ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08 : ಹನ್ನೆರಡು ಮಂದಿ ಸಿಬ್ಬಂದಿಗಳನ್ನು ಮೂರು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿರುವ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ವಿರುದ್ದ ಪ್ರತಿಭಟನೆ ನಡೆಸಿದ ಕರುನಾಡ ವಿಜಯಸೇನೆ ಕಾರ್ಯಕರ್ತರು ಬುಧವಾರ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು.

ಕರ್ತವ್ಯ ನಿರ್ಲಕ್ಷೆ ತೋರಿದ್ದಾರೆಂಬ ನೆಪದಲ್ಲಿ 12 ಮಂದಿ ಪೊಲೀಸರನ್ನು ಭಾನುವಾರ ಬಿಸಿಲಿನಲ್ಲಿ ಪಥಸಂಚಲನ ಹಾಗೂ ರೈಫಲ್ ಹೊತ್ತು ನಿಲ್ಲುವ ಶಿಕ್ಷೆ ನೀಡಿರುವ ಸಬ್ ಇನ್ಸ್ಪೆಕ್ಟರ್ ಸರ್ವಾಧಿಕಾರಿಯಂತೆ ವರ್ತಿಸಿರುವುದು ಸರಿಯಲ್ಲ. ಶಿಸ್ತು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಬಹುದಿತ್ತು. ಸಿಬ್ಬಂದಿಗಳನ್ನು ಕೇವಲವಾಗಿ ಕಾಣುವುದು ಯಾವ ನ್ಯಾಯ? ಬಿಸಿಲಿನಲ್ಲಿ ನಿಂತವರ ಪೈಕಿ ಕೆಲವರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿದೆ. ತುಂಬು ಗರ್ಭಿಣಿಯೊಬ್ಬರು ಶಿಕ್ಷೆಯಲ್ಲಿದ್ದರೆನ್ನುವುದು ಗೊತ್ತಾಗಿದೆ. ಹಾಗಾಗಿ ಪಿ.ಎಸ್.ಐ. ನೇತ್ರಾವತಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಜಿಲ್ಲಾ ರಕ್ಷಣಾಧಿಕಾರಿಯವರನ್ನು ಆಗ್ರಹಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಜಗದೀಶ್, ಪ್ರದೀಪ್, ಜಿಲ್ಲಾ ಉಪಾಧ್ಯಕ್ಷ ಮುಜಾಹಿದ್, ನಗರಾಧ್ಯಕ್ಷ ಅವಿನಾಶ್, ಶಶಿ, ನಿಸಾರ್ ಅಹಮದ್ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.













