ಬೆಂಗಳೂರು: ರಾಜ್ಯದಲ್ಲಿ ಕೆಲವೊಂದು ಕಡೆ ಗಣೇಶನ ಹಬ್ಬವನ್ನ ಜೋರಾಗಿ ಆಚರಿಸುತ್ತಾರೆ. ತಿಂಗಳುಗಟ್ಟಲೆ ಗಣೇಶನ ಮೂರ್ತಿಯನ್ನ ಇಟ್ಟು ಪೂಜಿಸುವವರಿದ್ದಾರೆ. ಅದರಲ್ಲೂ ಚಿತ್ರದುರ್ಗದ ಗಣೇಶೋತ್ಸವ ಎಲ್ಲೆಡೆ ಖ್ಯಾತಿಯನ್ನ ಪಡೆದಿದೆ. ಗಣಪತಿ ಶೋಭಯಾತ್ರೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಹೀಗಾಗಿ ಸುರಕ್ಷತೆ ಬಹಳ ಮುಖ್ಯವಾಗುತ್ತದೆ. ಈ ಹಿನ್ನೆಲೆ ಇಂದು ಗೃಹ ಸಚಿವರನ್ನ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಭೇಟಿಯಾಗಿ ಮನವಿ ಮಾಡಿಕೊಂಡು ಬಂದಿದ್ದಾರೆ.
ಸದಾಶಿವನಗರದಲ್ಲಿರುವ ಗೃಹ ಸಚಿವರ ನಿವಾಸಕ್ಕೆ ತೆರಳಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು, ದೇಶದ ಬಹುದೊಡ್ಡ ಗಣೇಶೋತ್ಸವ ಎಂಬ ಖ್ಯಾತಿ ಪಡೆದಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ಕಲ್ಪಿಸುವಂತೆ ಹಾಗೂ ಶೋಭಾಯಾತ್ರೆ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಗೃಹ ಸಚಿವರ ಜೊತೆಗೆ ಒಂದಷ್ಟು ಮನವಿಯನ್ನು ಮಾಡಿದ್ದಾರೆ. ಈ ವೇಳೆ ಚಿತ್ರದುರ್ಗದ ಮಾಜಿ ಸಂಸತ್ ಸದಸ್ಯರಾದ ಬಿ.ಎನ್ ಚಂದ್ರಪ್ಪ ಇದ್ದರು.
ಸಚಿವರ ಮನವಿಯನ್ನು ಪುರಸ್ಕರಿಸಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೀಗಾಗಿ ಶೋಭಾಯಾತ್ರೆಯನ್ನ ನಿರಾಳವಾಗಿ ನಡೆಸಲು ಈಗ ಶ್ರೀಗಳು ಉತ್ಸುಕರಾಗಿದ್ದಾರೆ. ಯಾಕಂದ್ರೆ ಮದ್ದೂರು ಗಣೇಶೋತ್ಸವದ ಯಾತ್ರೆಯಲ್ಲಿ ನಡೆದ ಕಲ್ಲು ತೂರಾಟ ಅಲ್ಲಿನ ವಾತಾವರಣವನ್ನೇ ಹಾಳು ಮಾಡಿದೆ. ವರ್ಷಕ್ಕೆ ಒಮ್ಮೆ ಬರುವ ಗಣೇಶೋತ್ಸವವನ್ನ ಅದ್ದೂರಿಯಾಗಿ ಮಾಡಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲೂ ಕೋಟೆನಾಡಿನ ಮಂದಿ ಈ ಸಮಯದಲ್ಲಿ ಒಟ್ಟಾಗಿ, ಭಕ್ತಿ, ಭಾವೈಕ್ಯತೆಯಿಂದ ಗಣಪತಿಯನ್ನು ವಿಸರ್ಜನೆ ಮಾಡುತ್ತಾರೆ.










