ಬೆಂಗಳೂರು: ಸ್ಟಾರ್ ಗಳ ಹುಟ್ಟುಹಬ್ಬ ಬಂತು ಅಂದ್ರೆ ಅಭಿಮಾನಿಗಳಿಗೆ ಅದೇನೋ ಒಂಥರ ಸಂಭ್ರಮ. ಯಾಕಂದ್ರೆ ಈ ವಿಶೇಷ ದಿನದಂದಾದ್ರೂ ನೆಚ್ಚಿನ ನಟನನ್ನ ಭೇಟಿಯಾಗಬಹುದು, ನೋಡಬಹುದು ಎಂಬ ಆಸೆ. ಆದರೆ ಯಶ್ ಅಭಿಮಾನಿಗಳಿಗಂತು ಪ್ರತಿ ವರ್ಷವೂ ಬೇಸರ ಆಗ್ತಾನೆ ಇದೆ. ಈ ಬಾರಿಯೂ ಯಶ್ ತನ್ನ ಹುಟ್ಟುಹಬ್ಬಕ್ಕೆ ಸಿಗೊಲ್ಲ ಎಂಬುದನ್ನ ತಿಳಿಸಿದ್ದಾರೆ. ಜನವರಿ 8 ಅಂದ್ರೆ ನಾಳೆಯೇ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬವಿದೆ.
ನನ್ನ ಪ್ರೀತಿಯ ಅಭಿಮಾನಿಗಳೇ ನಿಜ ಹೇಳಬೇಕು ಎಂದರೆ ಕಳೆದ ಕೆಲವು ವರ್ಷಗಳಿಂದ ನೀವೂ ನನ್ನನ್ನು ಭೇಟಿಯಾಗಲು ಎಷ್ಟು ಕಾಯುತ್ತಿದ್ದೀರಿ ಎಂದು ನನಗೆ ಚೆನ್ನಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆ. ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿಯಾಗಲು ನಾನು ನಿಜವಾಗಿಯೂ ಬಯಸಿದ್ದೆ. ಆದರೆ 2026ರ ಮಾರ್ಚ್ 19 ರಂದು ನಿಮಗಾಗಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಲುವಾಗಿ ನಾನು ಈ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದೇನೆ. ಈ ಕಾರಣದಿಂದಾಗಿ ನಾನು ಈಗ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಯಶ್ ಅವರ ಟಾಕ್ಸಿಕ್ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಆ ನಿರೀಕ್ಷೆಗೆ ತಕ್ಕಂತೆ ಒಂದೊಂದೇ ಪಾತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ. ನಯನ ತಾರಾ ಪೋಸ್ಟರ್ ನೋಡಿ ಅಂತು ಫ್ಯಾನ್ಸ್ ಸೈಕ್ ಆಗಿದ್ದಾರೆ. ಮಾರ್ಚ್ 19ಕ್ಕೆ ಪ್ರಪಂಚದಾದ್ಯಂತ ರಿಲೀಸ್ ಗೆ ರೆಡಿಯಾಗಲಿದೆ. ಎಲ್ಲಾ ಅಭಿಮಾನಿಗಳು ಆ ದಿನಕ್ಕಾಗಿ ಕಾಯ್ತಾ ಇದ್ದಾರೆ.














