Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಸವರಾಜ ಮುದನೂರ್ ಕಂಡಂತೆ ಚಿತ್ರದುರ್ಗದ ‘ಹಿಂದೂ ಮಹಾಗಣಪತಿ’ ಮಹೋತ್ಸವದ ರೋಚಕ ಪಯಣ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 02 : ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಇಂದು ಲಕ್ಷಾಂತರ ಭಕ್ತರು ಭಕ್ತಿಪರವಶರಾಗಿ ಪಾಲ್ಗೊಳ್ಳುವ ಮಹಾಜಾತ್ರೆಯಾಗಿ ಬೆಳೆದು ನಿಂತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದತೆಯ ಬೆಸುಗೆಯಾಗಿ ಬೆಳೆದಿರುವ ಈ ಗಣೇಶೋತ್ಸವವು ಇಂದು ಮಧ್ಯಕರ್ನಾಟಕದ ವೈಭವೋಯುತ ನಾಡಹಬ್ಬದ ರಂಗು ಪಡೆದುಕೊಂಡಿದೆ. ಶೂನ್ಯದಿಂದ ಆರಂಭವಾಗಿ ನಾಡಿನ ಗಮನ ಸೆಳೆಯುವ ಮಟ್ಟಕ್ಕೆ ಸಾಗಿಬಂದ ಈ ಐತಿಹಾಸಿಕ ಪಯಣದ ರೋಚಕ ಮೆಲುಕು ಇಲ್ಲಿದೆ.

ಹಿರಿಯ ಪತ್ರಕರ್ತರಾದ ಬಸವರಾಜ ಮುದನೂರ್ ಅವರ ಚಿತ್ರದುರ್ಗ ಹಿಂದೂ ಮಹಾಗಣಪತಿ ಕುರಿತ ವಿಶೇಷ ಲೇಖನ ಸುದ್ದಿ ಒನ್ ಓದುಗರಿಗಾಗಿ…

ಅದು 2007. ಚಿತ್ರದುರ್ಗದ ಅಯಣ್ಣನಪೇಟೆಯಲ್ಲಿದ್ದ ಸಂಘ ಪರಿವಾರದ ಕಚೇರಿಯಲ್ಲಿ ಹಿಂದೂಪರ ಸಂಘಟನೆಯ ತರುಣರು ಮೊದಲನೇ ವರ್ಷದ ಗಣಪತಿ ಪ್ರತಿಷ್ಠಾಪಿಸಿದ್ದರು. 2008-09ರಲ್ಲಿ ಪೇಟೆ ಆಂಜನೇಯಸ್ವಾಮಿ ಮಂದಿರದಲ್ಲಿ, 2010ರಲ್ಲಿ ಅದೇ ಗಣಪತಿ ಡಿಹೆಚ್ ಓ ಕಚೇರಿ ಮುಂಭಾಗದಲ್ಲಿ ಸ್ಥಳಾಂತರ ಆಯಿತು. ಜನರಿಲ್ಲದ್ದನ್ನು ಕಂಡ ಪೊಲೀಸರು ‘ನಿಮ್ಮ ಕುಟುಂಬಸ್ಥರನ್ನಾದರೂ ಉತ್ಸವಕ್ಕೆ ಕರೆತನ್ನಿ’ ಎಂದು ಆಯೋಜಕರಿಗೆ ಗೇಲಿ‌ ಮಾಡಿದ್ದೂ ಉಂಟು.
2011ಕ್ಕೆ ಭಜರಂಗದಳ, ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ಒನಕೆ ಓಬವ್ವ ಸ್ಟೇಡಿಯಂ ರಸ್ತೆಯ ಆಂಜನೇಯ ದೇಗುಲ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ‘ಹಿಂದೂ ಮಹಾಗಣಪತಿ’ ಎಂಬ ನಾಮಾಂಕಿತದಿ ನಾಡಿನ ಗಣೇಶೋತ್ಸವ ಗಮನ ಸೆಳೆಯಿತು.

ಭಜರಂಗದಳದ ವಿಭಾಗೀಯ ಸಂಚಾಲಕರಾಗಿದ್ದ ಜಿತೇಂದ್ರ ಹುಲಿಕುಂಟೆ, ಓಂಕಾರ್ ಮತ್ತಿತರೆ ಯುವಕರು ಗಣೇಶೋತ್ಸವಕ್ಕೆ ಹರಸಾಹಸ ಪಡುತ್ತಿದ್ದ ಕಾಲವದು. ಸಂಘ ಪರಿವಾರದ ಭೀಷ್ಮ ಖ್ಯಾತಿಯ ಜಾ ರಾ ರಾಮಮೂರ್ತಿ ಬೆನ್ನೆಲುಬಾಗಿದ್ದರು. ಮಹಾ ಗಣಪತಿ ಪ್ರತಿಷ್ಠಾಪನೆಗೆ ತಂದಾಗ ಇಳಿಸಿಕೊಳ್ಳಲು ದಾರಿ ಹೋಕರನ್ನು ಕರೆಯುವ ಪರಿಸ್ಥಿತಿ. ಗಣೇಶೋತ್ಸವ ಕಾರ್ಯಕ್ರಮ, ಶೋಭಾಯಾತ್ರೆ ಹಾಗೂ ವಿಸರ್ಜನೆಗೆ ಯುವಕರನ್ನು ಜೋಡಿಸಲು ಹರಸಾಹಸ ಪಡಬೇಕಿತ್ತು. ಕೆಲ ಪತ್ರಕರ್ತರು ಹಾಗೂ ಪೊಲೀಸರೇ ಹಿಂದೂ ಮಹಾಗಣಪತಿ ಉತ್ಸವಕ್ಕೆ ಐನೂರರ ಲೆಕ್ಕದಲ್ಲಿ ಮೊದಲ ಕಾಣಿಕೆ ನೀಡಿ ‘ಮಹಾದಾನಿ’ಗಳಾಗಿದ್ದು ವಿಶೇಷ.

ಶೋಭಾಯಾತ್ರೆಗೆ DSS ಜಯಣ್ಣ ಚಾಲನೆಯೇ ಶುಭಂಕರ : 

ಚಿತ್ರದುರ್ಗ ಎಡಪಂಥೀಯ ಚಿಂತನೆಗಳ ಕೇಂದ್ರಸ್ಥಾನವೇ ಆಗಿದ್ದ ಕಾಲಘಟ್ಟವದು. ಒಂದು ಕಡೆ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಗಮನ ಸೆಳೆದಿದ್ದ ಮುರುಘಾ ಶರಣರು. ಮತ್ತೊಂದು ಕಡೆ ಪ್ರಗತಿಪರ ಸಾಹಿತಿಗಳು, ಪತ್ರಕರ್ತರು, ಚಳುವಳಿಗಾರರ ಕಾರ್ಯಸ್ಥಾನವೇ ದುರ್ಗ ಆಗಿತ್ತು. ಹಿಂದೂ ಸಂಘಟನೆಯ ತರುಣರು ಅದೇನು ಮೋಡಿ ಮಾಡಿದರೋ ಗೊತ್ತಿಲ್ಲ. ಡಿಎಸ್ ಎಸ್ ಜಯಣ್ಣ ಎಂದೇ ಖ್ಯಾತರಾಗಿದ್ದ ಹೋರಾಟಗಾರ, ನೀರಾವರಿ ಹೋರಾಟ ಸಮಿತಿ ಅದ್ಯಕ್ಷ ಎಂ ಜಯಣ್ಣ ಅವರಿಂದಲೇ 2011ರ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಉದ್ಘಾಟನೆ ಮಾಡಿಸಿಬಿಟ್ಟರು. ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ ಸ್ವಾಮೀಜಿ, ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸೇರಿ ಇತರೆ ಗಣ್ಯರು ಆಗಮಿಸಿದ್ದು ವಿಶೇಷ.

ಅಂದು ಎಂ ಜಯಣ್ಣ ಅವರು ಮಾತನಾಡಿ ‘ಈ ಯುವಕರ ಪ್ರೀತಿಯ ಒತ್ತಾಯಕ್ಕೆ ಮಣಿದು ಶೋಭಾಯಾತ್ರೆಗೆ ಚಾಲನೆ ನೀಡಿದ್ದೇನೆ. ನಮ್ಮ ಸಿದ್ಧಾಂತದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ಗಣೇಶೋತ್ಸವದಲ್ಲಿ ಸೌಹಾರ್ದತೆ ಕಾಪಾಡಿ, ಸಂವಿಧಾನದನ್ವಯ ಉತ್ಸವ ಆಚರಿಸಿ’ ಎಂಬ ಕಿವಿಮಾತು ಹೇಳಿದ್ದರು. ರಾಮಕೃಷ್ಣಾಶ್ರಮದ ಬ್ರಹ್ಮನಿಷ್ಠಾನಂದ ಶ್ರೀಗಳು ‘ಈ ಉತ್ಸವ ದೊಡ್ಡಮಟ್ಟಕ್ಕೆ ಬೆಳೆದು ನಾಡಿನ ಗಮನ ಸೆಳೆಯಲಿದೆ’ ಎಂದು ಭವಿಷ್ಯ ನುಡಿದಿದ್ದರಲ್ಲದೆ ಗಣೇಶೋತ್ಸವಕ್ಕೆ ಐದು ಸಾವಿರ ರೂಪಾಯಿ ಕಾಣಿಕೆ ಘೋಷಿಸಿದ್ದರು. ಬಹುಷ: ಆ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಉತ್ಸವಕ್ಕೆ ಅದೇ ದೊಡ್ಡ ಮೊತ್ತದ ಕಾಣಿಕೆ ಆಗಿದ್ದೀತು ಅನ್ನಿಸುತ್ತದೆ.

ಅದ್ಯಾವ ಗಳಿಗೆಯಲ್ಲಿ ಡಿಎಸ್ ಎಸ್ ಜಯಣ್ಣ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರೋ ಗೊತ್ತಿಲ್ಲ. ಮಾರನೇ ವರ್ಷದಿಂದಲೇ ಹಿಂದೂ ಮಹಾಗಣಪತಿ ಉತ್ಸವದ ಚಿತ್ರಣವೇ ಬದಲಾಗುತ್ತ ಸಾಗಿತು. ಕಳೆದ ಒಂದು-ಒಂದೂವರೆ ದಶಕದಿಂದ ಹಿಂದೂ ಮಹಾಗಣಪತಿ ಉತ್ಸವ ಇಡೀ ನಾಡಿನ ಗಮನ ಸೆಳೆಯುವ ಮಟ್ಟಕ್ಕೆ ಬೆಳವಣಿಗೆ ಸಾಧಿಸಿದೆ. ಅಂದು ಗಣಪತಿ ಕೂಡಿಸಲು ನಾಲ್ಕು ಜನ ಇಲ್ಲದ ಗಣೇಶೋತ್ಸವಕ್ಕೆ ಈಗ ನಾಲ್ಕು ಸಾವಿರ ಜನ ಪೊಲೀಸರು ಭದ್ರತೆ ಒದಗಿಸುವಂತಾಗಿದೆ. ಪತ್ರಕರ್ತರು, ಪೊಲೀಸರು ನೀಡಿದ ಐನೂರು ರೂಪಾಯಿ ಕಾಣಿಕೆಯೇ ದೊಡ್ಡದೆಂಬ ಗಣೇಶೋತ್ಸವಕ್ಕೆ ಈಗ ಕಾಣಿಕೆ ಹಣ ಹರಿದು ಬರುತ್ತಿದೆ. ಶೋಭಾಯಾತ್ರೆ ಮಹಾಜಾತ್ರೆಯಂತೆಯೇ ನಡೆಯುತ್ತಿದ್ದು ಸಾಗರದಾಚೆಗೂ ಖ್ಯಾತಿ ಗಳಿಸಿದೆ. ಅಗಣಿತ ಜನ ಸೇರಿದರೂ ಸಹ ಯಾವುದೇ ಗದ್ದಲ-ಗಲಭೆಗಳಿಲ್ಲದೆ ಶಾಂತಿಯುತ ಶೋಭಾಯಾತ್ರೆಯ ಪರಂಪರೆ ಸಾಗಿ ಬಂದಿರುವುದು ದುರ್ಗದ ಜನರ ಸೌಹಾರ್ಧತೆ ಹಾಗೂ ಶಾಂತಿಪ್ರಿಯತೆಗೆ ಸಾಕ್ಷಿ.

ಹಿಂದೂ ಮಹಾಗಣಪತಿ ಉತ್ಸವ ದುರ್ಗೋತ್ಸವದಂತೆ ಆಚರಿಸಲ್ಪಡುತ್ತಿದೆ. ಪಕ್ಷಬೇಧ ಮರೆತು ಜನಪ್ರತಿನಿಧಿಗಳು, ಅನೇಕ ರಾಜಕಾರಣಿಗಳು ಸ್ಪರ್ದೆಗೆ ಬಿದ್ದವರಂತೆ ಪಾಲ್ಗೊಳ್ಳುತ್ತಿದ್ದಾರೆ. ಮಾದಾರ ಚನ್ನಯ್ಯ ಶ್ರೀಗಳ ನೇತೃತ್ವದಲ್ಲಿ, ಮುಖಂಡರಾದ ಬದ್ರಿನಾಥ್, ಪ್ರಭಂಜನ್ ಸೇರಿ ವಿಶ್ವ ಹಿಂದೂ ಪರಿಷದ್, ಭಜರಂಗದಳದ ಅನೇಕರು ಉತ್ಸವಕ್ಕೆ ಶ್ರಮಿಸುತ್ತಿದ್ದು ವರ್ಷದಿಂದ‌ ವರ್ಷಕ್ಕೆ ಗಣೇಶೋತ್ಸವ ಹೆಚ್ಚಿನ ಜನಮನ್ನಣೆ ಗಳಿಸುತ್ತಿದೆ. ಚಿತ್ರದುರ್ಗದ ಗಣೇಶೋತ್ಸವ ಮದ್ಯಕರ್ನಾಟಕದ ನಾಡ ಉತ್ಸವದ ರಂಗು ಪಡೆಯುತ್ತಿದೆ. ಉತ್ಸವದಲ್ಲಿ ಸೇರುವ ಜನಸಾಗರ ಎಂಥವರನ್ನೂ ಬೆರಗು ಮೂಡಿಸುವ ಮಹಾಜಾತ್ರೆಯೇ ಸರಿ.

ಈ ವರ್ಷ ಜಯದೇವ ಕ್ರೀಡಾಂಗಣದಲ್ಲಿ ಸ್ವರ್ಣಗಿರಿ ಮಾದರಿ ಮಂಟಪದಲ್ಲಿ ವಿಷ್ಣುವಿನ ಅವತಾರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ. ನಾಳೆ ಅ.3ಕ್ಕೆ ಶೋಭಾಯಾತ್ರೆ ಹಾಗೂ ವಿಸರ್ಜನೆ ಆಯೋಜಿಸಲಾಗಿದೆ. ಇಡೀ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿದ್ದು, ಪ್ರತಿ ವೃತ್ತಗಳಲ್ಲೂ ವಿಶೇಷ ಅಲಂಕಾರ, ವಿದ್ಯುತ್ ದೀಪಲಂಕಾರ ಕಣ್ಮನ ಸೆಳೆಯುತ್ತಿದೆ. ಅಕ್ಟೋಬರ್ 2 ಗಾಂಧಿ ಜಯಂತಿ ರಜೆ ದಿನ, ಅಕ್ಟೋಬರ್ 3 ಶೋಭಾಯಾತ್ರೆ, ಅಕ್ಟೋಬರ್ 4 ರವಿವಾರದ ರಜೆ ಇರುವ ಕಾರಣ ಈ ವರ್ಷ ಜನಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ಪೊಲೀಸರ ಮಾಹಿತಿ ಪ್ರಕಾರವೇ ನಾಲ್ಕು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಶೋಭಾಯಾತ್ರೆಗೆ 10ಕ್ಕೂ ಹೆಚ್ಚು ಜನಪದ ಕಲಾಮೇಳಗಳು, ಏಳೆಂಟು ಮ್ಯೂಸಿಕ್ ಸಿಸ್ಟಮ್ ಗಳು ಮೆರಗು ನೀಡಲಿವೆ. ದಾರಿ ಉದ್ದಕ್ಕೂ ವಿವಿಧ ಸಂಘ ಸಂಸ್ಥೆಗಳು ನೀರು ಮತ್ತು ಪ್ರಸಾದ ವ್ಯವಸ್ಥೆ ಕೈಗೊಂಡಿವೆ. ಶೋಭಾಯಾತ್ರೆಗೆ ಕ್ಷಣ ಗಣನೆ ಶುರುವಾಗಿದ್ದು ದುರ್ಗದ ಮಹಾಗಣಪತಿಯ ಭಕ್ತಗಣ ಕಾತುರತೆಯಿಂದ ಕಾದಿದೆ. ಶುಭವಾಗಲಿ, ಶಾಂತಿ- ಸೌಹಾರ್ದತೆಯ ಪರಂಪರೆ ಮುಂದುವರೆಯಲಿ….

ಅಂದಹಾಗೆ ಈ ಹಿಂದೂ ಮಹಾಗಣಪತಿ ಉತ್ಸವದ ವರ್ಷಾಚರಣೆ ನಾನು ದುರ್ಗಕ್ಕೆ ಬಂದು ಎಷ್ಟು ವರ್ಷ ಕಳೆದವು ಎಂಬುದನ್ನು ನೆನಪಿಸುತ್ತದೆ …

-ಬಸವರಾಜ ಮುದನೂರ್,                                      ಹಿರಿಯ ಪತ್ರಕರ್ತರು, ಚಿತ್ರದುರ್ಗ, ಮೊ : 94827 14116

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ : ಶಾಂತಿ-ಸುವ್ಯವಸ್ಥೆಗಾಗಿ ಪೊಲೀಸರಿಂದ ರೂಟ್ ಮಾರ್ಚ್

ಹೆಣ್ಣಾಗಲು ಬಯಸಿದ್ದ ಬಾಲಕ : ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ವಿರೋಧಿಸಿದ್ದ ತಾಯಿಯನ್ನೇ ಕೊಂದ ಪಾಪಿಪುತ್ರ

44 ವರ್ಷಗಳ ಬಳಿಕ ಐತಿಹಾಸಕ ಜಯ: ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಚಿನ್ನದ ಪದಕ!

ಚಿತ್ರದುರ್ಗ ಜಿಲ್ಲಾ ಜವಾಹರ್ ಲಾಲ್ ಮಂಚ್ ಘಟಕದ ನೂತನ ಅಧ್ಯಕ್ಷರಾಗಿ ಜಿ. ದಾದಾಪೀರ್ ಅಧಿಕಾರ ಸ್ವೀಕಾರ

ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗಾಂಧಿ ಜಯಂತಿಗೆ ನಿಜವಾದ ಅರ್ಥ : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್