Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೋಲ್ಡ್ ಲೋನ್ `EMI’ ಕಟ್ಟದಿದ್ದರೆ ಒಡವೆ ಹರಾಜಾಗುತ್ತಾ? RBI ನಿಯಮಗಳು ಏನು ಹೇಳುತ್ತವೆ?

---Advertisement---

ನವದೆಹಲಿ : ಚಿನ್ನದ (Gold Loan) ಆಭರಣಗಳನ್ನು ಅಡವಿಟ್ಟು ಸಾಲ ಪಡೆದ ನಂತರ ಅನಿವಾರ್ಯ ಕಾರಣಗಳಿಂದ ಮಾಸಿಕ ಕಂತು (EMI) ಪಾವತಿಸಲು ಸಾಧ್ಯವಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಕೇವಲ ಒಂದು ಇಎಂಐ ತಪ್ಪಿದ ತಕ್ಷಣ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಆಭರಣಗಳನ್ನು ನೇರವಾಗಿ ಹರಾಜು ಹಾಕುವುದಿಲ್ಲ. ಆದರೆ ನಿರಂತರವಾಗಿ ಕಂತುಗಳು ಬಾಕಿ ಉಳಿದಾಗ ಮೊತ್ತ ಹೆಚ್ಚಾಗಿ ಸಾಲ ವಸೂಲಾತಿ ಪ್ರಕ್ರಿಯೆಗಳು ತೀವ್ರಗೊಳ್ಳುತ್ತವೆ. ಚಿನ್ನದ ಹರಾಜು ಪ್ರಕ್ರಿಯೆಯು ಸಾಲ ಒಪ್ಪಂದ, ಬಾಕಿ ಉಳಿಸಿಕೊಂಡ ಅವಧಿ ಹಾಗೂ ಆಯಾ ಬ್ಯಾಂಕಿನ ನೀತಿಗಳ ಮೇಲೆ ನಿರ್ಧಾರವಾಗುತ್ತದೆ.

ಎಷ್ಟು ಕಂತುಗಳು ತಪ್ಪಿದರೆ ಒಡವೆಗಳಿಗೆ ಅಪಾಯ?

ಇಂತಿಷ್ಟೇ ಕಂತುಗಳು ತಪ್ಪಿದರೆ ಚಿನ್ನವನ್ನು ಹರಾಜು ಹಾಕಬೇಕು ಎಂಬ ನಿರ್ದಿಷ್ಟ ನಿಯಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಡ್ಡಾಯಗೊಳಿಸಿಲ್ಲ ಎಂದು ತಜ್ಞರು ಸ್ಪಷ್ಟಪಡಿಸುತ್ತಾರೆ. ಆದರೆ ನಿರಂತರವಾಗಿ 90 ದಿನಗಳಿಗಿಂತ ಹೆಚ್ಚು ಕಾಲ ಪಾವತಿ ಬಾಕಿ ಉಳಿದರೆ, ಅಂತಹ ಸಾಲದ ಖಾತೆಯನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ವರ್ಗೀಕರಿಸಲಾಗುತ್ತದೆ. ಇದರಿಂದ ವಸೂಲಾತಿ ಪ್ರಕ್ರಿಯೆ ವೇಗ ಪಡೆದುಕೊಂಡು ಹರಾಜಿನ ಅಪಾಯ ಎದುರಾಗುತ್ತದೆ. ಬಾಕಿ ಅವಧಿಯನ್ನು ಅತ್ಯಂತ ಹಳೆಯ ಕಂತಿನಿಂದಲೇ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, ಜೂನ್ ತಿಂಗಳ ಇಎಂಐ ಬಾಕಿ ಉಳಿಸಿ ಜುಲೈ ಮತ್ತು ಆಗಸ್ಟ್ ಕಂತು ಪಾವತಿಸಿದರೂ ಜೂನ್ ತಿಂಗಳ ಬಾಕಿ ರದ್ದಾಗುವುದಿಲ್ಲ. ಆದ್ದರಿಂದ ಗ್ರಾಹಕರು ಮೊದಲು ಹಳೆಯ ಬಾಕಿ ಕಂತುಗಳನ್ನು ಚುಕ್ತಾ ಮಾಡಲು ಆದ್ಯತೆ ನೀಡಬೇಕು.

ಸಾಲ ವಸೂಲಾತಿ ಹಂತಗಳು ಹೇಗೆ ಸಾಗುತ್ತವೆ?

ಇಎಂಐ ಪಾವತಿಯಾಗದಿದ್ದಾಗ ಬ್ಯಾಂಕುಗಳು ಹಂತಹಂತವಾಗಿ ವಸೂಲಾತಿ ಕ್ರಮಗಳನ್ನು ಕೈಗೊಳ್ಳುತ್ತವೆ. ಮೊದಲ 1 ರಿಂದ 30 ದಿನಗಳ ಅವಧಿಯಲ್ಲಿ ದೂರವಾಣಿ ಕರೆ, ಎಸ್‌ಎಂಎಸ್ ಅಥವಾ ಮೊಬೈಲ್ ಆ್ಯಪ್ ಮೂಲಕ ಪಾವತಿ ನೆನಪೋಲೆಗಳನ್ನು ಕಳುಹಿಸಲಾಗುತ್ತದೆ. ಒಪ್ಪಂದದ ಅನ್ವಯ ದಂಡ ಅಥವಾ ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು. 30 ರಿಂದ 90 ದಿನಗಳ ಅವಧಿಯಲ್ಲಿ ಬಾಕಿ ಮೊತ್ತ ಪಾವತಿಸುವಂತೆ ಲಿಖಿತ ಎಚ್ಚರಿಕೆ ನೋಟಿಸ್ ಜಾರಿಯಾಗುತ್ತದೆ. 90 ದಿನಗಳು ಮೀರಿದ ನಂತರ ಖಾತೆಯನ್ನು ಎನ್‌ಪಿಎ ಎಂದು ಪರಿಗಣಿಸಿ ಕಾನೂನುಬದ್ಧ ವಸೂಲಾತಿ ಕ್ರಮಗಳನ್ನು ಬಿಗಿಗೊಳಿಸಲಾಗುತ್ತದೆ.

ಹರಾಜಿಗೆ ಮುನ್ನ ಬ್ಯಾಂಕುಗಳು ಪಾಲಿಸಬೇಕಾದ ನಿಯಮಗಳು

ಯಾವುದೇ ಸಂಸ್ಥೆ ಏಕಾಏಕಿ ಚಿನ್ನವನ್ನು ಮಾರಾಟ ಮಾಡಲು ಬರುವುದಿಲ್ಲ. ಹರಾಜಿಗಿಂತ ಮುಂಚಿತವಾಗಿ ಸಾಲಗಾರನಿಗೆ ಅಧಿಕೃತ ಎಚ್ಚರಿಕೆ ಮತ್ತು ಸೂಕ್ತ ಕಾಲಾವಕಾಶದ ನೋಟಿಸ್ ನೀಡುವುದು ಕಡ್ಡಾಯ. ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ ಬಂದ ಮೊತ್ತದಿಂದ ಸಾಲದ ಬಾಕಿ ಮತ್ತು ಸಂಬಂಧಿತ ಶುಲ್ಕಗಳನ್ನು ವಜಾ ಮಾಡಿಕೊಳ್ಳಲಾಗುತ್ತದೆ. ಸಾಲ ತೀರಿದ ನಂತರ ಉಳಿಯುವ ಹೆಚ್ಚುವರಿ ಹಣವನ್ನು ನಿಯಮಾನುಸಾರ ಗ್ರಾಹಕರಿಗೆ ಮರಳಿಸಲಾಗುತ್ತದೆ.

ಹರಾಜಿಗೆ ಮುನ್ನ ಒಡವೆಗಳನ್ನು ಮರಳಿ ಪಡೆಯಲು ಅವಕಾಶವಿದೆಯೇ?

ಅಡಮಾನವಿಟ್ಟ ಚಿನ್ನದ ಮಾರಾಟವು ಪಾರದರ್ಶಕ ಹರಾಜು ಪ್ರಕ್ರಿಯೆಯ ಮೂಲಕವೇ ನಡೆಯಬೇಕು. ಬ್ಯಾಂಕುಗಳು ತಮ್ಮಿಷ್ಟದಂತೆ ಒಡವೆಗಳನ್ನು ಮಾರಾಟ ಮಾಡುವಂತಿಲ್ಲ. ಹರಾಜು ಪ್ರಕ್ರಿಯೆ ಸಂಪೂರ್ಣ ಮುಕ್ತಾಯಗೊಳ್ಳುವ ಮುನ್ನವೇ ಗ್ರಾಹಕರು ಬಾಕಿ ಇರುವ ಅಸಲು, ಬಡ್ಡಿ ಹಾಗೂ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಿದರೆ ತಮ್ಮ ಆಭರಣಗಳನ್ನು ಮರಳಿ ಬಿಡಿಸಿಕೊಳ್ಳಲು ಪೂರ್ಣ ಹಕ್ಕಿರುತ್ತದೆ. ಆದರೆ ಒಮ್ಮೆ ಹರಾಜು ಅಧಿಕೃತವಾಗಿ ಮುಗಿದ ನಂತರ ಆಭರಣಗಳ ಮೇಲಿನ ಹಕ್ಕು ಸಂಪೂರ್ಣವಾಗಿ ರದ್ದಾಗುತ್ತದೆ.

Join WhatsApp

Join Now

Join Telegram

Join Now