Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ಕನ್ನಡ ಕಡ್ಡಾಯ: ನ.24ರೊಳಗೆ ಬದಲಾವಣೆಗೆ ಮಹಾನಗರ ಪಾಲಿಕೆ ಸೂಚನೆ

60% Kannada mandatory on signboards and advertisements
---Advertisement---

ಬಳ್ಳಾರಿ : ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆಗಳ ನಾಮಫಲಕಗಳು ಹಾಗೂ ಮುದ್ರಿತ ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸಬೇಕು. ನವೆಂಬರ್ 24ರೊಳಗಾಗಿ ಈ ನಿಯಮವನ್ನು ಪಾಲಿಸದಿದ್ದರೆ ಉದ್ದಿಮೆಗಳ ಪರವಾನಿಗೆ ರದ್ದುಪಡಿಸಿ, ಬೀಗಮುದ್ರೆ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಎಸ್. ಮಂಜುನಾಥ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಸರ್ಕಾರದ ಕಾಯ್ದೆಯನ್ವಯ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಮುದ್ರಣ ಜಾಹೀರಾತುಗಳಲ್ಲಿ ಶೇ.60ರಷ್ಟು ಸ್ಥಳಾವಕಾಶವನ್ನು ಕನ್ನಡಕ್ಕೆ ಮೀಸಲಿಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಪಾಲಿಸಬೇಕಾದ ನಿಯಮಗಳು

ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಪ್ರದರ್ಶಿತವಾಗಬೇಕು. ಅನ್ಯಭಾಷೆಯ ಅಕ್ಷರಗಳಿಗಿಂತ ಕನ್ನಡದ ಅಕ್ಷರಗಳು ದೊಡ್ಡದಾಗಿ ಮತ್ತು ಪ್ರಧಾನವಾಗಿ ಕಾಣುವಂತಿರಬೇಕು. ಜಾಹೀರಾತು ಮುದ್ರಣದಾರರೂ ಸಹ ಜಾಹೀರಾತುಗಳನ್ನು ಮುದ್ರಿಸುವಾಗ ಶೇ.60ರಷ್ಟು ಕನ್ನಡ ಬಳಕೆಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ನವೆಂಬರ್ 24 ರ ಗಡುವಿನೊಳಗೆ ನಾಮಫಲಕಗಳನ್ನು ಬದಲಾಯಿಸಿಕೊಳ್ಳದಿದ್ದಲ್ಲಿ, ಪಾಲಿಕೆ ವತಿಯಿಂದಲೇ ಅಂತಹ ನಾಮಫಲಕ ಹಾಗೂ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು. ಅಲ್ಲದೆ, ನಿಯಮಾನುಸಾರ ದಂಡ ವಿಧಿಸಿ, ಪರವಾನಿಗೆ ರದ್ದುಗೊಳಿಸುವ ಮೂಲಕ ಉದ್ದಿಮೆಗಳನ್ನು ಸ್ಥಗಿತಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Join WhatsApp

Join Now

Join Telegram

Join Now