
ದಾವಣಗೆರೆ, ಏಪ್ರಿಲ್ 08: ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ವಿತರಣೆಯನ್ನು ಸುಗಮಗೊಳಿಸಲು ಹಾಗೂ ಕಾಳಸಂತೆ ಮಾರಾಟವನ್ನು ತಡೆಗಟ್ಟಲು ಕೃಷಿ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಖರೀದಿಸುವಾಗ ಆಧಾರ್ ಕಾರ್ಡ್ ಅಥವಾ ರೈತ ಗುರುತಿನ ಸಂಖ್ಯೆ (FID) ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
2026-27ನೇ ಸಾಲಿನಿಂದ ರಸಗೊಬ್ಬರ ಮಾರಾಟದ ಮೇಲೆ ನಿಗಾ ಇರಿಸಲು ಕೃಷಿ ಇಲಾಖೆಯು ವಿಶೇಷ ಆಪ್ ಬಿಡುಗಡೆ ಮಾಡಿದೆ. ಚಿಲ್ಲರೆ ಮಾರಾಟಗಾರರು ಈ ಆಪ್ ಮೂಲಕವೇ ಆಧಾರ್/FID ದಾಖಲಿಸಿ ಗೊಬ್ಬರ ವಿತರಿಸಬೇಕು. FID ಇಲ್ಲದ ರೈತರು ತಕ್ಷಣವೇ ತಮ್ಮ ಪಹಣಿ (RTC), ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ FID ನೋಂದಾಯಿಸಿಕೊಳ್ಳಬೇಕು. ರೈತರು ತಮ್ಮ FID ಯಲ್ಲಿ ಜಮೀನಿನ ವಿಸ್ತೀರ್ಣ ಮತ್ತು ಸರ್ವೇ ನಂಬರ್‌ಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿಯೇ ರಸಗೊಬ್ಬರವನ್ನು ವಿತರಿಸಲಾಗುವುದು.



















