ಬೆಂಗಳೂರು : ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ 46 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದರು.
ಜೂನ್ 1ರಂದು ರಾಜ್ಯದಾದ್ಯಂತ ಶಾಲಾ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಚಿವರು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಅಧಿಕೃತವಾಗಿ ಶಾಲೆಗೆ ಸ್ವಾಗತಿಸಲಿದ್ದು, ಇದೇ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಏಕಕಾಲದಲ್ಲಿ ನಡೆಯುವ ‘ಮಹಾ ಪೋಷಕ-ಶಿಕ್ಷಕರ ಸಭೆ’ (Mega PTM) ಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.
ಇತ್ತೀಚಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ದಾಖಲಾದ ಅತ್ಯುತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಹಾಗೂ ಅಧಿಕಾರಿಗಳ ಶ್ರಮವನ್ನು ಸಚಿವ ಮಧು ಬಂಗಾರಪ್ಪ ಶ್ಲಾಘಿಸಿದರು. ಇಲಾಖೆಯ 29 ಅಂಶಗಳ ಸುತ್ತೋಲೆಯ ಕಟ್ಟುನಿಟ್ಟಿನ ಅನುಷ್ಠಾನ, ಪಾರದರ್ಶಕ ಮೌಲ್ಯಮಾಪನ ಮತ್ತು ರಾಜ್ಯಮಟ್ಟದಲ್ಲಿ ಉಚಿತವಾಗಿ ನಡೆಸಿದ ಪೂರ್ವಸಿದ್ಧತಾ ಪರೀಕ್ಷೆಗಳು ಉತ್ತಮ ಫಲಿತಾಂಶಕ್ಕೆ ಕಾರಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ಶೈಕ್ಷಣಿಕ ವರ್ಷಕ್ಕೆ ಪ್ರಮುಖ ಸೂಚನೆಗಳು
ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಹಲವು ಆದ್ಯತೆಗಳ ಕುರಿತು ಸಚಿವರು ಸ್ಪಷ್ಟ ನಿರ್ದೇಶನಗಳನ್ನು ನೀಡಿದರು.
ದಾಖಲಾತಿ ಅಭಿಯಾನಕ್ಕೆ ಒತ್ತು
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸುವುದು ಮೊದಲ ಆದ್ಯತೆಯಾಗಬೇಕು. ಶಾಲೆಯಿಂದ ದೂರ ಉಳಿದ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಗುರುತಿಸಿ ಮತ್ತೆ ಶಾಲೆಗೆ ಕರೆತರಬೇಕು ಎಂದು ಸೂಚಿಸಿದರು.
ಬಿಸಿಯೂಟ ಯೋಜನೆಯಲ್ಲಿ ಲೋಪ ಬೇಡ
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ಇರಬಾರದು ಎಂದು ಎಚ್ಚರಿಕೆ ನೀಡಿದರು.
ಪಠ್ಯಪುಸ್ತಕ, ಸಮವಸ್ತ್ರ ಸಕಾಲದಲ್ಲಿ ವಿತರಣೆ
ಶಾಲಾ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿಳಂಬವಿಲ್ಲದೆ ವಿತರಿಸುವಂತೆ ಸೂಚನೆ ನೀಡಿದರು.ಅಧಿಕಾರಿಗಳಿಂದ ನಿಯಮಿತ ಶಾಲಾ ಭೇಟಿ
ಡಿಡಿಪಿಐ, ಬಿಇಒ, ಸಿಆರ್‌ಪಿ ಹಾಗೂ ಬಿಆರ್‌ಪಿ ಅಧಿಕಾರಿಗಳು ಕೇವಲ ಕಚೇರಿ ಕಾರ್ಯಕ್ಕೆ ಸೀಮಿತವಾಗದೆ ಶಾಲೆಗಳಿಗೆ ಭೇಟಿ ನೀಡಿ ಬೋಧನೆಯ ಗುಣಮಟ್ಟ ಹಾಗೂ ಶಿಕ್ಷಕರ ಹಾಜರಾತಿ ಪರಿಶೀಲಿಸಬೇಕು ಎಂದು ಸಚಿವರು ಹೇಳಿದರು.
“ಎಸ್‌ಎಸ್‌ಎಲ್‌ಸಿ ಉನ್ನತ ಶಿಕ್ಷಣಕ್ಕೆ ಸೇತುವೆ”
“ಎಸ್‌ಎಸ್‌ಎಲ್‌ಸಿ ಕೇವಲ ಪರೀಕ್ಷೆಯಲ್ಲ, ಅದು ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣದ ದಿಕ್ಕು ತೋರಿಸುವ ಹಂತ. ವಿದ್ಯಾರ್ಥಿಗಳೇ ರಾಜ್ಯದ ಮಾನವ ಸಂಪನ್ಮೂಲದ ಆಧಾರವಾಗಿರುವುದರಿಂದ ಪ್ರತಿಯೊಬ್ಬ ಶಿಕ್ಷಕರೂ ಉತ್ತಮ ಫಲಿತಾಂಶಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಬೇಕು” ಎಂಬ ಮುಖ್ಯಮಂತ್ರಿಗಳ ಆಶಯವನ್ನು ಸಚಿವರು ಸಭೆಯಲ್ಲಿ ಪುನರುಚ್ಚರಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









