ವೈಷ್ಣವ. ಮುಂತಾದ ಎಲ್ಲ ಜನಾಂಗದವರು ವಾಸವಾಗಿದ್ದಾರೆ .ಜಾನಪದ ಕಲೆಗಳ ನೆಲೆಬೀಡಾದ ಈ ಗ್ರಾಮದಲ್ಲಿ ಕೋಲಾಟ, ಭಜನೆ ,ಸೋಮನ ಕುಣಿತ, ವೀರಗಾಸೆ ,ತತ್ವಪದ ಮುಂತಾದ ಎಲ್ಲಾ ಪ್ರಕಾರದ ಕಲಾವಿದರಿದ್ದಾರೆ .ಹತ್ತಾರು ಊರುಗಳಿಗೆ ಹೋಗಿ ಪ್ರದರ್ಶನವನ್ನು ನೀಡಿ ಗ್ರಾಮದ ಹೆಸರನ್ನು ಮತ್ತಷ್ಟು ಪ್ರಸಿದ್ಧಿ ಮಾಡಿದ್ದಾರೆ.

 

1.ಲೋಕದೊಳಲು ಹಳೆಯ ಊರು ಜಾಗದಲ್ಲಿರುವ ಸಿದ್ದೇಶ್ವರ ದೇವಾಲಯ:

ಕ್ರಿಸ್ತಶಕ 12- 13 ನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾದ ಈ ಮಂದಿರ ಕೆರೆ ಏರಿಯ ಮೇಲೆ ದಕ್ಷಿಣಾಭಿಮುಖವಾಗಿ, ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ.ಈ ದೇವಾಲಯವು ಗರ್ಭಗೃಹ, ಅಂತರಾಳ ,ನವರಂಗ ಗಳಿಂದ ಕೂಡಿದ ದಕ್ಷಿಣಾಭಿಮುಖ ದ್ವಾರ ಉಳ್ಳ ದೇವಸ್ಥಾನವಾಗಿದೆ. ಪೂರ್ವಾಭಿಮುಖವಾಗಿದ್ದು ಎರಡೂವರೆ ಅಡಿ ಎತ್ತರದ ಪಾಣಿಪೀಠದ ಮೇಲೆ ಚಿಕ್ಕದಾದ ಕಪ್ಪು ಶಿಲೆಯ ಶಿವಲಿಂಗವಿದೆ.ಗರ್ಭಗೃಹದ
ಬಾಗಿಲುವಾಡದಲ್ಲಿ ಸ್ತಂಭ ಶಾಖೆಗಳಿವೆ. ಅಂತರಾಳದಲ್ಲಿ ಎರಡು ಅಡಿ ಎತ್ತರ ಹಾಗು ಮೂರು ಅಡಿ ಉದ್ದವಾದ ನಂದಿಯ ಶಿಲ್ಪವನ್ನು ಪ್ರತಿಷ್ಠಾಪಿಸಿದ್ದಾರೆ. ಇದರ ಬಾಗಿಲುವಾಡದಲ್ಲಿ ಶೈವ ದ್ವಾರಪಾಲಕರಿದ್ದಾರೆ.ದ್ವಾರಪಾಲಕರು ತ್ರಿಶೂಲ, ಡಮರುಗ,ಗದೆ ಹಾಗೂ ಅಭಯ ಮುದ್ರೆಗಳನ್ನು ಹಿಡಿದು ನಿಂತಿರುವರು.ಮೇಲ್ಭಾಗದಲ್ಲಿ ಸ್ತಂಭಶಾಖೆ,ಜಾಲಂಧ್ರಗಳಿವೆ.ಲಲಾಟದಲ್ಲಿ ಮುಂಚಾಚಿದ ಪಟ್ಟಿಕೆಗಳಿದ್ದು, ಅದರಲ್ಲಿ ಹೂಮೊಗ್ಗುಗಳಿವೆ. ನವರಂಗದ ನಾಲ್ಕು ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ .ಇವು ಪೀಠ, ದಿಂಡು ,ವೃತ್ತಾಕಾರದ ಹಲಗೆ,ಚಚ್ಚೌಕ ಫಲಕ ಹಾಗೂ ಬೋದಿಗೆಗಳನ್ನು ಹೊಂದಿವೆ. ನವರಂಗದಲ್ಲಿ ಗಣೇಶ, ಭೈರವನ ಪಾದಗಳಿವೆ.ಕರಂಡಮುಕುಟಧಾರಿಯಾದ ಗಣೇಶನ ಸುಖಾಸನದಲ್ಲಿ ಕುಳಿತಿದ್ದು ,ತನ್ನ ನಾಲ್ಕು ಕೈಗಳಲ್ಲಿ ,ಅಂಕುಶ,ಪಾಶ, ಲೇಖನಿ ಹಾಗೂ ಮೋದಕಗಳನ್ನು ಹಿಡಿದಿದ್ದಾನೆ .ಭೈರವನ ಪಾದಗಳಿಗೆ ಸರ್ಪವು ಸುತ್ತುವರೆದಿವೆ .ಸುತ್ತಲೂ ಎರಡು ಕುರಿಯ ತಲೆಗಳು ಮತ್ತು ಎರಡು ಮನುಷ್ಯನ ಶಿರಗಳನ್ನು ಚಿತ್ರಿಸಲಾಗಿದೆ. ಇದು ಪ್ರಾಚೀನ ಕಾಲದ ಪ್ರಾಣಿ ಮತ್ತು ನರ ಬಲಿಗಳನ್ನು ಪ್ರತಿನಿಧಿಸುತ್ತದೆ.

 

ದೇವಾಲಯವನ್ನು ಉಪಾನ, ಜಗತಿ,ತ್ರಿಪಟ್ಟ ಕುಮುದ,ಕಂಠ ಮತ್ತು ವೇದಿಗಳಿಂದ ನಿರ್ಮಿಸಿದ ಅಧಿಷ್ಟಾನದ ಮೇಲೆ ನಿರ್ಮಿಸಲಾಗಿದೆ.
ಅಂತರಾಳದ ಭಿತ್ತಿಯ ಮೇಲೆ ಹೂವಿನ ದಳಗಳ ಸಾಲುಗಳಿವೆ .ದೇವಾಲಯದ ಗರ್ಭಗೃಹದ ಮೇಲೆ ಪಾಂಸನ ಮಾದರಿಯ ಶಿಖರವಿದೆ .ಶಿಖರದ ಮೇಲೆ ಕಲ್ಲಿನ ವೃತ್ತಾಕಾರದ ಕಳಸವನ್ನು ಪ್ರತಿಷ್ಠಾಪಿಸಿರುವರು.ಈ ದೇವಾಲಯವನ್ನು ಕೆರೆಯ ಏರಿಯ ಮೇಲೆ ಕಟ್ಟಿರುವುದನ್ನು ಗಮನಿಸಿದರೆ ಕೆರೆ ನಿರ್ಮಾಣವಾದ ಬಳಿಕ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಬಹುದು.

 

ದೇವಾಲಯದ ಬಲಭಾಗ ಮತ್ತು ಮುಂಭಾಗದಲ್ಲಿ ಭೈರವಿ, ನಾಲ್ಕು ವೀರಗಲ್ಲುಗಳಿವೆ. ವೀರಗಲ್ಲುಗಳಲ್ಲಿ ಮೂರು ಶಾಸನೋಕ್ತ ವೀರಗಲ್ಲುಗಳಾಗಿವೆ. ಇವು ಕಾಳಗದಲ್ಲಿ ಹೋರಾಡಿ ಮಡಿದ ವೀರರ ಸ್ಮಾರಕಶಿಲ್ಪಗಳಾಗಿವೆ. ಒಂದು ವೀರಗಲ್ಲು ಗೋ ಗ್ರಹಣಕ್ಕೆ ಸಂಬಂಧಿಸಿದೆ. ಒಂದು ಶಾಸನದಲ್ಲಿ ಮುಮ್ಮಡಿ ಸಿಂಗೆಯನಾಯಕರ ಕೂಡ ಹೋರಾಡಿ ಸಂಗಯ್ಯ ನಾಯಕರು ಕಾದಿ ಸತ್ತಾಗ ಅವನ ತಮ್ಮ ಚೆಲುವಯ್ಯ ನಾಯಕನು ಈ ಶಿಲೆಯನ್ನು ಕಡೆಸಿದನೆಂದಿದೆ.ಇನ್ನೊಂದು ವೀರಗಲ್ಲು ಕ್ರಿ.ಶ.1245 ಕ್ಕೆ ಸೇರಿದ್ದು ಇದು ಕೂಡ ವೀರನೋರ್ವನು ಹೋರಾಡಿ ಮಡಿದ ವೀರನಿಗೆ ಸ್ಮಾರಕ ಶಿಲೆ ಆಗಿದೆ. ಇದನ್ನು ಕಡೆದವನು ಕಾಳೋಜ ಎಂಬ ಶಿಲ್ಪಿ ಯಾಗಿದ್ದಾನೆ.

ಕ್ರಿಸ್ತಶಕ 969 ರ ಶಾಸನದಲ್ಲಿ ಲೋಕದೊಳಲನ್ನು ಲೋಕಾಯ್ತವೊಳಲು ಎಂದು ಕರೆದಿದ್ದು, ಇದು ಕೂರವಾಡಿ 300 ರಲ್ಲಿ ಇತ್ತೆಂಬುದಾಗಿ ಹೇಳಿದೆ.ಈ ಹಿನ್ನೆಲೆಯಲ್ಲಿ ಲೋಕದೊಳಲು ಗ್ರಾಮವು ರಾಷ್ಟ್ರಕೂಟರ ಕಾಲದ ಹೊತ್ತಿಗೆ ಪ್ರಸಿದ್ಧಿಯನ್ನು ಪಡೆದಿತ್ತೆಂಬುದು ದೃಢವಾಗುತ್ತದೆ.

2.ಆಂಜನೇಯ ಸ್ವಾಮಿ ಮಂದಿರ:
ಗ್ರಾಮದ ಉತ್ತರದ ದ್ವಾರಬಾಗಿಲಲ್ಲಿರುವ ಈ ಮಂದಿರದ ಆಂಜನೇಯ ಮೂರ್ತಿ ಮೂರು ಅಡಿ ಎತ್ತರವಿದ್ದು, ಸ್ಥಳೀಯ ಶೈಲಿಯಲ್ಲಿ 18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ .ಇದನ್ನು ವ್ಯಾಸರಾಜ ತೀರ್ಥರು 15-16 ಶತಮಾನದಲ್ಲಿ ಅವರಿಂದ ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ.ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ.

3. ಲೋಕದೊಳಲು ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯ :
ಗ್ರಾಮದ ಮಧ್ಯ ಭಾಗದಲ್ಲಿರುವ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ಹದಿನೇಳು- ಹದಿನೆಂಟನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಪಾಳೇಗಾರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ. ಪೂರ್ವಾಭಿಮುಖವಾಗಿರುವ ಮಂದಿರದಲ್ಲಿ ಗರ್ಭಗೃಹ, ಅಂತರಾಳ ,ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿದೆ.ಗರ್ಭಗೃಹದಲ್ಲಿ ಹಿತ್ತಾಳೆಯ ರಂಗನಾಥ ,ಎಡಕ್ಕೆ ಲಕ್ಷ್ಮಿ ,ಬಲಗಡೆ ತೊಳಸಮ್ಮ ಮೂರ್ತಿಗಳಿವೆ. ಅಂದರೆ ಈ ದೇವಾಲಯವನ್ನು ಉತ್ಸವ ಮೂರ್ತಿಗಳಿಗೆ ಎಂದು ಕಟ್ಟಲಾಗಿದೆ .ಮುಖ್ಯ ದೇವಾಲಯವು ಗ್ರಾಮದ ಆಗ್ನೇಯ ದಿಕ್ಕಿನಲ್ಲಿ ಬೆಟ್ಟದ ಮೇಲೆ ಇದೆ.(3750 ಅಡಿ ಸಮುದ್ರ ಮಟ್ಟದಿಂದ) ಅದನ್ನು ದೊಡ್ಡಹೊಟ್ಟೆ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ಎಂದು ಕರೆಯುತ್ತಾರೆ. ಮೂಲ ದೇವಾಲಯ ಗರ್ಭಗೃಹವನ್ನು ಮಾತ್ರ ಹೊಂದಿದ ಮಂದಿರವಾಗಿದೆ. ಗರ್ಭಗೃಹದಲ್ಲಿರುವ ಬೃಹತ್ ಉಬ್ಬಿದ ಕಲ್ಲನ್ನು ಸ್ವಾಮಿಯ ಪ್ರತಿರೂಪ ಎಂದು ಆರಾಧಿಸಲ್ಪಡುತ್ತದೆ.ಬೆಟ್ಟವು ದೂರ ಹಾಗೂ ಹತ್ತಲು ಕಷ್ಟದ ಕಾರಣಕ್ಕೆ ಅದೇ ದೇವರ ಹೆಸರಿನಲ್ಲಿ ಗ್ರಾಮದಲ್ಲಿಉತ್ಸವ,ಆಚರಣೆಗಳಿಗಾಗಿ‌ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅಕ್ಕ ಪಕ್ಕದ ತಾಲ್ಲೂಕುಗಳ ಗ್ರಾಮಗಳಲ್ಲಿ ಹೊಸ ಮಂದಿರಗಳ ಉದ್ಘಾಟನೆ ಹಾಗೂ ಪ್ರತಿಷ್ಠಾಪನೆ ಇದ್ದಾಗ ಇಲ್ಲಿನ ಉತ್ಸವಮೂರ್ತಿಯನ್ನು ತೆಗೆದುಕೊಂಡು ಹೋಗಲಾಗುತ್ತದೆ .ಈ ದೇವರ ಸಮ್ಮುಖದಲ್ಲಿ ಹೊಸ ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ.

 

ಗ್ರಾಮದಲ್ಲಿರುವ ಈ ದೇವಾಲಯದ ಸಭಾ ಮಂಟಪದಲ್ಲಿ ಭೂತಪ್ಪ ,ಸೋಮ ಮತ್ತು ಕಬ್ಬಿಣದ ಬಾಣಪ್ಪಗಳನ್ನು ಇಡಲಾಗಿದೆ. ಮಂಟಪದ ಕಂಬಗಳನ್ನು ಚಚ್ಚೌಕ ಮತ್ತು 16 ಮುಖಗಳಲ್ಲಿ ಕಡೆಯಲಾಗಿದೆ. ಈ ದೇವಾಲಯದಲ್ಲಿ ಉತ್ಸವಾಚರಣೆಗಳು ವಿಜೃಂಭಣೆಯಿಂದ ನಡೆಯುತ್ತದೆ.ಪ್ರತಿವರ್ಷ ಚೈತ್ರಮಾಸದ ಪೌರ್ಣಮಿಯಲ್ಲಿ ಒಂದು ವಾರಗಳ ಕಾಲ ಜಾತ್ರೆಯನ್ನು ಆಚರಿಸಲಾಗುತ್ತದೆ. ಸುತ್ತಮುತ್ತಲಿನ ಏಳು ಗ್ರಾಮದ ಜನರು ಈ ಜಾತ್ರೆ ಯಲ್ಲಿ ಭಾಗವಹಿಸುವ ಕಾರಣಕ್ಕೆ ಇದನ್ನು ಏಳೂರ ಜಾತ್ರೆ ಎನ್ನಲಾಗುತ್ತದೆ. ಶನಿವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯುತ್ತವೆ. ಗ್ರಾಮದಲ್ಲಿ ದಾಸೋಹ ಭವನ ನಿರ್ಮಿಸಲಾಗಿದೆ. ಬರುವ ಭಕ್ತಾದಿಗಳಿಗೆ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ .ಪ್ರತಿ ಶನಿವಾರ ಇಲ್ಲಿ ದಾಸೋಹದ ವ್ಯವಸ್ಥೆ ಇರುತ್ತದೆ .

 

ಮಾಹಿತಿ:ಎಸ್. ವೈ.ಸೋಮಶೇಖರ್. ಹಂಪಿ. ವಿವಿ.

ಲೋಕದೊಳಲು ಗ್ರಾಮದ ವಿವರ‌.
ಗ್ರಾಮದ ಅಂಕಿಅಂಶ.
ಒಟ್ಟು ಮನೆ -166 .
ಒಟ್ಟು ಜನ ಸಂಖ್ಯೆ -789. ಭೌಗೋಳಿಕ ವಿಸ್ತೀರ್ಣ- 2356.20 ಹೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...