ದೆಹಲಿ : ದಸರಾ ಮತ್ತು ದೀಪಾವಳಿ ಹಬ್ಬಗಳ (Festival) ಸಂಭ್ರಮಕ್ಕೆ ದೇಶಾದ್ಯಂತ ಸಿದ್ಧತೆಗಳು ಆರಂಭವಾಗಿರುವ ಬೆನ್ನಲ್ಲೇ, ಅಗತ್ಯ ದಿನಸಿ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ (Price rise) ಕಂಡುಬಂದಿದೆ.
ಅಡುಗೆ ಎಣ್ಣೆ, ಅಕ್ಕಿ ಹಾಗೂ ಸಕ್ಕರೆ ಸೇರಿದಂತೆ ಹಬ್ಬದ ಅಡುಗೆಗೆ ಬೇಕಾಗುವ ಪ್ರಮುಖ ಪದಾರ್ಥಗಳ ದರ ಹೆಚ್ಚಾಗುತ್ತಿರುವುದು ಗೃಹಿಣಿಯರ ಮಾಸಿಕ ಬಜೆಟ್ ಅನ್ನು ಏರುಪೇರಾಗಿಸಿದೆ. ಹಬ್ಬದ ದಿನಗಳಲ್ಲಿ ಹೆಚ್ಚುವ ಬೇಡಿಕೆಯ ಜೊತೆಗೆ ಹವಾಮಾನ ವೈಪರೀತ್ಯ, ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಮತ್ತು ಪೂರೈಕೆಯಲ್ಲಿನ ವ್ಯತ್ಯಯಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಪ್ರಮುಖ ಆಹಾರ ಧಾನ್ಯವಾದ ಅಕ್ಕಿಯ ಬೆಲೆಯು ಮುಂಗಾರು ಮಳೆಯ ಕೊರತೆ ಹಾಗೂ ಎಲ್ ನಿನೋ ಪ್ರಭಾವದಿಂದಾಗಿ ಬೆಳೆ ಉತ್ಪಾದನೆ ಕುಸಿದಿದ್ದರಿಂದ ಹೆಚ್ಚಾಗಿದೆ. ಇನ್ನು ಸಕ್ಕರೆಯ ವಿಚಾರಕ್ಕೆ ಬಂದರೆ, ಪ್ರಮುಖ ಕಬ್ಬು ಬೆಳೆಯುವ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇಳುವರಿ ತಗ್ಗಿದೆ. ಇದರ ಜೊತೆಗೆ ಎಥೆನಾಲ್ ಉತ್ಪಾದನೆಗೆ ಕಬ್ಬನ್ನು ಬಳಸುವುದು ಹಾಗೂ ಸಿಹಿ ತಿಂಡಿ ತಯಾರಕರಿಂದ ಭಾರಿ ಪ್ರಮಾಣದ ಖರೀದಿ ನಡೆಯುತ್ತಿರುವುದು ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಗೆ ಕಾರಣವಾಗಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಸೂರ್ಯಕಾಂತಿ, ಪಾಮ್ ಆಯಿಲ್ ಮತ್ತು ಸೋಯಾಬೀನ್‌ನಂತಹ ಖಾದ್ಯ ತೈಲಗಳ ದರ ಕೂಡ ಜಾಗತಿಕ ಮಟ್ಟದಲ್ಲೇ ಏರಿಕೆಯಾಗಿ ಭಾರತೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ.
ಚಿತ್ರದುರ್ಗ APMC | ಅಕ್ಟೋಬರ್ 05 ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!
ಕೇವಲ ದಿನಸಿ ಪದಾರ್ಥಗಳು ಮಾತ್ರವಲ್ಲದೆ ಅಡುಗೆಮನೆಯ ದೈನಂದಿನ ತರಕಾರಿಗಳು ಮತ್ತು ಹಾಲಿನ ಉತ್ಪನ್ನಗಳೂ ದುಬಾರಿಯಾಗಿವೆ. ಈರುಳ್ಳಿ ಬೆಲೆ ಪ್ರತಿ ಕೆಜಿಗೆ 50 ರಿಂದ 57 ರೂಪಾಯಿ ಇದ್ದದ್ದು ಈಗ 60 ರಿಂದ 67 ರೂಪಾಯಿಗೆ ಏರಿದ್ದು, ಹೊಸ ಬೆಳೆ ಮಾರುಕಟ್ಟೆಗೆ ಬರುವುದು ತಡವಾಗಿರುವುದು ಇದಕ್ಕೆ ಕಾರಣವಾಗಿದೆ. ಶುಂಠಿ ಮತ್ತು ಬೆಳ್ಳುಳ್ಳಿಯ ಬೆಲೆಗಳು ಗಗನಕ್ಕೇರಿದ್ದರೆ, ಕಡಲೆ ಮತ್ತು ಹೆಸರು ಬೇಳೆಯಂತಹ ಕಾಳುಗಳ ದರವೂ ಹಬ್ಬದ ಬೇಡಿಕೆಯಿಂದಾಗಿ ಹೆಚ್ಚಾಗಿದೆ. ಹಾಲಿನ ದರ ಲೀಟರ್‌ಗೆ 29 ರಿಂದ 32 ರೂಪಾಯಿಯಷ್ಟಿದ್ದುದು ಈಗ 32 ರಿಂದ 36 ರೂಪಾಯಿಗೆ ತಲುಪಿದ್ದು, ಇದರಿಂದಾಗಿ ಕೋವಾ ಹಾಗೂ ಹಾಲಿನಿಂದ ತಯಾರಾಗುವ ಸಿಹಿ ತಿಂಡಿಗಳ ಬೆಲೆ ಏರಿಕೆಯಾಗಿದೆ. ಆಮದು ವೆಚ್ಚ ಹೆಚ್ಚಿರುವುದರಿಂದ ಪಿಸ್ತಾ, ಕೇಸರಿಯಂತಹ ಡ್ರೈ ಫ್ರೂಟ್ಸ್ ದರಗಳೂ ಹೆಚ್ಚಾಗಿದ್ದು, ಒಟ್ಟಾರೆಯಾಗಿ ಈ ಬಾರಿಯ ಹಬ್ಬದ ಸಂಭ್ರಮವು ಸಾಮಾನ್ಯ ಕುಟುಂಬಗಳ ಜೇಬಿಗೆ ತುಸು ಹೆಚ್ಚೇ ಹೊರೆಯಾಗುವ ಲಕ್ಷಣಗಳು ಸ್ಪಷ್ಟವಾಗಿವೆ.










