Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಸದುರ್ಗದಲ್ಲಿ ಅನ್ನದಾತರ ಆಕ್ರೋಶ: ರಸ್ತೆಯಲ್ಲೇ ಅಡುಗೆ ಮಾಡಿ ಜಾನುವಾರುಗಳೊಂದಿಗೆ ರೈತರ ರಸ್ತೆ ತಡೆ, ಪ್ರತಿಭಟನೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್,ಚಿತ್ರದುರ್ಗ ಅ. 05 : ಹೊಸದುರ್ಗದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಗ್ರಾಮಸ್ಥರ ವತಿಯಿಂದ ಸೋಮವಾರ ರೈತರ ವಿವಿಧ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೊಸದುರ್ಗ ತಾಲ್ಲೂಕಿನ ಮಾವಿನಕಟ್ಟೆ ಗೇಟ್ ಬಳಿಯಲ್ಲಿ ರಸ್ತೆ ತಡೆಯನ್ನು ಮಾಡುವುದರ ಮೂಲಕ ಸರ್ಕಾರವನ್ನು ಆಗ್ರಹಿಸಿ ರೈತರು ನೂರಾರು ಎಮ್ಮೆ-ಹಸುಗಳು ಹಾಗೂ ಎತ್ತಿನ ಗಾಡಿಗಳೊಂದಿಗೆ ರಸ್ತೆಯಲ್ಲೇ ಶಾಮಿಯಾನ ಹಾಕಿ, ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು.

ಚಿತ್ರದುರ್ಗ ಜಿಲ್ಲೆ ನಿರಂತರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಾಗಿದೆ. ನೀರಿನ ಕೊರತೆಯಿಂದ ರೈತರು ಕೃಷಿ ಮಾತ್ರವಲ್ಲದೆ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಯೂ ತೀರ್ವವಾಗಿದೆ. ರೈತರು ಈ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ನಿರೀಕ್ಷಿತ ರೀತಿಯಲ್ಲಿ ಕ್ರಮ ಕೈಗೊಳ್ಳದ ಹಿನ್ನೆಯಲ್ಲಿ ರೈತರ ಹಕ್ಕಿಗಾಗಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ರೈತರು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ರೈತರ ಜಮೀನುಗಳಿಗೆ ಸಮಗ್ರ ನೀರಾವರಿ ಹಾಗೂ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಸಮರ್ಪಕವಾಗಿ ಹರಿಸಿ, ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ಮಾವಿನಕಟ್ಟೆ ಕೆರೆ ಒತ್ತುವರಿ ಮತ್ತು ಜೋಡಿತುಂಬಿನ ಕೆರೆ ಒತ್ತುವರಿದಾರಿಂದ ತೆರವುಗೊಳಿಸಿ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಕೆರೆಯನ್ನು ಉಳಿಸಬೇಕು ಮತ್ತು ಭದ್ರಾ ಮೇಲ್ದಂಡೆ ನೀರನ್ನು ತುಂಬಿಸಬೇಕು. ರೈತರಿಂದ ಖರೀದಿಸಿರುವ ರಾಗಿ ಸೇರಿದಂತೆ ಕೃಷಿ ಉತ್ಪನ್ನಗಳ ಬಾಕಿ ಹಣವನ್ನು ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿ

ದಿನಾಂಕ : 14-08-2026 ಮತ್ತು 28-09-2026 ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಲಾಗಿತ್ತು ಅದರೂ ಸಹಾ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಅ.4 ರ ಒಳಗಡೆ ಸಮಸ್ಯೆ ಪರಿಹರಿಸದಿದ್ದರೆ ಅ.5 ರಂದು ರೈತರು ರಸ್ತೆ ತಡೆ ಚಳುವಳಿ ನಡೆಸಲಿದ್ದಾರೆ ಎಂದು ಎಚ್ಚರಿಸಲಾಗುತ್ತಾದರೂ ಸಹಾ ಅಧಿಕಾರಿಗಳು ಯಾವುದೆ ಕ್ರಮವನ್ನು ತೆಗೆದುಕೊಂಡಿಲ್ಲ ಇದು ಕೇವಲ ಒಬ್ಬ ರೈತನ ಹೋರಾಟವಲ್ಲ, ಇದು ಪ್ರತಿಯೊಬ್ಬ ರೈತನ ನಮ್ಮ ಊರಿನ ಕೆರೆ ಉಳಿಯಬೇಕು, ನಮ್ಮ ಹೊಲಗಳಿಗೆ ನೀರು ಬರಬೇಕು, ನಮ್ಮ ರೈತನ ಬೆಳೆ ಉಳಿಯಬೇಕು, ನಮ್ಮ ಜಾನುವಾರುಗಳಿಗೆ ನೀರು ಮೇವು ಸಿಗಬೇಕು ಎಂದು ಪ್ರತಿಭಟನಾಕಾರರು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಹೊಸದುರ್ಗ ತಾಲೂಕಿನ ತುಂಬಿನಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕೆರೆಯನ್ನು ಹಿಂದಿನ ಶಾಸಕರ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಳ್ಳಲಾಗಿದೆ ಇದು ಆಡಳಿತಾತ್ಮಕವಾಗಿ ದೊಡ್ಡ ಲೋಪವಾಗಿದ್ದು, ಈ ಕೂಡಲೇ ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ಕೆರೆಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಬೇಕು ಇದೇ ರೀತಿ ಮಾವಿನಕಟ್ಟೆ ಕೆರೆಯ ಒತ್ತುವರಿಯನ್ನೂ ತೆರವುಗೊಳಿಸಿ ನೀರು ಹರಿಸುವ ಕೆಲಸವಾಗಬೇಕು. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿ, ಹನಿ ನೀರಾವರಿ ಮೂಲಕ ಪ್ರತಿ ರೈತನ ಜಮೀನಿಗೂ ನೀರು ತಲುಪಿಸುವುದು ತಮ್ಮ ಮುಖ್ಯ ಬೇಡಿಕೆಯಾಗಿದೆ ಎಂದು ತಿಳಿಸಿದರು.

ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ರೈತರಿಗೆ ತಲುಪಬೇಕಾದ ರಾಗಿ ಖರೀದಿಯ ಹಣ ಜಮೆಯಾಗದಿರುವುದು ತೀವ್ರ ಬೇಸರದ ಸಂಗತಿಯಾಗಿದೆ ಸ್ಥಳೀಯ ಶಾಸಕರು ಆಹಾರ ನಿಗಮದ ಅಧ್ಯಕ್ಷರಾಗಿದ್ದರೂ ರೈತರಿಗೆ ಹಣ ತಲುಪಿಸಲು ವಿಫಲರಾಗಿದ್ದಾರೆ ತಹಶೀಲ್ದಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸೂಕ್ತ ತೀರ್ಮಾನ ಕೈಗೊಂಡು, ಬರಪೀಡಿತ ಪ್ರದೇಶದ ರೈತರಿಗೆ ಬಡ್ಡಿ ಸಮೇತ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಆಗಮಿಸಿ, ನಿಗದಿತ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸುವ ಕುರಿತು ಖಚಿತ ಭರವಸೆ ನೀಡುವವರೆಗೆ ರಸ್ತೆ ತಡೆ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now