ಚಿತ್ರದುರ್ಗ. ಮಾ.12:ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಇದೇ ಮಾರ್ಚ್ 13 ಮತ್ತು 14ರಂದು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಥ ಬಳಕೆ ಹೆಚ್ಚಿಸಲು ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ಜಿಲ್ಲೆಯ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 13ರಂದು ಬೆಳಿಗ್ಗೆ 10ಕ್ಕೆ ಚಳ್ಳಕೆರೆ ತಾಲ್ಲೂಕಿನ ಪ್ರಗತಿಪರ ರೈತರಾದ ಬಡಗಿ ರಂಗಣ್ಣರವರ ಜಮೀನಿನಲ್ಲಿ ಹಾಗೂ ಮಾರ್ಚ್ 14ರಂದು ರಂದು ಬೆಳಿಗ್ಗೆ 10ಕ್ಕೆ ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮದ ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯ ಮಾಜಿ ಡೀನ್ ಡಾ. ಎಂ. ಜಿ ಗೋವಿಂದಯ್ಯರವರ ಜಮೀನಿನಲ್ಲಿ ರೈತಬಾಂಧವರಿಗೆ ನೀರಿನ ಸಮರ್ಥ ಬಳಕೆಗೆ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆಯ ಕುರಿತು ನೆಟಾಫಿಮ್ ಸಂಸ್ಥೆಯ ಬೇಸಾಯ ಶಾಸ್ತ್ರಜ್ಞರಾದ ಅಂಜಿನಪ್ಪರವರು ಮಂಡನೆ ಮಾಡಲಿದ್ದಾರೆ.
ಮಾರ್ಚ್13 ರಂದು ಗುಡಿಹಳ್ಳಿ ಗ್ರಾಮದಲ್ಲಿ ನಡೆಯುವ ತರಬೇತಿ ಕಾರ್ಯಗಾರದಲ್ಲಿ ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಡಾ. ದೊಡ್ಡಮಲ್ಲಯ್ಯ ಅವರು ಬೇಸಿಗೆಯಲ್ಲಿ ರಾಸುಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ರೈತರಾದ ಡಾ.ದಯಾನಂದ ಮೂರ್ತಿ, ರುದ್ರಮುನಿಯಪ್ಪ, ಬಡಗಿರಂಗಣ್ಣ ಹಾಗೂ ಚಿತ್ರಲಿಂಗಪ್ಪರವರು ತಾವು ಅಳವಡಿಸಿಕೊಂಡ ಸಮಗ್ರ ಕೃಷಿ ಪದ್ದತಿ ಕುರಿತು ರೈತರಿಗೆ ತಮ್ಮ ಅನುಭವ ಹಂಚಿಕೊಳ್ಳುವರು.

ಮಾರ್ಚ್ 14ರಂದು ಹರಿಯಬ್ಬೆ ಗ್ರಾಮದಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ವಿಜಯ್ ಎಸ್ ದಾನರೆಡ್ಡಿ ಅವರು ಪ್ರಮುಖ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಮತ್ತು ದಾಳಿಂಬೆ ಬೆಳೆಯಲ್ಲಿ ಬರುವ ಪ್ರಮುಖ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡುವರು. ಆದ ಪ್ರಯುಕ್ತ ಪ್ರತಿ ದಿನ ಆಸಕ್ತ 60 ಜನ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು 8277931058 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.
ನೋಂದಾವಣಿ ಮಾಡಿಕೊಂಡ ರೈತಭಾಂದವರು ಫ್ರೂಟ್ಸ್ ಐಡಿ (ಎಫ್.ಐಡಿ) ಅಥವಾ ಚುನಾವಣೆ ಗುರುತಿನ ಚೀಟಿಯೊಂದಿಗೆ ತರಬೇತಿಗೆ ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

