ಬೆಂಗಳೂರು; ವಾಲ್ಮೀಕಿ ಅಭಿವೃದ್ಧಿ ಹಗರಣದ ಸಂಬಂಧ ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವಂತಾಯ್ತು, ಜೈಲು ವಾಸದ ದರ್ಶನವನ್ನು ಮಾಡುವಂತಾಯ್ತು. ಇದೀಗ ಬಿ.ನಾಗೇಂದ್ರ ವಿರುದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಇಡಿ, ರಾಜ್ಯಪಾಲರ ಬಳಿ ಮನವಿ ಮಾಡಿತ್ತು. ಈ ಹಿನ್ನೆಲೆ ಇಂದು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ.
ಬಿ.ನಾಗೇಂದ್ರ ಅವರು ಮತ್ತೆ ಸಚಿವ ಸಂಪುಟಕ್ಕೆ ಸೇರಬೇಕೆಂಬ ಆಸೆಯಿಂದ ಕಾಯುತ್ತಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕೂಡ ಸೇರಿಸಿಕೊಳ್ಳುವ ನಿರ್ಧಾರ ಮಾಡಿದ್ದರು. ಆದರೆ ಹೈಕಮಾಂಡ್ ಅದಕ್ಕಿನ್ನು ಗ್ರೀನ್ ಸಿಗ್ನಲ್ ನೀಡದ ಕಾರಣ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ಲ್ಯಾನ್ ಹಾಗೆಯೇ ಉಳಿದಿದೆ. ಈಗ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದು ನಾಗೇಂದ್ರ ಅವರಿಗೆ ಮತ್ತಷ್ಟು ಸಂಕಷ್ಟ ತಂದಿದೆ.
ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಸಂಬಂಧ ಇತ್ತೀಚೆಗಷ್ಟೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. 187 ಕೋಟಿ ರೂಪಾಯಿ ಹಗರಣ ಸಂಬಂಧ ನಾಲ್ಕು ಸಾವಿರದ 970 ಪುಟಗಳ ಚಾರ್ಜ ಶೀಟ್ ಅನ್ನು ಸಿದ್ಧ ಮಾಡಿ ಸಲ್ಲಿಕೆ ಮಾಡಿದ್ದರು. ಜೊತೆಗೆ 144 ಪುಟಗಳ ದೂರು ಸಲ್ಲಿಕೆ ಮಾಡಿದ್ದರು.
ಇನ್ನು ಇಡಿ ಸಲ್ಲಿಕೆ ಮಾಡಿದ್ದ ಚಾರ್ಜ್ ಶೀಟ್ ನಲ್ಲಿ ಮಾಜಿ ಸಚಿವ ನಾಗೇಂದ್ರ ಅವರೇ ಎ1 ಆರೋಪಿಯಾಗಿದ್ದರು. ಇಡಿ ತನಿಖೆಯಲ್ಲಿ ನಾಗೇಂದ್ರ ಹಾಗೂ ಆತನ ಗ್ಯಾಂಗ್ ಅಕ್ರಮ ನಡೆಸಿರುವುದು ದೃಢವಾಗಿತ್ತು. 186 ಕೋಟಿಯಲ್ಲಿ 84 ಕೋಟಿ ರೂಪಾಯಿ ಅಕ್ರಮ ವಹಿವಾಟು ನಡೆದಿದೆ ಎಂದಹ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದೀಗ ಇಡಿ ಮನವಿಯಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದಾರೆ.








