Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೌನವಾದ ಅಮರ ಕಂಠ : 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ!

---Advertisement---

 

ಮೈಸೂರು: ಭಾರತೀಯ ಚಿತ್ರರಂಗದ ದಣಿವರಿಯದ ಧ್ವನಿ, ಗಾನ ಕೋಗಿಲೆ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಅವರು ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಕುವೆಂಪು ನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೂಲತಃ ಹೈದರಾಬಾದ್ನವರಾಗಿದ್ದ ಜಾನಕಿಯವರು ಕಳೆದ ಕೆಲವು ವರ್ಷಗಳಿಂದ ಮೈಸೂರಿನಲ್ಲೇ ನೆಲೆಸಿದ್ದರು.

ಆರು ದಶಕಗಳ ಗಾಯನ ಯಾನ:
ತಮ್ಮ 19ನೇ ವಯಸ್ಸಿನಲ್ಲಿಯೇ (1957 ರಲ್ಲಿ) ತಮಿಳು ಚಿತ್ರದ ಮೂಲಕ ಗಾಯನ ವೃತ್ತಿ ಆರಂಭಿಸಿದ ಎಸ್. ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಹಾಗೂ ಜಪಾನೀಸ್, ಜರ್ಮನ್ ಮುಂತಾದ ವಿದೇಶಿ ಭಾಷೆಗಳೂ ಸೇರಿ ಒಟ್ಟು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ ಬರೆದಿದ್ದಾರೆ. ಸಿನಿರಂಗದ ಆರಂಭದ ದಿನಗಳಲ್ಲಿ ಅವರು ಅಭಿನಯ ಕೂಡ ಮಾಡಿದ್ದರು.
ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಉತ್ತರ ಭಾರತದ ಹಲವು ಭಾಷೆಗಳು ಒಟ್ಟಾರೆಯಾಗಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಅವರು ಹಿನ್ನೆಲೆ ಗಾಯಕಿಯಾಗಿ ಮೆರೆದಿದ್ದಾರೆ. ತಮ್ಮ ಸುದೀರ್ಘ ಗಾಯನ ಜರ್ನಿಯಲ್ಲಿ ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅಭೂತಪೂರ್ವ ಕೀರ್ತಿ ಎಸ್. ಜಾನಕಿ ಅವರಿಗೆ ಸಲ್ಲುತ್ತದೆ.

ಯಾವಾಗಲೂ ಬಿಳಿ ಬಣ್ಣದ ಪೋಷಾಕು ಹಾಗೂ ಬಿಳಿ ಸೀರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಜಾನಕಮ್ಮನವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿ ಬಳಗ ತೀವ್ರ ಕಂಬನಿ ಮಿಡಿದಿದೆ. ಪ್ರಸ್ತುತ ಅವರ ಪಾರ್ಥಿವ ಶರೀರವನ್ನು ಅಪೋಲೋ ಆಸ್ಪತ್ರೆಯಲ್ಲೇ ಇರಿಸಲಾಗಿದ್ದು, ಸಾರ್ವಜನಿಕ ಹಾಗೂ ಅಭಿಮಾನಿಗಳ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯನ್ನು ಎಲ್ಲಿ ನೆರವೇರಿಸಲಾಗುತ್ತದೆ ಎಂಬ ಅಧಿಕೃತ ಮಾಹಿತಿ ಇನ್ನು ಹೊರಬರಬೇಕಿದೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಕೋಟ್ಯಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

ಕನ್ನಡದೊಂದಿಗೆ ಅವಿನಾಭಾವ ಸಂಬಂಧ : 
ತೆಲುಗು ಇವರ ಮಾತೃಭಾಷೆಯಾಗಿದ್ದರೂ, ಎಸ್. ಜಾನಕಿಯವರು ತಮ್ಮ ವೃತ್ತಿಜೀವನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವುದು ಹೆಮ್ಮೆಯ ಕನ್ನಡ ಭಾಷೆಯಲ್ಲಿ. ಡಾ. ರಾಜ್ಕುಮಾರ್, ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಜಾನಕಿಯವರು ಹಾಡಿದ ಯುಗಳ ಗೀತೆಗಳು ಇಂದಿಗೂ ಕನ್ನಡಿಗರ ಮನದಲ್ಲಿ ನಿತ್ಯಹರಿದ್ವರ್ಣವಾಗಿ ಉಳಿದಿವೆ. “ಪೂಜಿಸಲೆಂದೇ ಹೂಗಳು”, “ಗಗನವು ಎಲ್ಲೋ”, “ಬಾನಲ್ಲು ನೀನೆ” ಸೇರಿದಂತೆ ನೂರಾರು ಸೂಪರ್ ಹಿಟ್ ಏಕವ್ಯಕ್ತಿ ಗೀತೆಗಳನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.

ಪ್ರಶಸ್ತಿ, ಪುರಸ್ಕಾರಗಳ ಮಹಾಪೂರ
ಶಾಸ್ತ್ರೀಯ ಸಂಗೀತದಲ್ಲಿ ಯಾವುದೇ ಔಪಚಾರಿಕ ತರಬೇತಿ ಪಡೆಯದಿದ್ದರೂ ತಮ್ಮ ಅಪ್ರತಿಮ ಪ್ರತಿಭೆಯಿಂದಲೇ ಸಂಗೀತ ಲೋಕವನ್ನು ಆಳಿದ ಜಾನಕಿಯವರ ಸಾಧನೆ ಅಪಾರ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು: 4

ವಿವಿಧ ರಾಜ್ಯ ಪ್ರಶಸ್ತಿಗಳು: ಒಟ್ಟು 29 (ಕೇರಳ-11, ಆಂಧ್ರಪ್ರದೇಶ-10, ತಮಿಳುನಾಡು-6, ಕರ್ನಾಟಕ ಮತ್ತು ಒರಿಸ್ಸಾ ತಲಾ 1)

ಗೌರವ ಡಾಕ್ಟರೇಟ್: ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 2014 ರಲ್ಲಿ ಕರ್ನಾಟಕ ಸರ್ಕಾರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now