Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಷ್ಟಾವರಣಗಳು ಮನುಷ್ಯನಿಗೆ ರಕ್ಷಣೆ ನೀಡುತ್ತವೆ : ಡಾ. ಜಿ.ವಿ. ಮಂಜುನಾಥ

---Advertisement---

 

ಸುದ್ದಿಒನ್, ಹೊಳಲ್ಕೆರೆ, ಆ. 6, ಅಷ್ಟಾವರಣಗಳು ವ್ಯಕ್ತಿಯ ಆಧ್ಯಾತ್ಮಿಕ ಹಾಗೂ ನೈತಿಕ ಜೀವನಕ್ಕೆ ರಕ್ಷಣಾ ಕವಚಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕೊಟ್ರೆ ನಂಜಪ್ಪ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಅಭಿಪ್ರಾಯಪಟ್ಟರು.

 

ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಶರಣತತ್ವ ಶಿಕ್ಷಣ ಕಾರ್ಯಗಾರದಲ್ಲಿ ಗುರುಲಿಂಗ ಜಂಗಮ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಬಸವಣ್ಣನವರ ಶರಣ ಧರ್ಮವು ಮಾನವೀಯತೆ, ಸಮಾನತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಪ್ರತಿಪಾದಿಸುವ ವಿಶ್ವಮಾನವ ಧರ್ಮವಾಗಿದೆ. ಗುರು-ಲಿಂಗ-ಜಂಗಮ ತತ್ವಗಳ ಮಹತ್ವವನ್ನು ವಿವರಿಸುತ್ತಾ ಅಷ್ಟಾವರಣಗಳು ವ್ಯಕ್ತಿಯ ಅಂತರಂಗದ ಬದುಕಿಗೆ ಪ್ರೇರಕವಾಗುತ್ತವೆ. ಶರಣರ ವಚನಗಳಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯ, ಸಮಾನತೆ, ಸೌಹಾರ್ದತೆ ಮತ್ತು ವ್ಯಕ್ತಿತ್ವ ವಿಕಾಸದ ಸಂದೇಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ. ಶರಣ ಸಾಹಿತ್ಯವು ಕೇವಲ ಭಕ್ತಿಪರ ಸಾಹಿತ್ಯವಲ್ಲ, ಅದು ಸಮಾಜ ಪರಿವರ್ತನೆಗೆ ಪ್ರೇರಣೆಯಾದ ಮಹತ್ವದ ಚಳುವಳಿಯಾಗಿದೆ ಎಂದರು.

 

ಇದೇ ಸಂದರ್ಭದಲ್ಲಿ ಧಾರವಾಡದ ಚೆನ್ನಬಸವ ಮಹಾಸ್ವಾಮಿಗಳು ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರ ವಿಷಯ ಕುರಿತು ಆಧ್ಯಾತ್ಮಿಕ ಮಹತ್ವದ ಕುರಿತು ಉಪನ್ಯಾಸ ನೀಡುತ್ತಾ, ವಿಭೂತಿ ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸಂಕೇತಿಸುತ್ತದೆ, ರುದ್ರಾಕ್ಷಿ ಭಕ್ತಿಯ ಏಕಾಗ್ರತೆಯನ್ನು ವೃದ್ಧಿಸುತ್ತದೆ ಮತ್ತು ಮಂತ್ರವು ಅಂತರಂಗವನ್ನು ಶಿವಚಿಂತನೆಯಲ್ಲಿ ಸ್ಥಿರಗೊಳಿಸುವ ಶಕ್ತಿಯಾಗಿದೆ. ಅಷ್ಟಾವರಣಗಳ ಆಚರಣೆ ವ್ಯಕ್ತಿಯನ್ನು ಸತ್ಯ, ಶಾಂತಿ ಮತ್ತು ಧರ್ಮದ ಮಾರ್ಗದಲ್ಲಿ ನಡೆಸುತ್ತವೆ ಎಂದು ಅವರು ನುಡಿದರು.

 

ಸಾಹಿತಿ ನಿರಂಜನ ದೇವರಮನೆ ಪಾದೋದಕ ಮತ್ತು ಪ್ರಸಾದ ವಿಷಯ ಕುರಿತು ಉಪನ್ಯಾಸ ನೀಡುತ್ತಾ, ಪಾದೋದಕವು ಭಕ್ತಿಯಲ್ಲಿ ವಿನಯ, ಶರಣಾಗತಿ ಮತ್ತು ಆತ್ಮಶುದ್ಧಿಯನ್ನು ಬೆಳೆಸುವ ತತ್ತ್ವವಾಗಿದ್ದು, ಪ್ರಸಾದವು ಸಮಾನತೆ, ಹಂಚಿಕೆ ಮತ್ತು ದಾಸೋಹದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣಧರ್ಮದಲ್ಲಿ ಪಾದೋದಕ ಮತ್ತು ಪ್ರಸಾದವು ಕೇವಲ ಧಾರ್ಮಿಕ ಆಚರಣೆಯ ಭಾಗವಲ್ಲ, ಮಾನವೀಯತೆ, ಸಹಬಾಳ್ವೆ ಮತ್ತು ಪರಸ್ಪರ ಪ್ರೀತಿ-ವಿಶ್ವಾಸವನ್ನು ಬಲಪಡಿಸುವ ಜೀವನ ಮೌಲ್ಯಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

 

ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಮಹಾಸ್ವಾಮಿಗಳು ಶರಣ ತತ್ವ ಶಿಕ್ಷಣ ಕಾರ್ಯಾಗಾರಕ್ಕೆ ಆಗಮಿಸಿ ಮಾತನಾಡುತ್ತಾ, ಬಸವಣ್ಣನವರ ಶರಣ ಧರ್ಮವು ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಶ್ರೇಷ್ಠ ಜೀವನ ಮಾರ್ಗವಾಗಿದೆ ಎಂದು ತಿಳಿಸಿದರು.

 

ಅಷ್ಟಾವರಣಗಳ ಆಚರಣೆ ವ್ಯಕ್ತಿಯನ್ನು ಸತ್ಪಥದಲ್ಲಿ ನಡೆಸಿ ಆಧ್ಯಾತ್ಮಿಕ ನೆಮ್ಮದಿ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು. ಯುವಜನತೆ ಶರಣರ ವಚನಗಳಲ್ಲಿ ಅಡಕವಾಗಿರುವ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮನೋಭಾವ ವೃದ್ಧಿಯಾಗುತ್ತದೆ ಎಂದು ನುಡಿದರು.

 

ಕಾರ್ಯಕ್ರಮದಲ್ಲಿ ಕಾರ್ಯಾಗಾರದ ಉಸ್ತುವಾರಿ ವಹಿಸಿರುವ ತಿಪ್ಪೇರುದ್ರಸ್ವಾಮಿಗಳು, ಪೂರ್ಣಾನಂದ ಶ್ರೀಗಳು, ಶರಣೆ ಅಕ್ಕಮಹಾದೇವಿತಾಯಿ, ಶಿಬಿರದ ಆಯೋಜಕರು, ವಿವಿಧ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಸಂಶೋಧಕರು, ವಿದ್ಯಾರ್ಥಿಗಳು, ರೈತರು, ಶರಣತತ್ವ ಚಿಂತಕರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಉಪನ್ಯಾಸದ ನಂತರ ನಡೆದ ಸಂವಾದದಲ್ಲಿ ಭಾಗವಹಿಸಿದವರು ಶರಣತತ್ವದ ಸಮಕಾಲೀನ ಪ್ರಸ್ತುತತೆ ಮತ್ತು ಅಷ್ಟಾವರಣಗಳ ಜೀವನೋದ್ದೇಶದ ಮಹತ್ವದ ಕುರಿತು ಚರ್ಚಿಸಿದರು. ಮಧ್ಯಾಹ್ನ ಪ್ರಸಾದ ನಂತರ ಲಿಂಗಾಚಾರ, ಸದಾಚಾರ ಹಾಗೂ ಶಿವಾಚಾರ ವಿಷಯ ಕುರಿತು ಚಿಕ್ಕಮಗಳೂರಿನ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಹೆಚ್. ಗಂಗಾಧರಪ್ಪ, ಭದ್ರಾವತಿಯ ರಾಷ್ಟ್ರೀಯ ಬಸವದಳದ ಜ್ಯೋತಿ ಸದಾನಂದ ಅವರುಗಳು ವಿಷಯ ಕುರಿತು ಮಾತನಾಡಿದರು. ನಂತರ ಗಣಾಚಾರ, ಭೃತ್ಯಾಚಾರ ವಿಷಯ ಕುರಿತು ಹೊಸದುರ್ಗದ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಪಿ. ಓಂಕಾರಪ್ಪ ಅವರು ವಿಷಯ ಮಂಡನೆ ಮಾಡಿದರು.

 

ನಾಳೆ ಅಂದರೆ 7-8-2026ರ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ಬಿ.ಕೋಡಿಹಳ್ಳಿ ಭೃಂಗೇಶ್ವರ ಮಹಾಮಠದ ಬಸವಭೃಂಗೇಶ್ವರ ಮಹಾಸ್ವಾಮಿಗಳು ನಡೆಸಿಕೊಡುವರು. ನಂತರ ಭಕ್ತ, ಮಹೇಶ ವಿಷಯ ಕುರಿತು ಹೊಸದುರ್ಗ ಬಸವಾಶ್ರಮದ ಅಕ್ಕಮಹಾದೇವಿ ತಾಯಿ, ಪ್ರಸಾದಿ, ಪ್ರಾಣಲಿಂಗಿ ವಿಷಯ ಕುರಿತು ಬಸವಮುರುಗೇಂದ್ರ ಸ್ವಾಮಿಗಳು ಮುರುಘಾಮಠ, ಶರಣ, ಐಕ್ಯ ಕುರಿತು ಉಳವಿಯ ಬಸವಲಿಂಗಮೂರ್ತಿ ಮಹಾಸ್ವಾಮಿಗಳು ವಿಷಯ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಹಾಗೆಯೇ ಮಧ್ಯಾಹ್ನ ಪ್ರಸಾದದ ನಂತರ ಸಾಮೂಹಿಕ ಚರ್ಚೆ ಕಾರ್ಯಾಗಾರದವರಿಂದ, ಪರಿಸರ ಗೀತೆ, ಗುರು ಕರಣ ತ್ರಿವಿಧಿ ಸಾಮೂಹಿಕ ಪಠಣ ಇತ್ಯಾದಿ ಕಾರ್ಯಕ್ರಮಗಳು ಜರುಗುವವು ಎಂದು ಸಂಘಟಕರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now