ಗದಗ: ಲಕ್ಕುಂಡಿಯಲ್ಲಿ ಇತ್ತಿಚೆಗೆ ಕುಟುಂಬವೊಂದಕ್ಕೆ ಸಿಕ್ಕ ಚಿನ್ನದ ವಸ್ತುಗಳು ಭಾರೀ ಸುದ್ದಿಯಾಗಿತ್ತು. ಆ ಮುಗ್ಧ ಕುಟುಂಬ ಅದನ್ನೆಲ್ಲಾ ಸರ್ಕಾರಕ್ಕೂ ಒಪ್ಪಿಸಿದೆ. ಇದೇ ವೇಳೆ ಲಕ್ಕುಂಡಿಯಲ್ಲಿ ಉತ್ಖನನ ಕೂಡ ಆರಂಭವಾಗಿದೆ. ಈ ವೇಳೆ ಪುರಾತನ ವಸ್ತುಗಳು ಸಿಗ ತೊಡಗಿವೆ. ಮನೆಯ ಪಾಯ ಅಗೆಯುವಾಗ ಶಿವಲಿಂಗಕ್ಕೆ ಸಂಬಂಧಿಸಿದ ವಸ್ತುಗಳು ಸಿಕ್ಕಿವೆ.
ಇದೀಗ ಸುತ್ತಮುತ್ತಲಿನ ಪ್ರದೇಶದಲ್ಲೂ ಅಗೆದು ಹುಡುಕಾಟ ನಡೆಸಲು ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ನಿರ್ಧಾರ ಮಾಡಿದ್ದಾರೆ. ಈಗ ಸಿಕ್ಕಿರುವ ವಸ್ತು ನೀರು ಹರಿಯುವ ವಸ್ತುವಿನ ರೀತಿಯಲ್ಲಿ ಇದೆ. ಯಾವುದೇ ರೀತಿಯಲ್ಲೂ ಆ ವಸ್ತುವಿಗೆ ಧಕ್ಕೆಯಾಗದಂತೆ ಅಗೆಯುವ ಕೆಲಸ ಮಾಡುತ್ತಿದ್ದಾರೆ. ಪುರಾತತ್ವ ಇಲಾಖೆಯ ತಜ್ಞರ ಜೊತೆಗೂ ಈ ಸಂಬಂಧ ಚರ್ಚೆ ನಡೆಸಲಾಗಿದೆ. ದೇವರ ಕೆಳಗೆ ಇರುವಂತ ಪೀಠ ಇದು ಎಂಬುದು ಪ್ರಾಥಮಿಕ ಮಾಹಿತಿಯನ್ನು ನೀಡಲಾಗಿದೆ ಎಂದು ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ್ ಅವರು ತಿಳಿಸಿದ್ದಾರೆ.
ಇದೇ ವೇಳೆ ಗ್ರಾಮಸ್ಥರು ಸರ್ಕಾರಕ್ಕೆ ಒಂದು ಮನವಿಯನ್ನು ಸಲ್ಲಿಸುತ್ತಿದ್ದಾರೆ. ಸಚಿವರು, ಶಾಸಕರು, ಗ್ರಾಮಸ್ಥರ ಸಭೆ ಕರೆಯಬೇಕು. ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಎಲ್ಲಿಯೇ ಮನೆ ನಿರ್ಮಾಣ ಮಾಡಬೇಕು ಅಂದ್ರು ಅನುಮತಿ ಸಿಕ್ತಾ ಇಲ್ಲ, ಬ್ಯಾಂಕ್ ಗಳಲ್ಲಿ ಸಾಲ ಸಿಕ್ತಾ ಇಲ್ಲ. ಇಡೀ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ನಾವೂ ಬೆಂಬಲ ನೀಡ್ತೀವಿ. ಆದರೆ ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಲಕ್ಕುಂಡಿ ಗ್ರಾಮ ಚಿಕ್ಕದಲ್ಲ. ತೀರಾ ದೊಡ್ಡದಾದ ಗ್ರಾಮವಾಗಿದೆ. ಹೀಗಾಗಿ ಗ್ರಾಮ ಸ್ಥಳಾಂತರ ಅಷ್ಟು ಸುಲಭವಾ ಎಂಬ ಪ್ರಶ್ನೆಯೂ ಕಾಡುತ್ತಿದೆ.










