ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 05 : ಚಳ್ಳಕೆರೆ ತಾಲ್ಲೂಕಿನಲ್ಲಿ ಮುಂಗಾರು ಆರಂಭವಾದಾಗಿನಿಂದಲೂ ವಾಡಿಕೆಯಂತೆ ಮಳೆಯಾಗದೆ ಬರದ ಛಾಯೆ ಆವರಿಸಿತ್ತು. ಆದರೆ ಇಂದು ದಿಢೀರನೆ ವಾತಾವರಣ ಬದಲಾಗಿದ್ದು, ಮೋಡ ಕವಿದ ವಾತಾವರಣದೊಂದಿಗೆ ಬೀಸಿದ ಭಾರಿ ಗಾಳಿ-ಮಳೆಗೆ ತಾಲ್ಲೂಕಿನ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಗಾಳಿಯ ರಭಸಕ್ಕೆ ಮರಗಳು ಧರೆಗುರುಳಿವೆ, ಹಲವು ಮನೆಗಳ ಮೇಲ್ಚಾವಣಿ ಸೀಟುಗಳು ಹಾರಿಹೋಗಿವೆ.
ತಾಲ್ಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಜಯಮ್ಮ ಹನುಮಂತಪ್ಪ ಎಂಬುವರ ಮನೆಯ ಮೇಲೆ ಬೃಹತ್ ಬೇವಿನ ಮರ ಮುರಿದು ಬಿದ್ದಿದೆ. ಪರಿಣಾಮ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ.
ಇದೇ ಗ್ರಾಮದ ಪುಷ್ಪಕ್ಕ ಎಂಬುವವರ ಎರಡು ಮನೆಗಳ ಮೇಲ್ಭಾಗದಲ್ಲಿ ಹಾಕಲಾಗಿದ್ದ ಕಬ್ಬಿಣದ ಸೀಟುಗಳು ಬಿರುಗಾಳಿಯ ತೀವ್ರತೆಗೆ ಹಾರಿಹೋಗಿದ್ದು, ಮೇಲ್ಚಾವಣಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಮಳೆ ಸಾಧಾರಣವಾಗಿಯೇ ಸುರಿದಿದ್ದರೂ, ಅನಿರೀಕ್ಷಿತವಾಗಿ ಬೀಸಿದ ಬಿರುಗಾಳಿಯ ರಭಸಕ್ಕೆ ಈ ಅನಾಹುತ ಸಂಭವಿಸಿದೆ.










