ಚಿತ್ರದುರ್ಗ. ಆ.06: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಕೈಬಿಡಲಾಗಿದ್ದ 8 ಕೆರೆಗಳನ್ನು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ತೀರುವಳಿ ಪಡೆದು, ಸೂಕ್ತ ಶಿಫಾರಸ್ಸಿನೊಂದಿಗೆ ವಿಸ್ತøತ ಯೋಜನಾ ವರದಿ ಸಲ್ಲಿಸುವಂತೆ ಜಲಸಂಪನ್ಮೂಲ ಇಲಾಖೆಯು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈ ಬಿಡಲಾಗಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 8 ಕೆರೆಗಳನ್ನು ಮತ್ತೆ ಯೋಜನೆಗೆ ಸೇರಿಸಲು ಚಿತ್ರದುರ್ಗ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಅವರ ಪ್ರಯತ್ನ ಫಲ ನೀಡಿದೆ.
ರೈತರ ಹಿತದೃಷ್ಠಿಯಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ‘ಆಲ್ಕಾನ್ ಕನ್ಸಲ್ಟೆನ್ಸಿ ಇಂಜಿನಿಯರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ವಿಸ್ತøತ ಕ್ಷೇತ್ರ ಸಮೀಕ್ಷೆ ನಡೆಸಿ, ರೂ.102.50 ಕೋಟಿ ಮೊತ್ತದ ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು. ಈ ಅಂದಾಜು ಪಟ್ಟಿಯನ್ನು 2025ರ ಸೆಪ್ಟೆಂಬರ್ 19ರಂದು ನಡೆದ ಅಂದಾಜು ಪರಿಶೀಲನಾ ಸಮಿತಿಯ ಸಭೆಯಲ್ಲೂ ಮಂಡಿಸಲಾಗಿತ್ತು.

ಈ ಕುರಿತು ನಿಯಮಾನುಸಾರ ಸೂಕ್ತ ಪರಿಶೀಲನೆ ನಡೆಸಿ, ನಿಗಮದ ಮಂಡಳಿ ಸಭೆಯಲ್ಲಿ ಮಂಡಿಸಿ ತೀರುವಳಿ (ಅನುಮೋದನೆ) ಪಡೆದುಕೊಂಡು, ಅಂತಿಮ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-4) ಎಲ್.ಲಕ್ಷ್ಮೀ ತಿಳಿಸಿದ್ದಾರೆ.











