ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಸತಿ, ಮೂಲಸೌಕರ್ಯ, ಕೃಷಿ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಬಡವರಿಗೆ ವಸತಿ ಸಹಾಯಧನ ಹೆಚ್ಚಳ, ಶ್ರಮಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ, ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಹಾಗೂ ಬೆಂಗಳೂರಿನ ಮೂಲಸೌಕರ್ಯಕ್ಕೆ ಭಾರಿ ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ.
ವಸತಿ ಮತ್ತು ಬಡವರ ಕಲ್ಯಾಣಕ್ಕೆ ಭರ್ಜರಿ ಕೊಡುಗೆ
ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಧಾರಿತವಾಗಿ ಒಂದು ಲಕ್ಷ ಹೊಸ ಮನೆಗಳ ನಿರ್ಮಾಣದ ಗುರಿಯನ್ನು ಜಾರಿಗೊಳಿಸಲು ಸಂಪುಟ ತೀರ್ಮಾನಿಸಿದೆ. ಈ ಯೋಜನೆಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳ ಸಹಾಯಧನವನ್ನು ₹1.20 ಲಕ್ಷದಿಂದ ₹2 ಲಕ್ಷಗಳಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಸಹಾಯಧನವನ್ನು ₹2 ಲಕ್ಷದಿಂದ ₹3 ಲಕ್ಷಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿಯವರ “ನಮ್ಮ ಮನೆ” ಯೋಜನೆಯಡಿ ರಾಜ್ಯಾದ್ಯಂತ ಸಮುದಾಯದ ಶ್ರಮಿಕರಿಗೆ ಶೇ. 50ರ ರಿಯಾಯಿತಿ ದರದಲ್ಲಿ 30×40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಒದಗಿಸಲು ಅಸ್ತು ಎನ್ನಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ 7 ನಿಗಮಗಳಲ್ಲಿ 2012-14ರಿಂದ 2020-21ನೇ ಸಾಲಿನವರೆಗೆ ಪಡೆದ ಸಾಲದ ಅಸಲನ್ನು ಪೂರ್ಣ ಮರುಪಾವತಿ ಮಾಡುವ ಫಲಾನುಭವಿಗಳಿಗೆ ಒಟ್ಟು ₹236.04 ಕೋಟಿ ಬಡ್ಡಿ ಮನ್ನಾ ಮಾಡುವ ಒಂದಾವರ್ತಿ ತೀರುವಳಿ ಯೋಜನೆ ಜಾರಿಗೆ ಬರಲಿದೆ. ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ₹25 ಕೋಟಿ ವೆಚ್ಚದಲ್ಲಿ 5,000 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ ವಿತರಿಸಲು ಹಾಗೂ 1.39 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮವಸ್ತ್ರ ಒದಗಿಸಲು ₹27.97 ಕೋಟಿ ಅನುದಾನ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.
ಹೆದ್ದಾರಿ, ವಿದ್ಯುತ್ ಬಸ್ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ
ರಾಜ್ಯದ ರಸ್ತೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಶಿಪ್-IV ಯೋಜನೆಯಡಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ ನೆರವಿನೊಂದಿಗೆ ₹10,252.58 ಕೋಟಿ ಅಂದಾಜು ವೆಚ್ಚದಲ್ಲಿ 9 ರಸ್ತೆಗಳ ಒಟ್ಟು 730.01 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಪುಟ ಸಮ್ಮತಿಸಿದೆ. ಅಲ್ಲದೆ, ವಿಶ್ವಬ್ಯಾಂಕಿನ ಸಹಯೋಗದೊಂದಿಗೆ ₹1,700 ಕೋಟಿ ವೆಚ್ಚದಲ್ಲಿ ಕರ್ನಾಟಕ ವಿದ್ಯುತ್ ಬಸ್ ಕಾರ್ಯಕ್ರಮ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಯ ಯೋಜನಾ ವೆಚ್ಚವನ್ನು ₹193.65 ಕೋಟಿಯಿಂದ ₹542.96 ಕೋಟಿಗೆ ಪರಿಷ್ಕರಿಸಿ, ಹೆಚ್ಚುವರಿ ₹349.31 ಕೋಟಿ ಅನುದಾನ ಹಾಗೂ ಹೆಚ್ಚುವರಿ ಜಮೀನು ಸ್ವಾಧೀನಕ್ಕೆ ಒಪ್ಪಿಗೆ ನೀಡಲಾಗಿದೆ.
ಬೆಂಗಳೂರು ಮೂಲಸೌಕರ್ಯ ಮತ್ತು ಸ್ವಚ್ಛತೆಗೆ ಆದ್ಯತೆ
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ವತಿಯಿಂದ ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದವರೆಗಿನ ಹೊರವರ್ತುಲ ರಸ್ತೆಯನ್ನು ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ₹486.79 ಕೋಟಿ ಪರಿಷ್ಕೃತ ಅಂದಾಜಿಗೆ ಹಾಗೂ 2026-27ನೇ ಸಾಲಿನ ಹೊಸ ವೈಟ್ ಟಾಪಿಂಗ್ ಕಾಮಗಾರಿಯ ಮೊದಲ ಹಂತಕ್ಕೆ ಅನುಮೋದನೆ ದೊರೆತಿದೆ. ಯಶವಂತಪುರದಿಂದ ಹಳೆ ಮದ್ರಾಸ್ ರಸ್ತೆ ಮತ್ತು ಮಾರೇನಹಳ್ಳಿ ಮುಖ್ಯರಸ್ತೆಯಿಂದ ಕನಕಪುರ ಮುಖ್ಯರಸ್ತೆವರೆಗಿನ ‘ಸಿ’ ವರ್ಗದ ಎರಡು ಎಲೆವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ನಿಧಿ ರಚನೆಯ ಆದೇಶ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಹಸಿ, ಒಣ, ನೈರ್ಮಲ್ಯ ಹಾಗೂ ರಸ್ತೆ ಗುಡಿಸುವಿಕೆ ತ್ಯಾಜ್ಯದ ಸಂಗ್ರಹಣೆ ಮತ್ತು ಸಾಗಾಣಿಕೆಯ 10 ಪ್ಯಾಕೇಜ್ಗಳ ₹1,379.62 ಕೋಟಿ ಪರಿಷ್ಕೃತ ಅಂದಾಜಿಗೆ ಹಾಗೂ ಕೆಂಗೇರಿ ಬಳಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣ ಮತ್ತು ಮಲ್ಟಿಪ್ಲೆಕ್ಸ್ ಕಟ್ಟಡದ ಎರಡನೇ ಹಂತದ ₹68.50 ಕೋಟಿ ಕಾಮಗಾರಿಗೆ ಅಸ್ತು ಎನ್ನಲಾಗಿದೆ.
ಕೃಷಿ, ಆರೋಗ್ಯ ಮತ್ತು ತುರ್ತು ಸೇವೆಗಳ ಬಲವರ್ಧನೆ
ರೈತರ ಆದಾಯ ಹೆಚ್ಚಿಸುವ ಹಾಗೂ ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸುವ ಉದ್ದೇಶದಿಂದ “ಮುಖ್ಯಮಂತ್ರಿ ಕೃಷಿ ವಿಸ್ತಾರ” ಯೋಜನೆಯನ್ನು ಮುಂದಿನ ವರ್ಷಗಳಲ್ಲಿ ₹75 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 71ರ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಪ್ರಾರಂಭಿಸಲು ಮತ್ತು ಹುಬ್ಬಳ್ಳಿಯ ಜಯದೇವ ಹೃದ್ರೋಗ ಕೇಂದ್ರಕ್ಕೆ ಹೆಚ್ಚುವರಿ ಉಪಕರಣಗಳ ಖರೀದಿಗಾಗಿ ₹36.597 ಕೋಟಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ಸುಟ್ಟುಗಾಯಗಳಿಂದ ಬದುಕುಳಿದವರ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಾಮಾಜಿಕ ಪುನರ್ ಸಂಘಟನೆಯ ನೀತಿ 2025 ಜಾರಿಗೊಳಿಸಲು ನಿರ್ಧರಿಸಲಾಗಿದೆ.
ತುರ್ತು ಸೇವೆಗಳನ್ನು ಆಧುನೀಕರಿಸಲು ಅಗ್ನಿಶಾಮಕ ಇಲಾಖೆಗೆ ಬಹುಮಹಡಿ ಕಟ್ಟಡಗಳ ಅಗ್ನಿ ಅನಾಹುತ ತಡೆಗಟ್ಟಲು ₹16 ಕೋಟಿ ವೆಚ್ಚದಲ್ಲಿ 52-54 ಮೀಟರ್ ಎತ್ತರಕ್ಕೆ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್ಫಾರಂ ವಾಹನ ಖರೀದಿಸಲು ಹಾಗೂ ಪೊಲೀಸ್ ಇಲಾಖೆಗೆ ₹11 ಕೋಟಿ ವೆಚ್ಚದಲ್ಲಿ 134 ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ (ERSS) ವಾಹನಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.

ಇತರೆ ಪ್ರಮುಖ ನಿರ್ಣಯಗಳು ಮತ್ತು ವಿಧೇಯಕಗಳಿಗೆ ಅಸ್ತು
ನೊಣವಿನಕೆರೆಯನ್ನು ಮೂಲವಾಗಿಟ್ಟುಕೊಂಡು ತಿಪಟೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ₹39.35 ಕೋಟಿ ಯೋಜನೆಗೆ ಹಾಗೂ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಪ್ರಜಾಸೌಧ ಕಟ್ಟಡದ ಎರಡನೇ ಹಂತದ ₹5 ಕೋಟಿ ಕಾಮಗಾರಿಗೆ (ಮೊದಲ ಹಂತ ₹10 ಕೋಟಿ) ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಭಾರತ್ ಜೋಡೋ ಯುವಸಂಘ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಯುವ ಸಮಿತಿ ರಚಿಸಲು ಮತ್ತು ಪೂರ್ಣಾವಧಿ ಸಂಯೋಜಕರು ಹಾಗೂ ಪ್ರೇರಕರನ್ನು ನೇಮಿಸಲು ಸಭೆ ಒಪ್ಪಿಗೆ ಸೂಚಿಸಿದೆ.
ಇದೇ ವೇಳೆ, ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ 2026, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮೂರನೇ ತಿದ್ದುಪಡಿ) ವಿಧೇಯಕ 2026 ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಎರಡನೇ ತಿದ್ದುಪಡಿ ವಿಧೇಯಕ 2026ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.














