ಚೆನ್ನೈ: ಇತ್ತೀಚೆಗೆ ಕರೂರಿನಲ್ಲಿ ಯಾರೂ ಊಹಿಸಲಾರದ ದೊಡ್ಡ ದುರಂತವೇ ನಡೆದು ಹೋಗಿದೆ. ಈ ದುರಂತದಲ್ಲಿ 40 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ನಟ ವಿಜಯ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕಿದ್ದು, ನನ್ನ ಮೇಲೆ ಬೇಕಾದ್ರೆ ಸೇಡು ತೀರಿಸಿಕೊಳ್ಳಿ. ಆದರೆ ನನ್ನ ಅಭಿಮಾನಿಗಳಿಗೆ ತೊಂದರೆಯಾಗುವುದು ಬೇಡ ಎಂದು ಸಿಎಂ ಸ್ಟಾಲಿನ್ ಗೆ ಮನವಿ ಮಾಡಿದ್ದಾರೆ.
ನನ್ನ ಜೀವನದಲ್ಲಿ ಇಂತಹ ನೋವಿನ ದಿನಗಳನ್ನ ಅನುಭವಿಸಿಲ್ಲ. ನಿಜಕ್ಕೂ ಈ ಸಂಗತಿಯಿಂದ ತುಂಬಾ ನೋವಾಗಿದೆ. ಬರೀ ನೋವೇ ತುಂಬಿಕೊಂಡಂತಾಗಿದೆ. ಜನ ನನ್ನ ಮೇಲಿನ ಪ್ರೀತಿಯಿಂದ ನೋಡಲು ಬರುತ್ತಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಯಾವಾಗಲೂ ಚಿರೃಣಿ. ಆದರೆ ಅದಕ್ಕಿಂತ ಮಿಗಿಲಾಗಿ ಜನರ ರಕ್ಷಣೆಯೆ ನನ್ನ ಮೊದಲ ಆದ್ಯತೆ. ನಾನು ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡುತ್ತೇನೆ. ಈ ಘಟನೆ ಹಿಂದಿನ ಸತ್ಯವನ್ನ ಶೀಘ್ರದಲ್ಲಿಯೇ ಬಹಿರಂಗ ಪಡಿಸುತ್ತೇನೆ. ನಾನು ರಾಜಕೀಯವನ್ನು ಬದಿಗಿಟ್ಟು ಜನರ ಸುರಕ್ಷತೆಗಾಗಿ ಸೂಕ್ತವಾದ ಸ್ಥಳವನ್ನು ಆರಿಸಿ, ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದೆ. ಆದರೆ ಏನಾಗಬಾರದು ಎಂದುಕೊಂಡಿದ್ದೆ, ಅದೇ ನಡೆದು ಹೋಗಿದೆ.


ನಾನು ಒಬ್ಬ ಮನುಷ್ಯ. ಘಟನೆಯಲ್ಲಿ ಇಷ್ಟೊಂದು ಜನರಿಗೆ ತೊಂದರೆಯಾದಾಗ ನಾನು ಅಲ್ಲಿಯೇ ಇರಬಹುದಿತ್ತು. ಆದರೆ ನಾನಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಿಳಿದು ಅಲ್ಲಿಂದ ಹೊರಟು ಹೋದೆ. ತನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ. ಆದರೆ ನನ್ನ ಬೆಂಬಲಿಗರಿಗೆ ಏನು ಮಾಡಬೇಡಿ. ನಾನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇರುತ್ತೇನೆ. ನೀವು ನನ್ನ ಮೇಲೆ ಯಾವ ರೀತಿ ಬೇಕಾದರೂ ಕ್ರಮ ಕೈಗೊಳ್ಳಬಹುದು ಎಂದು ಸ್ಟಾಲಿನ್ ಗೆ ಮನವಿ ಮಾಡಿದ್ದಾರೆ.

















