ನಾವು ಧರಿಸುವ ಸ್ಮಾರ್ಟ್ ವಾಚ್ ಅಥವಾ ಫಿಟ್ನೆಸ್ ಬ್ಯಾಂಡ್‌ಗಳ ಬ್ಯಾಟರಿ ಪದೇಪದೇ ಖಾಲಿಯಾಗುವುದು ಸಾಮಾನ್ಯ ಸಮಸ್ಯೆ. ಆದರೆ ಇನ್ನು ಮುಂದೆ ಈ ತಲೆನೋವಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಮಾನವ ದೇಹದ ಬೆವರಿನಿಂದಲೇ ವಿದ್ಯುತ್ ಉತ್ಪಾದಿಸಿ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾಲನೆ ಮಾಡುವ ಹೊಸ ತಂತ್ರಜ್ಞಾನವನ್ನು ಜಪಾನ್‌ನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಟೋಕಿಯೋ ಯುನಿವರ್ಸಿಟಿ ಆಫ್ ಸೈನ್ಸ್‌ನ ಸಹಾಯಕ ಪ್ರಾಧ್ಯಾಪಕ ಇಸಾವೊ ಶಿತಾಂಡಾ ಅವರ ನೇತೃತ್ವದ ಸಂಶೋಧಕ ತಂಡ ಈ ಮಹತ್ವದ ಸಾಧನೆ ಮಾಡಿದೆ. ಮನುಷ್ಯನ ಬೆವರಿನಲ್ಲಿರುವ ‘ಲ್ಯಾಕ್ಟೇಟ್’ ಅಂಶವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ‘ಬಯೋಫ್ಯುಯೆಲ್ ಸೆಲ್’ ಎಂಬ ತಂತ್ರಜ್ಞಾನವನ್ನು ಅವರು ರೂಪಿಸಿದ್ದಾರೆ.
ಇದು ಕೈಗೆ ಅಂಟಿಸಬಹುದಾದ ಸಣ್ಣ ಬ್ಯಾಂಡೇಜ್‌ನಂತೆ ಕಾಣುತ್ತದೆ.
ಈ ಸಾಧನವು ಕೆಲಸ ಮಾಡುವ ವಿಧಾನ ಸರಳ. ವ್ಯಾಯಾಮ ಅಥವಾ ಶಾರೀರಿಕ ಚಟುವಟಿಕೆಗಳ ಸಮಯದಲ್ಲಿ ಹೊರಬರುವ ಬೆವರು ಈ ಸಾಧನವನ್ನು ತಲುಪುತ್ತದೆ. ಅದರಲ್ಲಿರುವ ರಾಸಾಯನಿಕ ಕ್ರಿಯೆಗಳ ಮೂಲಕ ಬೆವರು ವಿದ್ಯುತ್ ಆಗಿ ಪರಿವರ್ತನೆಗೊಳ್ಳುತ್ತದೆ. ಸಂಶೋಧಕರ ಪ್ರಕಾರ, ಈ ಸಾಧನವು ಬ್ಲೂಟೂತ್ ಮೂಲಕ ಡೇಟಾ ರವಾನಿಸಲು ಬೇಕಾದಷ್ಟು ಶಕ್ತಿಯನ್ನು ನೀಡಬಲ್ಲದು. ಪರೀಕ್ಷಾ ಹಂತದಲ್ಲಿ ಇದು ಸ್ಮಾರ್ಟ್ ವಾಚ್ ಅನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಮಾಡಿದೆ.

ಈ ಆವಿಷ್ಕಾರದಿಂದ ಭವಿಷ್ಯದಲ್ಲಿ ಕ್ರೀಡಾಪಟುಗಳು ಹಾಗೂ ರೋಗಿಗಳ ಆರೋಗ್ಯ ಮೇಲ್ವಿಚಾರಣೆಗೆ ಬಳಸುವ ಸೆನ್ಸರ್‌ಗಳಿಗೆ ಪ್ರತ್ಯೇಕ ಬ್ಯಾಟರಿಗಳ ಅವಶ್ಯಕತೆ ಕಡಿಮೆಯಾಗಲಿದೆ. ಬೆವರಿನಿಂದಲೇ ಕಾರ್ಯನಿರ್ವಹಿಸುವ ಈ ತಂತ್ರಜ್ಞಾನ ಕಡಿಮೆ ವೆಚ್ಚದಾಯಕವಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ.“ಬೆವರು ಸುರಿಸಿದರೆ ಫಲ ಸಿಗುತ್ತದೆ” ಎಂಬ ಮಾತು ಈಗ ತಂತ್ರಜ್ಞಾನದಲ್ಲಿಯೂ ನಿಜವಾಗುತ್ತಿದೆ!


















