ಕಾರವಾರ: ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಬಹಳಷ್ಟು ಅನಾಹುತ ಸಂಭವಿಸಿದೆ. ಶಿರೂರು ಗುಡ್ಡ ಕುಸಿತದಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋಜನರ ಬದುಕು ಬೀದಿಗೆ ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರದ ನಡೆಗೆ ಪ್ರಣವಾನಂದ ಸ್ವಾಮೀಜಿ ಬೇಸರ ಹೊರ ಹಾಕಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಸ್ವಾಮೀಜಿ, ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಶಿರೂರು ದುರಂತದಿಂದ ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಕೇವಲ 1 ಲಕ್ಷದ 20 ಸಾವಿರ ಹಣ ಮಾತ್ರ ನೀಡಿದೆ. ವಯನಾಡಿನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರ. ರಾಹುಲ್ ಗಾಂಧಿಯನ್ನು ಓಲೈಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿಯೇ ಅಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಮುಂದಾಗಿದೆ.
ಬೇರೆ ರಾಜ್ಯದ ಜನ ಕಷ್ಟದಲ್ಲಿದ್ದಾಗ ಪರಿಹಾರ ಕೊಡುವುದು ತಪ್ಪಲ್ಲ. ಆದರೆ ತಮ್ಮ ಪಕ್ಷದ ನಾಯಕನ ಮುಖ ನೋಡಿ ಪರಿಹಾರ ಕೊಡುವ ಇವರಿಗೆ ನಮ್ಮ ರಾಜ್ಯದ ಜನ ಬೀದಿ ಪಾಲಾಗಿರುವುದು ಕಣ್ಣಿಗೆ ಕಾಣುವುದಿಲ್ಲವಾ..? ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಯಾಕೆ ಮನೆ ಕಟ್ಟಿ ಕೊಡುತ್ತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಲಾಭ ಪಡೆದುಕೊಳ್ಳುವಲ್ಲಿ ಬ್ಯುಸಿ ಆಗಿದ್ದಾರೆ. ತಾವೂ ಕಬಳಿಸಿದ ಆಸ್ತಿಯ ಸುರಕ್ಷತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಶಿರೂರು ದುರಂತದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಅಧಿವೇಶನದ ಉದ್ಧಕ್ಕೂ ಆರೋಪ ಪ್ರತ್ಯಾರೋಪಗಳೇ ಆಯ್ತು ಎಂದು ಸರ್ಕಾರದ ವಿರುದ್ಧ ಸ್ವಾಮೀಜಿ ಹರಿಹಾಯ್ದಿದ್ದಾರೆ.