Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೆಣ್ಣಾಗಲು ಬಯಸಿದ್ದ ಬಾಲಕ : ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ವಿರೋಧಿಸಿದ್ದ ತಾಯಿಯನ್ನೇ ಕೊಂದ ಪಾಪಿಪುತ್ರ

---Advertisement---

ಲಕ್ನೋ: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ 17 ವರ್ಷದ ಅಪ್ರಾಪ್ತನೊಬ್ಬ ತನ್ನ ತಾಯಿಯನ್ನೇ ಕಬ್ಬಿಣದ ವ್ರೆಂಚ್‌ನಿಂದ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ. ಘಟನೆಯ ಬಳಿಕ ಸ್ವತಃ ಅಪ್ರಾಪ್ತನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಲಕ್ನೋದ ರಾಜೇಂದ್ರ ನಗರ ಕ್ರಾಸಿಂಗ್ ಬಳಿಯಿರುವ ‘ವಿಷನ್ ಅಪಾರ್ಟ್‌ಮೆಂಟ್‌’ನಲ್ಲಿ ಗುರುವಾರ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು 42 ವರ್ಷದ ಗೃಹಿಣಿ ಎಂದು ಗುರುತಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದು, ಅಪ್ರಾಪ್ತ ಸ್ಥಳದಲ್ಲೇ ಇದ್ದನೆನ್ನಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, 17 ವರ್ಷದ ಈ ಅಪ್ರಾಪ್ತ ಬಾಲಕ ಹೆಣ್ಣಾಗಿ ಬದಲಾಗಲು ಇಷ್ಟಪಟ್ಟು, ಅದಕ್ಕೆ ಅನುಗುಣವಾಗಿ ಜೀವನಶೈಲಿಯನ್ನು ಬದಲಿಸಿಕೊಂಡಿದ್ದ. ಅಲ್ಲದೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಠ ಹಿಡಿದಿದ್ದ. ಆದರೆ, ತಾಯಿ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದರು. ಬದಲಿಗೆ ವೈದ್ಯಕೀಯ ಹಾಗೂ ಮಾನಸಿಕ ಸಮಾಲೋಚನೆ ಪಡೆಯುವಂತೆ ಮಗನಿಗೆ ಬುದ್ಧಿವಾದ ಹೇಳಿದ್ದರು. ಇದೇ ವಿಚಾರವಾಗಿ ಕುಟುಂಬದಲ್ಲಿ ತೀವ್ರ ವಾಗ್ವಾದ ನಡೆಯುತ್ತಿತ್ತು.

ಗುರುವಾರ ಕೂಡ ಇದೇ ವಿಷಯಕ್ಕೆ ತಾಯಿ-ಮಗನ ನಡುವೆ ತೀವ್ರ ಜಗಳ ನಡೆದಿದ್ದು, ಕೋಪೋದ್ರಿಕ್ತನಾದ ಅಪ್ರಾಪ್ತ ಮನೆಯಲ್ಲಿದ್ದ ಕಬ್ಬಿಣದ ವ್ರೆಂಚ್‌ನಿಂದ ತಾಯಿಯ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ಸಂಬಂಧ ನಾಕಾ ಹಿಂಡೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರ ತಂಡ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಕೃತ್ಯಕ್ಕೆ ಬಳಸಲಾದ ಆಯುಧವನ್ನು ಜಪ್ತಿ ಮಾಡಿದೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಅಪ್ರಾಪ್ತ ‘ಜೆಂಡರ್ ಡಿಸ್ಫೋರಿಯಾ’ (ಲಿಂಗ ಅಸ್ವಸ್ಥತೆ) ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ತೋರುತ್ತಿದ್ದು, ತನಿಖೆಯ ವೇಳೆ ಆತನಿಗೆ ಮನೋವೈದ್ಯರು ಹಾಗೂ ತಜ್ಞರಿಂದ ಕೌನ್ಸೆಲಿಂಗ್ ಕೊಡಿಸಲಾಗುವುದು ಎಂದು ನಾಕಾ ಹಿಂಡೋಲಾ ಠಾಣಾಧಿಕಾರಿ ವಿವೇಕ್ ಕುಮಾರ್ ಚೌಧರಿ ತಿಳಿಸಿದ್ದಾರೆ. ಕೃತ್ಯ ನಡೆದ ಸಂಪೂರ್ಣ ಸನ್ನಿವೇಶದ ಬಗ್ಗೆ ನಿಖರ ಮಾಹಿತಿ ಪಡೆಯಲು ಅಪ್ರಾಪ್ತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join WhatsApp

Join Now

Join Telegram

Join Now