ಸುದ್ದಿಒನ್, ಹೊಸದುರ್ಗ, ಆಗಸ್ಟ್. 13 : ತಾಲೂಕಿನ ಕಸಬಾ ಹೋಬಳಿಯ ಪಾಳೇದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಪ್ರವೇಶ, ವಿಗ್ರಹ ಪ್ರತಿಷ್ಠಾಪನೆ, ಕಳಶಾರೋಹಣ ಹಾಗೂ ಧಾರ್ಮಿಕ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಶ್ರೀ ಅಂಜನೇಯಸ್ವಾಮಿ ದೇವಾಲಯ ಸೇವಾ ಟ್ರಸ್ಟ್, ಪಾಳೇದಹಳ್ಳಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಭಕ್ತಾದಿಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 15ರಿಂದ 17ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.
ಧಾರ್ಮಿಕ ವಿಧಿವಿಧಾನಗಳು ಆಗಸ್ಟ್ 15ರ ಶನಿವಾರ ಸಂಜೆ 5:00 ಗಂಟೆಗೆ ಶ್ರೀ ಅಂಜನೇಯಸ್ವಾಮಿಯವರ ನೇತೃತ್ವದಲ್ಲಿ ನಡೆಯಲಿರುವ ಆಹ್ವಾನಿತ ದೇವರುಗಳ ‘ಕೂಡುಬೇಟಿ’ ಕಾರ್ಯಕ್ರಮದೊಂದಿಗೆ ಚಾಲನೆ ಪಡೆಯಲಿವೆ. ಈ ಸುಸಂದರ್ಭದಲ್ಲಿ ಹಳೇಕುಂದೂರಿನ ಶ್ರೀ ಅಂಜನೇಯಸ್ವಾಮಿ, ಪಾಳೇದಹಳ್ಳಿಯ ಶ್ರೀ ಗುಳ್ಳಮ್ಮದೇವಿ, ಬಾಗೂರಿನ ಶ್ರೀ ಮಸಿಯಮ್ಮದೇವಿ, ಕಲ್ಲೇರೆಯ ಶ್ರೀ ಕರಿಯಮ್ಮದೇವಿ ಹಾಗೂ ಅದ್ರಿಕಟ್ಟೆಯ ಶ್ರೀ ಹೊಲಮ್ಮದೇವಿ ಉತ್ಸವ ಮೂರ್ತಿಗಳು ಆಗಮಿಸಲಿದ್ದು, ಕೂಡುಬೇಟಿ ಕಾರ್ಯಕ್ರಮದ ನಂತರ ವಿವಿಧ ಹೋಮ-ಹವನಗಳು ಜರುಗಲಿವೆ. ಆಗಸ್ಟ್ 16ರ ಭಾನುವಾರ ಬೆಳಗಿನ ಜಾವ ಗಂಗಾಪೂಜೆ, ಗಣಪತಿ ಪೂಜೆ, ಗೋಪೂಜೆ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ನಂದೀಪುರ ಹಿರೇಮಠದ ಶ್ರೀ ಷಟ್ಸ್ಥಲ ಬ್ರಹ್ಮ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ అమೃತ ಹಸ್ತದಿಂದ ನೆರವೇರಲಿವೆ. ಅಂದು ಬೆಳಿಗ್ಗೆ 5:00ರಿಂದ 6:00 ಗಂಟೆಯವರೆಗಿನ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ದೇವಾಲಯ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದ್ದು, ಬೆಳಿಗ್ಗೆ 9:00 ಗಂಟೆಗೆ ಕುಂಭೋತ್ಸವ, 9:30ಕ್ಕೆ ಪೂರ್ಣಾಹುತಿ ಹಾಗೂ 10:00ರಿಂದ 11:00 ಗಂಟೆಯವರೆಗೆ ಅದ್ಧೂರಿ ಕಳಶಾರೋಹಣ ನೆರವೇರಲಿದೆ.
ಅದೇ ದಿನ ಅಂದರೆ ಆಗಸ್ಟ್ 16ರ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಧಾರ್ಮಿಕ ಸಮಾರಂಭ ಆಯೋಜಿತಗೊಂಡಿದ್ದು, ಮುಷ್ಟೂರು ಶ್ರೀಶೈಲ ಶಾಖಾಮಠದ ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನಂದೀಪುರದ ಶ್ರೀ ಶ್ರೀ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗೊಲ್ಲಹಳ್ಳಿಯ ಶ್ರೀ ಶ್ರೀ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಹಡ್ಲಿಯ ಶ್ರೀ ಶ್ರೀ ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಪಾಳೇದಹಳ್ಳಿಯ ಉದ್ಯಮಿ ಮಲ್ಲಿಕಾರ್ಜುನ್ ಪಿ.ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶಾಸಕರು ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾದ ಬಿ.ಜಿ. ಗೋವಿಂದಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎನ್. ನವೀನ್, ಮಾಜಿ ಶಾಸಕರಾದ ಗೂಳಿಹಟ್ಟಿ ಡಿ. ಶೇಖರ್, ಡಿ.ಎಸ್. ರಂಗನಾಥ್ ಹಾಗೂ ಪ್ರದೇಶದ ಪ್ರಮುಖ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.
ಇದೇ ಶುಭ ಸಂದರ್ಭದಲ್ಲಿ ದೇಶದ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಆಗಸ್ಟ್ 16ರ ಭಾನುವಾರ ರಾತ್ರಿ 7:30ಕ್ಕೆ ಬಿಜೆಪಿ ಯುವ ಮುಖಂಡರಾದ ಶ್ರೀ ದಿಲ್ಸೇ ದಿಲೀಪ್ ಅವರ ಪ್ರಾಯೋಜಕತ್ವದಲ್ಲಿ ವೈಭವೋಪೇತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಈ ಮಹೋತ್ಸವವು ಆಗಸ್ಟ್ 17ರ ಸೋಮವಾರ ಸಂಜೆ 5:30ಕ್ಕೆ ಜರುಗಲಿರುವ ನಯನಮನೋಹರ ‘ದೇವರುಗಳ ಹೂವಿನ ಉತ್ಸವ’ದೊಂದಿಗೆ ಸಂಪನ್ನಗೊಳ್ಳಲಿದ್ದು, ಸುತ್ತಮುತ್ತಲಿನ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವತಾ ಕೃಪೆಗೆ ಪಾತ್ರರಾಗಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.









