ಚಿತ್ರದುರ್ಗ, ಆಗಸ್ಟ್. 01 : ಮಧ್ಯಕರ್ನಾಟಕದ ಜನ ಅತ್ಯಂತ ಸಂಕಷ್ಟದಲ್ಲಿದ್ದರೂ ನಾಡು-ನುಡಿ ವಿಷಯದಲ್ಲಿ ರಾಜ್ಯದ ಎಲ್ಲ ಭಾಗದ ಜನರ ಸಮಸ್ಯೆಗಳಿಗೆ ಅನಾದಿ ಕಾಲದಿಂದ ಸ್ಪಂದಿಸುತ್ತಲೇ ಬಂದಿದ್ದು, ಅದರ ಮುಂದುವರಿದ ಭಾಗವಾಗಿ ಪ್ರಸ್ತುತ ಕಾವೇರಿ ನೀರು ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲಲ್ಲಿದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲ ಎದುರುಗೊಂಡಿದ್ದು, ಕುಡಿಯುವ ನೀರಿಗೆ ಸಮಸ್ಯೆ ಉಲ್ಬಣಗೊಂಡಿದೆ. ಕೃಷಿ ಚಟುವಟಿಕೆ ಕೈಗೊಳ್ಳದಂತೆ ಸರ್ಕಾರವೇ ಸೂಚನೆ ನೀಡಿದೆ. ಜಲಾಶಯಗಳಲ್ಲಿನ ನೀರು ಕುಡಿಯುವುದಕ್ಕೆ ಬಳಸಲು ಮೀಸಲಿಡಲಾಗಿದೆ. ಇಂತಹ ಸಂಕಷ್ಟದ ಕಾಲಘಟ್ಟದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಕಾವೇರಿ ಪ್ರಾಧಿಕಾರದ ಸೂಚನೆ ಜನವಿರೋಧಿ ಆಗಿದೆ ಎಂದು ದೂರಿದ್ದಾರೆ.
ಪ್ರಾಧಿಕಾರದ ನೀತಿ ಖಂಡಿಸಿ ರಾಜ್ಯದ ಹಿತ ರಕ್ಷಣೆಗೆ ರಾಜ್ಯದ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಹೋರಾಟಕ್ಕೆ ಬಯಲುಸೀಮೆ ಪ್ರದೇಶದಲ್ಲಿ ಭದ್ರಾ ಮೇಲ್ದಂಡೆ ಜಾರಿಗಾಗಿ 25 ವರ್ಷಗಳಿಂದ ಹೋರಾಟ ನಡೆಸುತ್ತಿರುವ ನೀರಾವರಿ ಹೋರಾಟ ಸಮಿತಿ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹುಟ್ಟುವ ಅನೇಕ ನದಿಗಳು ಮತ್ತೊಂದು ರಾಜ್ಯದ ಪಾಲಿಗೆ ನೀರುಣಿಸುವಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ನದಿ ನೀರು ಹಂಚಿಕೆ ವಿಷಯದಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಆದರೂ ದೇಶದ ಜನರೆಲ್ಲರೂ ಒಂದೇ ಎಂಬ ವಿಶಾಲತೆಯ ಭಾವನೆಯಲ್ಲಿ ಕರುನಾಡಿನ ಜನ ಪ್ರದರ್ಶಿಸುತ್ತಿರುವ ಹೃದಯವಂತಿಕೆಯನ್ನೇ ದೌರ್ಬಲ್ಯವೆಂದು ಭಾವಿಸುವ ನಡೆಯನ್ನು ಅಕ್ಕಪಕ್ಕದ ರಾಜ್ಯದವರು ಕೈಬಿಡಬೇಕು. ಕೇಂದ್ರ ಸರ್ಕಾರ ಕೂಡ ಸಂಕಷ್ಟದಲ್ಲಿರುವ ರಾಜ್ಯದ ಜನರ ಹಿತ ಕಾಯಲು ನೀತಿ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.
ಬಯಲುಸೀಮೆ ಪ್ರದೇಶವಾದ ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆ ಜಗಳೂರು ಸೇರಿ ವಿವಿಧ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಸ್ಪರ ಆರೋಪಗಳಲ್ಲಿ ಕಿತ್ತಾಡುವ ನಡೆ ಸರಿಯಲ್ಲ. ಅದರಲ್ಲೂ ರಾಜ್ಯವನ್ನು ಪ್ರತಿನಿಧಿಸುವ ಲೋಕಸಭೆ, ರಾಜ್ಯಸಭೆ ಸದಸ್ಯರು ರಾಜ್ಯದ ಹಿತರಕ್ಷಣೆ ಒಗ್ಗೂಡಿ ಸಂಸತ್‌ನಲ್ಲಿ ಧ್ವನಿ ಮೊಳಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಮಿಳುನಾಡು ರಾಜಕಾರಣ ರಾಜ್ಯದ ರಾಜಕಾರಣಿಗಳಿಗೆ ಮಾದರಿ ಆಗಬೇಕು. ಅವರು ತಮ್ಮ ರಾಜ್ಯದ ಹಿತಕ್ಕಾಗಿ ಎಲ್ಲ ಪಕ್ಷಗಳು ಸದಸ್ಯರು ಒಂದಾಗಿ ಹೋರಾಟ ನಡೆಸುತ್ತಾರೆ. ಆದರೆ, ಕರ್ನಾಟಕ ರಾಜ್ಯದ ರಾಜಕಾರಣಿಗಳು ವಿಷಯದಲ್ಲಿ ವಿಭಿನ್ನ ನಿಲುವು ತಳೆಯುವುದು ಸರಿಯಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಜ್ಯದ ಯೋಜನೆಗಳಿಗೆ ಅನುಮತಿ, ಕಾವೇರಿ ನೀರು ವಿಷಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಬಿಡುಗಡೆ, ರಾಷ್ಟಿçÃಯ ಯೋಜನೆ ಘೋಷಣೆ, ಮೇಕೆದಾಟು ಯೋಜನೆಗೆ ಮನ್ನಣೆ ಸೇರಿ ಅನೇಕ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ತರಬೇಕು ಎಂದು ಕೋರಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಪ್ರದರ್ಶಿಸಿದರೆ ರಾಜ್ಯದ ರಾಜಕಾರಣಿಗಳು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಕೂಡ ಯಾವುದೇ ಭೀತಿಗೆ ಒಳಗಾಗದೇ ರಾಜ್ಯದ ಜನರ ಪರವಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವುದಿಲ್ಲವೆಂಬ ನಿರ್ಣಯ ಕೈಗೊಳ್ಳುವ ಜೊತೆಗೆ ಕಾನೂನು ಹೋರಾಟದಲ್ಲಿ ಜಯಗಳಿಸಲು ಬದ್ಧತೆ ಪ್ರದರ್ಶಿಸಬೇಕು. ಕಾವೇರಿ ಪರ ವಕಾಲತ್ತು ನಡೆಸುವ ನ್ಯಾಯವಾದಿಗಳಿಗೆ ಕೋಟ್ಯಂತರ ರೂ. ಶುಲ್ಕ ಪಾವತಿಸುತ್ತಿದ್ದರೂ ಪದೇ ಪದೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಗಂಭೀರ ಚಿಂತನೆ ಕೈಗೊಳ್ಳಬೇಕು. ಕಾವೇರಿ ರಾಜಕೀಯ ಅಸ್ತçವನ್ನಾಗಿಸಿಕೊಳ್ಳದೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಈ ವಿಷಯದಲ್ಲಿ ರಾಜ್ಯದ ಎಲ್ಲ ಪಕ್ಷಗಳ ರಾಜಕಾರಣಿಗಳು ಒಗ್ಗಟ್ಟಿನ ಧ್ವನಿ ಮೊಳಗಿಸಬೇಕೆಂದು ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಬಂಜಗೆರೆ ಜಯಪ್ರಕಾಶ್, ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ ಮಹೇಶಬಾಬು, ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಬೇಡರರೆಡ್ಡಿಹಳ್ಳಿ ಬಸವರೆಡ್ಡಿ, ಆರ್.ಶೇಷಣ್ಣಕುಮಾರ್, ಕೂನಿಕೆರೆ ರಾಮಣ್ಣ, ಕೆ.ಟಿ.ತಿಪ್ಪೇಸ್ವಾಮಿ, ಲಕ್ಷ್ಮೀಕಾಂತ್ ಸೇರಿ ಅನೇಕ ಸಂಘಟನೆಗಳ ಪದಾಧಿಕಾರಿಗಳು ಕೋರಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












