ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ನಿಯೋಗವು ಇಂದು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರು ಅಧಿಕಾರದಲ್ಲಿದ್ದಾಗ ಪತ್ರಿಕಾ ವಿತರಕರ ಬಗ್ಗೆ ತೋರಿದ್ದ ವಿಶೇಷ ಪ್ರೀತಿ, ಕಾಳಜಿ ಹಾಗೂ ಜಾರಿಗೆ ತಂದಿದ್ದ ಯೋಜನೆಗಳನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿತು.
ಕಳೆದ ಮೂರು ವರ್ಷಗಳಿಂದ ರಾಜ್ಯ ಸಮ್ಮೇಳನದ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಕಾಣಲು ರಾಜ್ಯದ ಎಲ್ಲಾ ವಿತರಕರು ಕಾತರದಿಂದ ಕಾಯುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. ನವೆಂಬರ್ 11, 2026 ರಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಬೆಳಗಾವಿ ಜಿಲ್ಲಾ ದಿನಪತ್ರಿಕೆ ವಿತರಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ 6ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನಕ್ಕೆ ಆಗಮಿಸಬೇಕೆಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಅವರು ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು, ಈ ಬಾರಿಯ ಸಮ್ಮೇಳನಕ್ಕೆ ಖಂಡಿತವಾಗಿಯೂ ಬರುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು 6ನೇ ರಾಜ್ಯ ಸಮ್ಮೇಳನದ ಅಧಿಕೃತ ಲಾಂಛನವನ್ನು ಬಿಡುಗಡೆಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಕೆ. ವಿ. ಪ್ರಭಾಕರ್ ಸಹ ಲಾಂಛನ ಬಿಡುಗಡೆಗೊಳಿಸಿದರು. ಪತ್ರಿಕಾ ವಿತರಕರಿಗಾಗಿ ವಿಶೇಷ ಯೋಜನೆಗಳನ್ನು ತರುವಲ್ಲಿ, ಹಾಗೂ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಪ್ರಶಸ್ತಿಗಳಂತಹ ಗೌರವಗಳು ದೊರೆಯುವಂತೆ ಮಾಡುವಲ್ಲಿ ಅವರ ಪಾತ್ರ ಮತ್ತು ಬೆನ್ನೆಲುಬಾಗಿ ನಿಂತಿರುವ ಸೇವೆ ಅವಿಸ್ಮರಣೀಯ. ಅವರಿಗೂ ಸಹ 6ನೇ ರಾಜ್ಯ ಸಮ್ಮೇಳನಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್, ಕಾರ್ಯದರ್ಶಿಗಳಾದ ಜಗದೀಶ್, ಗೋಪಾಲ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.









