ಸುದ್ದಿಒನ್, ಚಿತ್ರದುರ್ಗ, ಮೇ. 20 : ನೀರು ಅತ್ಯಂತ ಅಮೂಲ್ಯವಾದ ಸಂಪತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ನೀರನ್ನು ಅತಿಯಾಗಿ ಪೋಲು ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ದಾವಣಗೆರೆಯ ಶ್ರೀ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
‘ಸುದ್ದಿಒನ್ ಕನ್ನಡ’ ವಾಹಿನಿಯು ಹಮ್ಮಿಕೊಂಡಿರುವ “ನೀರು ಉಳಿಸಿ, ನೆಲದ ಋಣ ತೀರಿಸಿ” ವಿಶೇಷ ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ನೀರಿನ ಪೋಲು ತಡೆಗಟ್ಟಲು ಮನವಿ:
ದೇವರು ನಮಗೆ ಕೊಟ್ಟಿರುವ ಶ್ರೇಷ್ಠ ವರವೆಂದರೆ ನೀರು. ಇಂದು ನಗರಾಭಿವೃದ್ಧಿ ಹಾಗೂ ಆಧುನಿಕ ಸೌಲಭ್ಯಗಳಾದ ಬೋರ್ವೆಲ್ ಮತ್ತು ಪ್ರತಿ ಮನೆಗೆ ನಲ್ಲಿಗಳ ಸಂಪರ್ಕ ಬಂದ ಮೇಲೆ ಜನರಿಗೆ ನೀರಿನ ಮಿತಬಳಕೆಯ ಅರಿವು ಕಡಿಮೆಯಾಗಿದೆ. ಸಾರ್ವಜನಿಕ ನಲ್ಲಿಗಳಲ್ಲಿ ನೀರು ಪೋಲಾಗುತ್ತಿದ್ದರೂ ಅದನ್ನು ಬಂದ್ ಮಾಡುವ ಕಾಳಜಿ ಯಾರಿಗೂ ಇಲ್ಲದಂತಾಗಿದೆ. ಮುಂಬರುವ ಬೇಸಿಗೆ ದಿನಗಳಲ್ಲಿ ಎದುರಾಗಲಿರುವ ನೀರಿನ ಭೀಕರ ಸಮಸ್ಯೆಯನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸ್ವಾಮೀಜಿ ನುಡಿದರು.
ದುಬೈ ಪ್ರವಾಸದ ಅನುಭವ ಹಂಚಿಕೊಂಡ ಶ್ರೀಗಳು:
ತಮ್ಮ ದುಬೈ ಪ್ರವಾಸದ ದಿನಗಳನ್ನು ನೆನಪಿಸಿಕೊಂಡ ಶ್ರೀಗಳು, “ದುಬೈನಲ್ಲಿ ಕೇವಲ 2 ರೂಪಾಯಿಗೆ ಪೆಟ್ರೋಲ್ ಸಿಗುತ್ತದೆ, ಆದರೆ ಒಂದು ಲೀಟರ್ ಕುಡಿಯುವ ನೀರಿಗೆ ನಾವು 150 ರೂಪಾಯಿ ನೀಡಬೇಕಾಯಿತು. ಅಲ್ಲಿ ಸಮುದ್ರದ ನೀರನ್ನು ಫಿಲ್ಟರ್ ಮಾಡಿ ದೈನಂದಿನ ಬಳಕೆಗೆ ಉಪಯೋಗಿಸುತ್ತಾರೆ ಹಾಗೂ ಕುಡಿಯುವ ನೀರನ್ನು ಭಾರತ ಸೇರಿದಂತೆ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿ ನಮ್ಮ ದೇಶ ಹಾಗೂ ರಾಜ್ಯಕ್ಕೆ ಬರುವುದು ಬೇಡ” ಎಂದರು. ಚಿತ್ರದುರ್ಗದಂತಹ ಮಳೆ ಆಶ್ರಿತ ಜಿಲ್ಲೆಗಳಲ್ಲಿ ಮಳೆಯಾಗದಿದ್ದರೆ ಜನರು ಅನುಭವಿಸುವ ಕಷ್ಟಗಳನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ ಎಂದು ಅವರು ನೆನಪಿಸಿದರು.
ಆಸ್ತಿಗಿಂತ ಪ್ರಕೃತಿ ಮುಖ್ಯ:
ನಾವು ಮುಂದಿನ ಜನಾಂಗಕ್ಕೆ ಕೇವಲ ಹಣ ಅಥವಾ ಆಸ್ತಿ ಮಾಡಿ ಇಡಬೇಕಾಗಿಲ್ಲ. ಅದರ ಬದಲಾಗಿ ಶುದ್ಧವಾದ ನೀರು ಮತ್ತು ಉತ್ತಮ ಪ್ರಕೃತಿಯನ್ನು ಉಳಿಸಿ ಹೋಗುವುದು ಅತ್ಯಂತ ಮುಖ್ಯವಾಗಿದೆ. ಆಹಾರವಿಲ್ಲದೆ ಒಂದು ದಿನ ಬದುಕಬಹುದು, ಆದರೆ ನೀರಿಲ್ಲದೆ ಜೀವಿಸಲು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ನೀರನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗಾಗಿ ನೀರನ್ನು ಸಂರಕ್ಷಿಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
‘ಸುದ್ದಿಒನ್’ ಆನ್ಲೈನ್ ನ್ಯೂಸ್ ಪೋರ್ಟಲ್ ವತಿಯಿಂದ ಹಮ್ಮಿಕೊಂಡಿರುವ ಈ ಸಾಮಾಜಿಕ ಕಳಕಳಿಯ ಅಭಿಯಾನವನ್ನು ಸಾರ್ವಜನಿಕರು ಯಶಸ್ವಿಗೊಳಿಸಬೇಕು ಮತ್ತು ನೀರಿನ ಉಳಿತಾಯವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















